ಇತ್ತೀಚಿನ ಸುದ್ದಿ
‘ಬೈರಾಗಿ’ ಡಿಜಿಟಲ್ ಪ್ರೀಮಿಯರ್‌ಗೆ ವೂಟ್ ಸೆಲೆಕ್ಟ್ ಸಿದ್ಧ: ಆಗಸ್ಟ್ 19ರಂದು ಸ್ಟ್ರೀಮಿಂಗ್
18/08/2022, 21:51
*ಶಿವಣ್ಣ, ಧನಂಜಯ್ ಅಭಿನಯದ ವಿಜಯ್ ಮಿಲ್ಟನ್ ನಿರ್ದೇಶನದ ಈ ಬ್ಲಾಕ್ ಬಸ್ಟರ್ ಚಿತ್ರ ಪರಿಪೂರ್ಣವಾದ ಆಕ್ಷನ್, ಡ್ರಾಮಾ ಮತ್ತು ಥ್ರಿಲ್‌ಗಳನ್ನು ನೀಡುತ್ತದೆ.
ಬೆಂಗಳೂರು(reporterkarnataka.com): ವಿಮರ್ಶಕರ ಹಾಗೂ ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾದ ಬೈರಾಗಿ ಚಲನಚಿತ್ರದ ವಿಶೇಷ ವಿಶ್ವ ಡಿಜಿಟಲ್ ಪ್ರೀಮಿಯರ್‌ಗೆ ವೂಟ್ ಸೆಲೆಕ್ಟ್ (Voot Select) ಸಜ್ಜಾಗಿದೆ. ವಿಜಯ್ ಮಿಲ್ಟನ್ ಚಿತ್ರಕಥೆ-ನಿರ್ದೇಶನ ಮತ್ತು ಕೃಷ್ಣ ಸಾರ್ಥಕ್ ನಿರ್ಮಾಣದ ‘ಬೈರಾಗಿ’ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್, ಪೃಥ್ವಿ ಅಂಬರ್ ಮತ್ತು ಅಂಜಲಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಆಗಸ್ಟ್ 19ರಂದು ವೂಟ್ ಸೆಲೆಕ್ಟ್ ನಲ್ಲಿ ಬೈರಾಗಿಯ ಪ್ರಥಮ ಪ್ರದರ್ಶನ ನಿಗದಿಯಾಗಿದೆ.
ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡುವ, ಮೌಲ್ಯಗಳನ್ನು ಉನ್ನತವಾಗಿ ಗೌರವಿಸುವ ಕಲಾವಿದ ಹುಲಿ ಶಿವನ ಕಥೆ ಇದಾಗಿದೆ. ಆಕ್ಷನ್ ಮತ್ತು ಭಾವನಾತ್ಮಕ ದೃಶ್ಯಗಳ ಸಮ್ಮಿಲನವಾಗಿ ಬೈರಾಗಿ ಸಂಪೂರ್ಣವಾಗಿ ಮಾಸ್ ಎಂಟರ್‌ಟೈನರ್ ಆಗಿದೆ.
ನಾಯಕ ನಟ ಶಿವರಾಜ್‌ಕುಮಾರ್ OTT ಬಿಡುಗಡೆಯ ಬಗ್ಗೆ ಉತ್ಸಾಹದಿಂದ ಮಾತನಾಡಿದ್ದಾರೆ. “ಬೈರಾಗಿಯಂತಹ ಸಂಪೂರ್ಣ ಪ್ಯಾಕೇಜ್‌ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದರಿಂದ ಖುಷಿಯಾಗಿದೆ. ಹುಲಿ ಶಿವನ ಪಾತ್ರ ಮಾಡುವುದು ಮತ್ತು ಹುಲಿವೇಷ ಹಾಕುವುದು ನನಗೆ ಸವಾಲಾಗಿತ್ತು. ನಿರ್ದೇಶಕ ವಿಜಯ್ ಈ ಪಾತ್ರವನ್ನು ಜೀವಂತಿಕೆಯಿಂದ ನಿರ್ವಹಿಸಲು ಸಹಾಯ ಮಾಡಿದರು. Voot Select ನಲ್ಲಿ ಚಲನಚಿತ್ರವು OTT ಬಿಡುಗಡೆ ಆಗುತ್ತಿದ್ದು, ನಾನು ತುಂಬಾ ಉತ್ಸುಕನಾಗಿದ್ದೇನೆ. ಸಾಮಾಜಿಕವಾಗಿ ಪ್ರಸ್ತುತವಾದ ಈ ಕಥೆಯು ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗಲಿದೆ” ಎಂದರು.
ನಟ ಧನಂಜಯ್ ಮಾತನಾಡಿ, “ಈ ಸಿನಿಮಾ ಮತ್ತು ನನ್ನ ಪಾತ್ರ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿವೆ. ನಾನು ಶಿವರಾಜ್‌ಕುಮಾರ್ ಅವರ ದೊಡ್ಡ ಅಭಿಮಾನಿ. ಅವರೊಂದಿಗೆ ನಟಿಸಲು ಮತ್ತೆ ಅವಕಾಶ ಸಿಕ್ಕಿದ್ದು ನನಗೆ ಸಿಕ್ಕ ಅತಿ ದೊಡ್ಡ ಗೌರವವಾಗಿದೆ. ಶಿವಣ್ಣ ಮತ್ತು ವಿಜಯ್ ಅವರಂತಹ ದಿಗ್ಗಜರೊಂದಿಗೆ ಕೆಲಸ ಮಾಡುವ ಕನಸು ನನಸಾಗಿದೆ. ಪ್ರತಿ ದೃಶ್ಯವೂ ಅದ್ಬುತವಾಗಿದೆ. ತಂಡದ ಸಾಮರಸ್ಯವು ತೆರೆಯ ಮೇಲೆ ಸುಂದರವಾಗಿ ತೆಗೆದುಕೊಂಡಿದೆ. Voot Select ನಲ್ಲಿ ಚಿತ್ರದ ಬಗ್ಗೆ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ನೋಡಲು ಉತ್ಸುಕನಾಗಿದ್ದೇನೆ” ಎಂದು ಹೇಳಿದರು.
ನಿರ್ದೇಶಕ ವಿಜಯ್ ಮಿಲ್ಟನ್ ಮಾತನಾಡಿ, “ಹುಲಿ ಶಿವನ ಪಾತ್ರವನ್ನು ಇಷ್ಟು ಚೆನ್ನಾಗಿ ಕಟ್ಟಿಕೊಡಲು ಶಿವಣ್ಣ ಅವರಲ್ಲದೆ ಬೇರೆ ಯಾರಿಗೂ ಸಾಧ್ಯವಾಗದು! ಅವರೊಬ್ಬ ಶ್ರೇಷ್ಠ ನಟ, ಅತ್ಯಂತ ವಿನಮ್ರ ಮತ್ತು ಉದಾರ ವ್ಯಕ್ತಿ. ಪಾತ್ರ ಮತ್ತು ಚಿತ್ರಕಥೆಗೆ ಪ್ರಾಮಾಣಿಕವಾಗಿರುವುದು ಮಾತ್ರ ಅವರ ಗಮನವಾಗಿತ್ತು. ಬೈರಾಗಿ ನನ್ನ ಕನ್ನಡದ ಚೊಚ್ಚಲ ಚಿತ್ರವಾಗಿದ್ದು, ವಿಶೇಷವಾಗಿದೆ. ನನ್ನ ಕಥೆ ಮತ್ತು ನಿರೂಪಣೆಯಲ್ಲಿ ನಂಬಿಕೆ ಇಟ್ಟು ಶ್ರದ್ಧೆಯಿಂದ ಅಭಿನಯಿಸಿ, ಶ್ರೇಷ್ಠ ಸಿನೆಮಾ ಮೂಡಿಬರಲು ಕಾರಣರಾದ ಪಾತ್ರವರ್ಗ ಮತ್ತು ಸಿಬ್ಬಂದಿಗೆ ನಾನು ಕೃತಜ್ಞನಾಗಿದ್ದೇನೆ. ಪ್ರೇಕ್ಷಕರು ಚಿತ್ರವನ್ನು ಆನಂದಿಸುತ್ತಾರೆ, ಸಾಮಾಜಿಕ ಸಂದೇಶ ಅವರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತದೆ” ಎಂದು ಆಶಾವಾದ ವ್ಯಕ್ತಪಡಿಸಿದರು.
ಆಕ್ಷನ್-ಪ್ಯಾಕ್ಡ್ ಎಂಟರ್ಟೈನರ್, ಬೈರಾಗಿ, 19 ಆಗಸ್ಟ್ 2022ರಿಂದ Voot Select ನಲ್ಲಿ ಮಾತ್ರ ಸ್ಟ್ರೀಮಿಂಗ್ ಆಗಲಿದೆ; ತಪ್ಪದೇ ವೀಕ್ಷಿಸಿ!