ಇತ್ತೀಚಿನ ಸುದ್ದಿ
ಆಸ್ಪತ್ರೆ ಬೆಡ್ ನಲ್ಲಿ ಮಲಗಿರುವ ಯಕ್ಷಗಾನ ಪ್ರಸಂಗಕರ್ತ, ಛಾಂದಸ ಕವಿ ಗಣೇಶ ಕೊಲೆಕಾಡಿ ನೆರವಿಗೆ ಬರುವಿರಾ?
17/05/2022, 19:58

ಮಂಗಳೂರು(reporterkarnataka.com): ಯಕ್ಷಗಾನ ಪ್ರಸಂಗಕರ್ತ, ಗುರು, ಛಾಂದಸ ಕವಿ ಗಣೇಶ ಕೊಲೆಕಾಡಿ ಅವರು ಬಾಯಿಯ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದು, ಮಂಗಳೂರಿನ ಮಂಗಳಾ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಡವರಾದ ಅವರು ಚಿಕಿತ್ಸಾ ವೆಚ್ಚ ಭರಿಸಲು ದಾನಿಗಳ ನೆರವು ಕೋರಿದ್ದಾರೆ.
ಯಕ್ಷಗಾನ ಕವಿಯಾಗಿ ೬೦ ಯಕ್ಷಗಾನ ಪ್ರಸಂಗಗಳನ್ನು ರಚಿಸಿರುವ ಗಣೇಶ ಕೊಲೆಕಾಡಿ ಅವರು ಸಾಹಿತಿಯಾಗಿ ಅನೇಕ ಕವನ, ನಾಟಕಗಳನ್ನು ಬರೆದಿದ್ದಾರೆ. ಅವರ ನೂರಾರು ಲೇಖನಗಳು ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಯಕ್ಷಗಾನ ಗುರುವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿದ್ಯಾದಾನ ಮಾಡಿದ್ದಾರೆ. ಛಂದೋಬ್ರಹ್ಮ ಡಾ. ಶಿಮಂತೂರು ನಾರಾಯಣ ಶೆಟ್ಟರ ಪಟ್ಟಶಿಷ್ಯನೆಂಬ ಕೀರ್ತಿಗೆ ಪಾತ್ರನಾಗಿ ಛಂದಃಶಾಸ್ತ್ರದ ಬಗ್ಗೆ ಹಲವಾರು ಸಂಶೋಧನೆಗಳನ್ನು ಮಾಡಿದ್ದಾರೆ. ಲಯಬ್ರಹ್ಮ ದಿವಾಣ ಭೀಮಭಟ್ಟರ ಶಿಷ್ಯನಾಗಿ ತಾಲಗಳ ಬಗ್ಗೆಯೂ ಹಲವಾರು ಸಂಶೋಧನೆಗಳನ್ನು ನಡೆಸಿದ್ದಾರೆ. ಶೇಣಿಪ್ರಶಸ್ತಿ, ನೆಡ್ಲೆ ನರಸಿಂಹ ಭಟ್ಟ ಪ್ರಶಸ್ತಿ, ಜಿಲ್ಲಾರಾಜ್ಯೋತ್ಸವ ಪ್ರಶಸ್ತಿಯೇ ಮೊದಲಾದ ನೂರಾರು ಘನಪ್ರಶಸ್ತಿಗಳನ್ನು ಪಡೆದಿದ್ದಾರೆ.
ಮುಂಬೈನಲ್ಲಿ ನಡೆದ ದುರ್ಘಟನೆಯೊಂದರಲ್ಲಿ ದುಷ್ಕರ್ಮಿಗಳ ದಾಳಿಗೊಳಗಾಗಿ ಎರಡೂ ಕಾಲು, ಎರಡೂ ಕೈ ಮುರಿತಕ್ಕೊಳಗಾಗಿ, ತಲೆಗೂ ಬಲವಾದ ಏಟು ಬಿದ್ದು ಸುದೀರ್ಘ ಚಿಕಿತ್ಸೆಯಿಂದ ರೋಗಿಯಾಗಿ ಮನೆಯ ಒಳಗೆ ಉಳಿದುಕೊಳ್ಳಬೇಕಾಯಿತು. ಮದುವೆಯಾಗದೆ ಮುದಿತನದ ತಾಯಿಯೊಂದಿಗೆ ಜೀವನ ಕಳೆಯುವ ಪರಿಸ್ಥಿತಿ ಅವರದು. ಇದೀಗ ವಿಪರೀತವಾದ ಬಾಯಿಯ ಸೋಂಕಿನಿಂದ ಮಾತನಾಡಲು, ಆಹಾರ ಸೇವಿಸಲು ಕಷ್ಟವನ್ನು ಅನುಭವಿಸಿ, ಪೂರ್ಣ ತೆರೆಯಲಾಗದ ಬಾಯಿ, ಒಳ ಸರಿದ ನಾಲಗೆಯ ದುಸ್ಥಿತಿಯ ನಡುವೆ ಸಹಿಸಲಾರದ ನೋವಿಂದ ಬಳಲುತ್ತಿದ್ದಾರೆ. ಅವರ ಅಮ್ಮನ ಆರೋಗ್ಯವೂ ಅಷ್ಟಕಷ್ಟೇ. ಇದೀಗ ಬಾಯಿಯ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದು, ಕೆಲ ದಿನಗಳ ಹಿಂದೆ ಒಂದು ಶಸ್ತ್ರಚಿಕಿತ್ಸೆ ನಡೆದಿದೆ. ಮೇ ೧೭ರಂದು ಕುತ್ತಿಗೆ ಮತ್ತು ನಾಲಗೆಯ ಎರಡನೇ ಶಸ್ತ್ರಚಿಕಿತ್ಸೆ ನಡೆದಿದೆ. ಇದಕ್ಕೂ ಮುನ್ನ ಒಂದು ತಿಂಗಳ ಕಾಲ ಸುರತ್ಕಲ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಹಿಂದೆ ಮಂಗಳಾ ಆಸ್ಪತ್ರೆಯಲ್ಲಿ ಅಂದಾಜು ಒಂದೂವರೆ ಲಕ್ಷ ರೂ. ಬಿಲ್ ಆಗಬಹುದು ಎಂದು ಹೇಳಿದ್ದರು. ಶಸ್ತ್ರಚಿಕಿತ್ಸೆ ವೆಚ್ಚ, ಆಸ್ಪತ್ರೆ ವೆಚ್ಚ ಸೇರಿ ಇದೀಗ ಲಕ್ಷಗಟ್ಟಲೆ ಬಿಲ್ ಆಗುವ ಸಾಧ್ಯತೆಯಿದೆ. ಚಿಕಿತ್ಸಾ ವೆಚ್ಚ ಭರಿಸಲು ಸಹೃದಯಿ ದಾನಿಗಳು ನೆರವಾಗಬೇಕು ಎಂದು ಗಣೇಶ ಕೊಲೆಕಾಡಿ ಅವರು ವಿನಂತಿಸಿದ್ದಾರೆ.
ನೆರವು ನೀಡುವವರು
ಗೂಗಲ್ ಪೇ ನಂ. 9482130381
ಬ್ಯಾಂಕ್ ಖಾತೆ ವಿವರ:
ಹೆಸರು: ಗಣೇಶ್ ಸುವರ್ಣ ಕೊಲೆಕಾಡಿ
SB Account No 005310500055943
The Bharat Co Operative Bank Ltd. MULKY Branch
IFSC Code No BCBM0000054.