ಇತ್ತೀಚಿನ ಸುದ್ದಿ
ಸ್ಮಾರ್ಟ್ ಮೀಟರ್ ಅನುಷ್ಠಾನಕ್ಕೆ ಬಿಜೆಪಿ ಅಡ್ಡಗಾಲು: ಕೇಂದ್ರ ಇಂಧನ ಸಚಿವ ಖಟ್ಟರ್ಗೆ ಕೆಪಿಸಿಸಿಯಿಂದ ಲಿಖಿತ ದೂರು
27/05/2025, 23:40

ಬೆಂಗಳೂರು(reporterkarnataka.com): ಸ್ಮಾರ್ಟ್ ಮೀಟರ್ ಅಳವಡಿಕೆಗೆ ಕೇಂದ್ರ ಸರ್ಕಾರ 3 ತಿಂಗಳ ಕಾಲಮಿತಿ ವಿಧಿಸಿ ಒತ್ತಡ ಹೇರುತ್ತಿದ್ದರೆ, ರಾಜ್ಯ ಬಿಜೆಪಿ ನಾಯಕರು ಆ ಯೋಜನೆ ಅನುಷ್ಠಾನಗೊಳಿಸಲು ಅಡ್ಡಗಾಲು ಹಾಕುತ್ತಿದ್ದಾರೆ. ಈ ವಿಷಯವಾಗಿ ಕೇಂದ್ರ ಇಂಧನ ಸಚಿವ ಮನೋಹರ್ ಲಾಲ್ ಖಟ್ಟರ್ ಅವರಿಗೆ ಲಿಖಿತ ದೂರು ನೀಡುವುದಾಗಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ಧಿಗೋಷ್ಠಿ ನಡೆಸಿದ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹಾಗೂ ಕೆಪಿಸಿಸಿ ವಕ್ತಾರರಾದ ಎಂ. ಲಕ್ಷ್ಮಣ್, ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ವಿಚಾರವಾಗಿ ಬಿಜೆಪಿ-ಜೆಡಿಎಸ್ ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿದರು.
“ಸ್ಮಾರ್ಟ್ ಮೀಟರ್ನಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆದಿದೆ ಎಂದು ಪ್ರತಿಪಕ್ಷಗಳ ನಾಯಕರು ಆರೋಪಿಸುವ ಮೂಲಕ ರಾಜ್ಯದ ಜನರ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೇಂದ್ರದ ಯೋಜನೆ ರಾಜ್ಯದಲ್ಲಿ ಅನುಷ್ಠಾನಗೊಳ್ಳದಂತೆ ಬಿಜೆಪಿ ನಾಯಕರೇ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷ ತಕ್ಕ ಉತ್ತರ ಕೊಡುತ್ತದೆ. ಅಶ್ವತ್ಥ ನಾರಾಯಣ ಅವರ ಸುಳ್ಳು ಪ್ರಚಾರದ ವಿರುದ್ಧ ಕೆಪಿಸಿಸಿ ವತಿಯಿಂದ ಕೇಂದ್ರ ಇಂಧನ ಸಚಿವ ಖಟ್ಟರ್ ಅವರಿಗೆ ಪತ್ರ ಬರೆಯುವ ಮೂಲಕ ಲಿಖಿತ ದೂರನ್ನು ನೀಡಲಿದೆ,”ಎಂದು ರಮೇಶ್ ಬಾಬು ತಿಳಿಸಿದರು.
“ಡಾ.ಅಶ್ವತ್ಥನಾರಾಯಣ ಅವರು ಇಂಧನ ಇಲಾಖೆಯ ಮೇಲೆ ಮಾಡಿರುವ ಆರೋಪವನ್ನು ಎರಡು ದೃಷ್ಟಿಕೋನಗಳಲ್ಲಿ ನೋಡಬೇಕಾಗಿದೆ. ರಾಜ್ಯದಲ್ಲಿ ಬೇನಾಮಿ ವ್ಯವಹಾರಗಳಿಗೆ ಖ್ಯಾತಿ ಪಡೆದಿರುವ ಅವರು ಟೆಂಡರ್ ಪಡೆಯಲು ಪ್ರಯತ್ನಿಸಿದ್ದರಾ? ಅದು ಸಿಗದ ಕಾರಣಕ್ಕೆ ಆರೋಪ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಇದೆ. ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಈ ರಾಜ್ಯ ಕಂಡ ಯಶಸ್ವಿ ಸಚಿವರು. ಅಲ್ಪಸಂಖ್ಯಾತ ಸಮುದಾಯದ ನಾಯಕ ಜಾರ್ಜ್ ಅವರ ಮೇಲೆ ಬಿಜೆಪಿ ನಾಯಕರು ನಿರಂತರವಾಗಿ ಸುಳ್ಳು ಆರೋಪ ಮಾಡುತ್ತಿರುವುದೇಕೆ?,”ಎಂದು ಪ್ರಶ್ನಿಸಿದರು.
“ಅಶ್ವತ್ಥನಾರಾಯಣ ಅವರು ತಮ್ಮ ಊಹೆಗೆ ತಕ್ಕಂತೆ 900 ರೂ.ಗೆ ಸ್ಮಾರ್ಟ್ ಮೀಟರ್ ಸಿಗುತ್ತದೆ ಎಂದು ಹೇಳುತ್ತಿದ್ದಾರೆ. ಇದು ಕೇಂದ್ರ ಸರ್ಕಾರ ಪ್ರತಿ ಮೀಟರ್ಗೆ ನೀಡುವ ಸಬ್ಸಿಡಿ ಮೊತ್ತ. 27 ರಾಜ್ಯಗಳು ಈ ಸಬ್ಸಿಡಿ ಪಡೆದು ಸ್ಮಾರ್ಟ್ ಮೀಟರ್ ಅಳವಡಿಸುತ್ತಿವೆ. ಇದು ಮೀಟರ್ ಮೊತ್ತ ಅಲ್ಲ. ಸಬ್ಸಿಡಿ ಮೊತ್ತವನ್ನು ಮೀಟರ್ ಮೊತ್ತ ಎಂದು ಹೇಳಿ ಜನರ ಕಿವಿಗೆ ಚೆಂಡುಹೂ ಮುಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಕೇಂದ್ರ ಇಂಧನ ಪ್ರಾಧಿಕಾರದ ನಿರ್ದೇಶನದಂತೆ 2021-22 ನೇ ಸಾಲಿನಲ್ಲಿ ಆರ್ಡಿಎಸ್ (RDSS- Revamped Distribution Sector Scheme) ಯೋಜನೆ ರೂಪಿಸಿದ್ದು, ಕೇಂದ್ರದ ಇಂಧನ ಸಚಿವಾಲಯವು ಮಾರ್ಗಸೂಚಿ ಹೊರಡಿಸಿ, ವಿದ್ಯುತ್ ಸರಬರಾಜು ತಮ್ಮ ಸಬ್ಸಿಡಿ ಸೇರಿದಂತೆ ಎಲ್ಲಾ ಬಾಕಿಗಳನ್ನು ಪಾವತಿಸಿದ್ದರೆ ಸ್ಮಾರ್ಟ್ ಮೀಟರ್ ಅಳವಡಿಸಲು ಕೇಂದ್ರದಿಂದ ಪ್ರತಿ ಮೀಟರ್ಗೆ ಗರಿಷ್ಠ 900 ರೂ. ಅಥವಾ ಮೀಟರ್ ದರದ ಶೇ. 15ರಷ್ಟನ್ನು ಸಬ್ಸಿಡಿಯಾಗಿ ನೀಡುವುದಾಗಿ ಹೇಳಿತ್ತು. ಅದರಂತೆ ದೇಶದ ಇತರೆ ರಾಜ್ಯಗಳು ಯೋಜನೆಯಡಿ, ಏಕಕಾಲದಲ್ಲಿ ಎಲ್ಲಾ ಗ್ರಾಹಕರ ಸ್ಥಾಪನಗಳಿಗೂ ಸ್ಮಾರ್ಟ್ ಮೀಟರ್ ಅಳವಡಿಸಿದ್ದವು. ಆದರೆ, ನಮ್ಮ ರಾಜ್ಯ ಆಗ ಯೋಜನೆ ಅಳವಡಿಸಿಕೊಂಡಿರಲಿಲ್ಲ. ಬಿಜೆಪಿ ಸರ್ಕಾರ ತಮ್ಮ ಅವಧಿಯಲ್ಲಿ ಕೇಂದ್ರಕ್ಕೆ ಪತ್ರ ಬರೆದು ಆರ್ ಡಿಎಸ್ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಅದನ್ನು ಮಾಡಿದರೆ ರೈತರಿಗೆ ವಾರ್ಷಿಕವಾಗಿ ನೀಡುತ್ತಿರುವ ಉಚಿತ ವಿದ್ಯುತ್ ಯೋಜನೆಯನ್ನು ನಿಲ್ಲಿಸಬೇಕಾಗುತ್ತದೆ ಎಂದು ಕೇಂದ್ರಕ್ಕೆ ಕಾರಣ ತಿಳಿಸಿತ್ತು. ಈಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಲ್ಲದ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಬಿಜೆಪಿಯರವೇ ಉತ್ತರಿಸಬೇಕು ಎಂದರು.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು 2024ರ ಫೆಬ್ರವರಿ 6 ಮತ್ತು ಮಾರ್ಚ್ 6ರಂದು ಹೊರಡಿಸಿದ್ದ ನಿಯಮಾವಳಿ ಪ್ರಕಾರ ರಾಜ್ಯದಲ್ಲಿ ಎಲ್ಲ ತಾತ್ಕಾಲಿಕ ಸ್ಥಾಪನಗಳು ಹಾಗೂ ಹೊಸ ಸ್ಥಾಪನಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಸೂಚಿಸಿತ್ತು. ಅದರಂತೆ ಕೆಟಿಪಿಪಿ ಕಾಯ್ದೆ ಅನುಸಾರ 2024ರ ಸೆಪ್ಟೆಂಬರ್ 26ರಂದು ಟೆಂಡರ್ ಕರೆಯಲಾಗಿತ್ತು. ಸ್ಮಾರ್ಟ್ಮೀಟರ್ ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ. ಈ ಬಗ್ಗೆ ಇಂಧನ ಸಚಿವರು ಸ್ಪಷ್ಟಪಡಿಸಿದ್ದಾರೆ,”ಎಂದು ರಮೇಶ್ ಬಾಬು ತಿಳಿಸಿದರು.
“900 ರೂಪಾಯಿಗೆ ಸ್ಮಾರ್ಟ್ ಮೀಟರ್ ಕೊಡಿಸಲಿ: ಲಕ್ಷ್ಮಣ್*
ಕೆಪಿಸಿಸಿ ವಕ್ತಾರರಾದ ಎಂ. ಲಕ್ಷ್ಮಣ್ ಮಾತಾಡಿ, “ಅಶ್ವತ್ಥ ನಾರಾಯಣ ಅವರು 15,698 ಕೋಟಿ ಹಗರಣ ಎನ್ನುತ್ತಿದ್ದಾರೆ. ಅದು ಹೇಗೆ ಎಂದು ಅವರೇ ಹೇಳಬೇಕು. ಅಶ್ವತ್ಥನಾರಯಣ ಅವರು ಅಪ್ರಬುದ್ಧವಾಗಿ ಮಾತನಾಡುತ್ತಿದ್ದಾರೆ. ಅವರ ಪ್ರಕಾರ 900 ರೂಪಾಯಿಗೆ ಮೀಟರ್ ಸಿಗುತ್ತದಂತೆ. ಈ 900 ರೂಪಾಯಿಗೆ ಸ್ಮಾರ್ಟ್ ಮೀಟರ್ ಎಲ್ಲಿ ಸಿಗುತ್ತದೆ? ಇದನ್ನು ಪೂರೈಸುವ ಗುತ್ತಿಗೆದಾರರು ಯಾರು ಎಂದು ಅಶ್ವತ್ಥ ನಾರಾಯಣ ಅವರೇ ಹೇಳಬೇಕು. ಅವರಿಗೆ ಈ ರಾಜ್ಯದ ಸ್ಮಾರ್ಟ್ ಮೀಟರ್ ಅಳವಡಿಕೆ ಯೋಜನೆಯನ್ನು ಅವರಿಗೆ ನೀಡಬಹುದು. ಅವರು ಲಿಖಿತ ರೂಪದಲ್ಲಿ ಅವರ ಮಾಹಿತಿಯನ್ನು ಕೊಡಲಿ. ನಾನೇ ಅವರನ್ನು ಸಿಎಂ ಮುಂದೆ ನಿಲ್ಲಿಸಿ ಅವರಿಂದಲೇ ಯೋಜನೆ ಜಾರಿಗೊಳಿಸೋಣ ಎಂದು ಹೇಳುತ್ತೇನೆ,”ಎಂದರು.
“ಅಶ್ವತ್ಥ ನಾರಾಯಣ ಅವರ ಮುಖ್ಯ ಉದ್ದೇಶ ಬ್ಲಾಕ್ ಮೇಲ್ ತಂತ್ರ. ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳ ಬಯಸುತ್ತೇನೆ. ಈ ಟೆಂಡರ್ ಅಲ್ಲಿ ಭಾಗವಹಿಸಿದ್ದ ಸಹ್ಯಾದ್ರಿ ಸಂಸ್ಥೆಗೂ ನಿಮಗೂ ಏನು ಸಂಬಂಧ? ಅವರ ಟೆಂಡರ್ ಅರ್ಜಿ ವಜಾಗೊಂಡ ನಂತರ ನೀವು ಕೆಂಡಾಮಂಡಲವಾಗಿ ಸಚಿವರಾದ ಜಾರ್ಜ್ ಅವರ ವಿರುದ್ಧ ನಿರಂತರ ಆರೋಪ ಮಾಡುತ್ತಿದ್ದೀರಲ್ಲಾ ಯಾಕೆ? ನಮ್ಮ ಪ್ರಶ್ನೆಗೆ ಉತ್ತರ ಕೊಡಿ ಇಲ್ಲಿದ್ದರೆ, 2011ನೇ ಇಸವಿಯಿಂದ ನೀವು ಮಾಡಿರುವ ಅನಾಚಾರಗಳನ್ನು ದಾಖಲೆ ಸಮೇತ ನಿಮ್ಮ ಮುಂದೆ ಬಂದಿದ್ದು ಮುಂದಿನ ದಿನಗಳಲ್ಲಿ ಒಂದೊಂದೇ ದಾಖಲೆ ಬಿಡುಗಡೆ ಮಾಡುತ್ತೇವೆ,”ಎಂದು ತಿಳಿಸಿದರು.
*ಸ್ಮಾರ್ಟ್ ಮೀಟರ್ ಸತ್ಯಾಸತ್ಯತೆ*:
ಕರ್ನಾಟಕದಲ್ಲಿ ಸ್ಮಾರ್ಟ್ ಮೀಟರ್ ದರ (ಸಿಂಗಲ್ ಫೇಸ್ – 4,998 ರೂ.)ಅದನ್ನು ಕೆಇಆರ್ಸಿ ನಿರ್ದೇಶನದಂತೆ ಗ್ರಾಹಕರೇ ಭರಿಸಬೇಕು. ಪ್ರತಿ ತಿಂಗಳ ತಾಂತ್ರಿಕ ನಿರ್ವಹಣಾ ವೆಚ್ಚ 75 ರೂ. ಮೊತ್ತವನ್ನು ಬೆಸ್ಕಾಂ ಭರಿಸುತ್ತದೆ.
ಬೇರೆ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಮೊತ್ತವನ್ನು ಗ್ರಾಹಕರ ಮಾಸಿಕ ಬಿಲ್ನಲ್ಲಿ ಸೇರಿಸಲಾಗುತ್ತದೆ. ಅಂದರೆ ಸ್ಮಾರ್ಟ್ ಮೀಟರ್ ಒಟ್ಟಾರೆ ಮೊತ್ತವನ್ನು ಕಂತಿನಲ್ಲಿ ಗ್ರಾಹಕರು ಪಾವತಿಸುತ್ತಾರೆ. ಜತೆಗೆ ತಾಂತ್ರಿಕ ನಿರ್ವಹಣಾ ವೆಚ್ಚವನ್ನೂ ಗ್ರಾಹಕರೇ ಭರಿಸುವರು.
ಬಹುತೇಕ ರಾಜ್ಯಗಳು ಆರ್ಡಿಎಸ್ಎಸ್ ಅಳವಡಿಸಿಕೊಂಡಿದ್ದು, ಅದರ ಮಾರ್ಗಸೂಚಿಯನ್ವಯ ಆ ರಾಜ್ಯಗಳು, ಸ್ಮಾರ್ಟ್ ಮೀಟರ್ ಮತ್ತು ಸಾಫ್ಟ್ ವೇರ್ ವೆಚ್ಚವೂ ಸೇರಿಸಿ ಟೆಂಡರ್ ಕರೆದಿದ್ದವು. ಆ ರಾಜ್ಯಗಳಲ್ಲಿ ವಿದ್ಯುತ್ ಸರಬರಾಜು ಕಂಪನಿಗಳೇ ಸ್ಮಾರ್ಟ್ ಮೀಟರ್ ಖರೀದಿಸಿ ಗ್ರಾಹಕರಿಗೆ ಅಳವಡಿಸಿದ ಬಳಿಕ, ಸ್ಮಾರ್ಟ್ ಮೀಟರ್ ವೆಚ್ಚ ಹಾಗೂ ಅದರ ತಾಂತ್ರಿಕ ನಿರ್ವಹಣವಾ ವೆಚ್ವವನ್ನು ವಿದ್ಯುತ್ ದರಕ್ಕೆ ಹೊಂದಾಣಿಕೆ ಮಾಡಿ ವಸೂಲಿ ಮಾಡುತ್ತವೆ. ಉದಾಹರಣೆಗೆ, ಕೇಂದ್ರ ಸರ್ಕಾರದ ಸಬ್ಸಿಡಿ ಸೇರಿ 10 ವರ್ಷಗಳ ಕಾಲ ಪ್ರತಿ ಸ್ಮಾರ್ಟ್ ಮೀಟರ್ಗೆ ಪ್ರತಿ ತಿಂಗಳು ತಗಲುವ ವೆಚ್ಚ -ಮಹಾರಾಷ್ಟ್ರದಲ್ಲಿ 120.34 ರೂ., ಪಶ್ಚಿಮ ಬಂಗಾಳದಲ್ಲಿ 117.81 ರೂ., ಸಿಕ್ಕಿಂ ರಾಜ್ಯದಲ್ಲಿ 148.88 ರೂ., ಮಣಿಪುರದಲ್ಲಿ 130.30 ರೂ., ಮಧ್ಯಪ್ರದೇಶದಲ್ಲಿ 115.84 ರೂ. ಆಗುತ್ತದೆ. ಇದನ್ನು ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ಬಿಲ್ಗೆ ಹೊಂದಾಣಿಕೆ ಮಾಡಿ ಗ್ರಾಹಕರಿಂದ ಪಡೆಯುತ್ತವೆ. ಅಲ್ಲದೇ, ಈ ರಾಜ್ಯಗಳಲ್ಲಿ ಏಕಕಾಲದಲ್ಲಿ (Bulk replacement) ಎಲ್ಲಾ ಗ್ರಾಹಕರ ಸ್ಥಾಪನಗಳಿಗೂ ಸ್ಮಾರ್ಟ್ ಮೀಟರ್ ಅಳವಡಿಸುತ್ತಿವೆ.
ರಾಜ್ಯದಲ್ಲಿ ಕೇವಲ ತಾತ್ಕಾಲಿಕ ಹಾಗೂ ಹೊಸ ಸ್ಥಾಪನಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಸುವುದರಿಂದ ಈ ಸಂಖ್ಯೆಯೂ ಕಡಿಮೆ ಇದ್ದು, ರಾಜ್ಯದ ವಿವಿಧ ಸ್ಥಳಗಳಲ್ಲಿ ಪ್ರತ್ಯೇಕವಾಗಿ ಸ್ಮಾರ್ಟ್ ಮೀಟರ್ ಅಳವಡಿಸಬೇಕಾಗುತ್ತದೆ. ಅಲ್ಲದೇ, ಈ ಕೆಲಸಕ್ಕಾಗಿ ನುರಿತ ಕೆಲಸಗಾರರನ್ನು ಬಿಡ್ಡುದಾರರರು 5 ವರ್ಷಗಳ ಕಾಲ ಇರಿಸಬೇಕಿರುತ್ತದೆ. ಇದರಿಂದಾಗಿ ಅವರು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕು ಮತ್ತು ಕಡಿಮೆ ಮೀಟರ್ಗಳನ್ನು ಬದಲಾಯಿಸಲು ಅನೇಕ ಬಾರಿ ಓಡಾಡಬೇಕಾಗುತ್ತದೆ. ಹೀಗಾಗಿ ಸ್ಮಾರ್ಟ್ಮೀಟರ್ ದರ ಸಮಂಜಸವಾಗಿದೆ.
ಸಾಮಾನ್ಯ ಬಿಡ್ಡಿಂಗ್ ದಾಖಲೆ (SBD) ಹಾಗೂ ಟೆಂಡರ್ನಲ್ಲಿ ವಿಧಿಸಿರುವ ಷರತ್ತಿನಂತೆ ಸ್ಮಾರ್ಟ್ ಮೀಟರ್ ತಯಾರಿಸುವ ಮೂರು ಕಂಪನಿಗಳಾದ ಸ್ನೈಡರ್, ಜೀನಸ್ ಮತ್ತು ಓಪಸ್ ಜತೆ ಬಿಡ್ಡುದಾರರು ಒಡಂಬಡಿಕೆ ಮಾಡಿಕೊಂಡಿದ್ದಾರೆ. ಅದೇ ರೀತಿ ಎಸ್ಬಿಡಿ ಮತ್ತು ಟೆಂಡರ್ನಲ್ಲಿ ವಿಧಿಸಿರುವ ಷರತ್ತಿನಂತೆ, ಸಾಫ್ಟ್ವೇರ್ ಸೇವೆ ಒದಗಿಸುವ ಕಂಪನಿಯಾದ ಬಿಸಿಐಟಿಎಸ್ರವರ ಜತೆಗೂ ಒಡಂಬಡಿಕೆ ಮಾಡಿಕೊಂಡಿರುತ್ತಾರೆ. ಬಿಸಿಐಟಿಎಸ್ ಸಂಸ್ಥೆಯು ಕಪ್ಪು ಪಟ್ಟಿಗೆ ಸೇರಿಲ್ಲ. ಆ ಸಂಸ್ಥೆ ಮೇಲೆ ವಿಧಿಸಿದ್ದ ನಿರ್ಬಂಧಿತ ಅವಧಿಯ ಮುಕ್ತಯವಾದ ನಂತರವೇ ಒಡಂಬಡಿಕೆ ಮಾಡಿಕೊಂಡಿರುತ್ತಾರೆ. ಹಾಗಾಗಿ ಈ ಕುರಿತ ಆರೋಪದಲ್ಲಿ ಹುರುಳಿಲ್ಲ ಎಂದರು.