ಇತ್ತೀಚಿನ ಸುದ್ದಿ
ಬಂಟ್ವಾಳ: ಚಲಿಸುತ್ತಿದ್ದ ರೈಲಿನಿಂದ ನೇತ್ರಾವತಿ ನದಿಗೆ ಹಾರಿ ತುಮಕೂರು ಮೂಲದ ಯುವತಿ ಆತ್ಮಹತ್ಯೆ?
15/02/2024, 09:37
ಬಂಟ್ವಾಳ(reporterkarnataka.com): ಬಿ.ಸಿ. ರೋಡು ಸಮೀಪದ ಕೈಕುಂಜೆ ಎಂಬಲ್ಲಿ ಗುರುವಾರ ಮುಂಜಾನೆ ಚಲಿಸುತ್ತಿದ್ದ ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ.
ಗುರುವಾರ ಮುಂಜಾನೆ ಸುಮಾರು 6.25 ರ ವೇಳೆಗೆ ಈ ದುರ್ಘಟನೆ ನಡೆದಿದೆ. ಚಲಿಸುತ್ತಿದ್ದ ರೈಲಿನಿಂದ ಯುವತಿ ನದಿ ನೀರಿಗೆ ಜಿಗಿದಿದ್ದಾಳೆ ಎನ್ನಲಾಗಿದೆ. ರೈಲಿನ ಇತರ ಪ್ರಯಾಣಿಕರು ನೀಡಿದ ಮಾಹಿತಿಯಂತೆ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಮೃತ ಯುವತಿಯನ್ನು ತುಮಕೂರು ಮೂಲದ ನಯನಾ (25) ಎಂದು ಗುರುತಿಸಲಾಗಿದೆ.
ಯುವತಿ ನದಿಗೆ ಹಾರಿದ ಸುದ್ದಿ ತಿಳಿದ ತಕ್ಷಣ ಗೂಡಿನಬಳಿಯ
ಜೀವ ರಕ್ಷಕ ತಂಡದ ಯುವಕರು ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಆದರೆ ಯುವತಿ ಯನ್ನು ಮೇಲಕ್ಕೆತ್ತುವಷ್ಟರಲ್ಲಿ ಸಾವು ಸಂಭವಿಸಿತ್ತು. ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೊಲೀಸರು ಹಾಗೂ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಯುವತಿ ರೈಲಿನಿಂದ ಬಿದ್ದಿದ್ದಾರೋ ಅಥವಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಎಂಬ ಬಗ್ಗೆ ಸಂಶಯಿಸಲಾಗಿದ್ದು, ರೈಲ್ವೆ ಪ್ರಯಾಣಿಕರು ಪೊಲೀಸರಿಗೆ ನೀಡಿದ ಮಾಹಿತಿಯಂತೆ ನದಿಗೆ ಹಾರಿದ್ದಾರೆ ಎನ್ನಲಾಗಿದೆ.