ಇತ್ತೀಚಿನ ಸುದ್ದಿ
ಎಂಎಸ್ಪಿಯಡಿ ತಕ್ಷಣ ಹೆಸರು, ಉದ್ದು, ಶೇಂಗಾ ಖರೀದಿಗೆ ಕೇಂದ್ರಕ್ಕೆ ಎನ್. ಚಲುವರಾಸ್ವಾಮಿ ಮನವಿ
17/09/2025, 12:17
ನವದೆಹಲಿ(reporterkarnataka.com): ಬೆಂಬಲ ಬೆಲೆ ಯೋಜನೆಯಡಿ ಹೆಸರು, ಉದ್ದು, ಸೋಯಾಬಿನ್, ಸೂರ್ಯಕಾಂತಿ ಮತ್ತಿತರ ಕೃಷಿ ಉತ್ಪನ್ನಗಳ ಖರೀದಿಗೆ ತಕ್ಷಣ ಅನುಮೊದನೆ ನೀಡುವಂತೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕೇದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಆಯೋಜಿಸಿದ್ದ ರಾಷ್ಟ್ರೀಯ ರಬಿ ಅಭಿಯಾನ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬೆಲೆ ಬೆಂಬಲ ಯೋಜನೆ (PSS) ಪ್ರಸ್ತುತ ಹೆಸರು ಕಾಳು, ಉದ್ದು, ಸೂರ್ಯಕಾಂತಿ, ಸೋಯಾಬೀನ್ ಮತ್ತು ಶೇಂಗಾ ಬೆಲೆಗಳು ಕನಿಷ್ಠ ಬೆಂಬಲ ಬೆಲೆಗಿಂತ (MSP) ಕಡಿಮೆ ಇದೆ. ಇದರಿಂದ ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ತಕ್ಷಣವೇ ಈ ಬೆಳೆಗಳನ್ನು ಬೆಲೆ ಬೆಂಬಲ ಯೋಜನೆ ಅಡಿಯಲ್ಲಿ ಸಂಗ್ರಹಿಸಲು ಅನುಮೋದನೆ ನೀಡುವಂತೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಮಾಡಿದರು.
ಕಳೆದ ಕೆಲವು ವರ್ಷಗಳಿಂದ ರಾಜ್ಯಕ್ಕೆ ನಿರಂತರವಾಗಿ ಬೆಂಬಲ ಮತ್ತು ಸಹಕಾರ ನೀಡುತ್ತಿರುವ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಿಗೆ ಧನ್ಯವಾದ ಅರ್ಪಿಸುತ್ತೇವೆ. ರೈತರ ಪರವಾಗಿ SMAM, RKVY, ATMA, PMSKY, WDC ಮತ್ತು PDPS ನಂತಹ ಯೋಜನೆಗಳನ್ನು ಮಂಜೂರು ಮಾಡಿದ್ದಕ್ಕಾಗಿ, ಅದರಲ್ಲೂ ವಿಶೇಷವಾಗಿ ಕರ್ನಾಟಕದ ಮಾವು ಬೆಳೆಗಾರರಿಗೆ ಸಹಾಯ ಮಾಡಿದ್ದಕ್ಕಾಗಿ ನಾವು ಆಭಾರಿಯಾಗಿದ್ದೇವೆ ಎಂದು ಅವರು ಹೇಳಿದರು.
ಇದೇ ರೀತಿ ಬೆಲೆ ಕುಸಿತ ಎದುರಿಸುತ್ತಿರುವ ರೈತರ ತುರ್ತು ಅಗತ್ಯಗಳನ್ನು ಪೂರೈಸಿ ಸಂಕಷ್ಟದಿಂದ ಪಾರುಮಾಡುವಂತೆ ಸಚಿವರು ಮನವಿ ಮಾಡಿದರು.
ಕರ್ನಾಟಕದಲ್ಲಿ ರೈತರು ಯಾಂತ್ರೀಕೃತ ಕೃಷಿ ಪದ್ಧತಿಗಳನ್ನು ಹೆಚ್ಚು ಅಳವಡಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ SMAM ಯೋಜನೆಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ 2025-26ನೇ ಸಾಲಿಗೆ ರಾಜ್ಯಕ್ಕೆ ಹೆಚ್ಚುವರಿಯಾಗಿ 200 ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಬೇಕೆಂದು ಸಚಿವ ಚಲುವರಾಯಸ್ವಾಮಿ ಮನವಿ ಮಾಡಿದರು
*ರಸಗೊಬ್ಬರ ಪೂರೈಕೆ:* ಏಪ್ರಿಲ್ನಿಂದ ಸೆಪ್ಟೆಂಬರ್ 2025ರ ಅವಧಿಗೆ ನಮಗೆ ಪೂರೈಸಬೇಕಿದ್ದ 3.36 ಲಕ್ಷ ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ಇನ್ನೂ ಬಾಕಿ ಇದೆ. ದಯವಿಟ್ಟು ಆದಷ್ಟು ಬೇಗ ಪೂರೈಸಲು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು
*ಕೃಷಿ ವಿಶ್ವವಿದ್ಯಾಲಯಕ್ಕೆ ಮಾನ್ಯತೆ:**
ಮಂಡ್ಯದಲ್ಲಿ ಹೊಸದಾಗಿ ಪ್ರಾರಂಭವಾದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ICAR ನಿಂದ ಔಪಚಾರಿಕ ಮಾನ್ಯತೆ ಮತ್ತು ಅಗತ್ಯ ಅನುದಾನ ನೀಡಬೇಕು. ಜೊತೆಗೆ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಿಂದ ಎಲ್ಲಾ ಕೃಷಿ ವಿಜ್ಞಾನ ಕೇಂದ್ರಗಳು (KVK) ಮತ್ತು ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆ (AICRP) ಕೇಂದ್ರಗಳನ್ನು ಮಂಡ್ಯ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಬೇಕೆಂದು ಅವರು ಕೋರಿದರು.
*RKVY ಯೋಜನೆಗಳು:* ರೈತರ ಕಲ್ಯಾಣಕ್ಕಾಗಿ RKVY ಯೋಜನೆಗಳಿಗೆ ಹೆಚ್ಚಿನ ಮಹತ್ವ ನೀಡಿ, ಅಗತ್ಯವಿರುವ ಹೆಚ್ಚುವರಿ ನಿಧಿಯನ್ನು ಮಂಜೂರು ಮಾಡುವಂತೆ ಚಲುವರಾಯಸ್ವಾಮಿ ಮನವಿ ಮಾಡಿದರು.

ನಮ್ಮ ರಾಜ್ಯದ ರೈತರ ಹಿತ ಕಾಪಾಡುವ ಈ ನಿಟ್ಟಿನಲ್ಲಿ ಕೇಂದ್ರದ ಬೆಂಬಲ ಮತ್ತು ಸಕಾರಾತ್ಮಕ ಪ್ರತಿಕ್ರಿಯೆ ಎದುರು ನೋಡುತ್ತಿದ್ದೇವೆ. ಇದರಿಂದ ರೈತರ ಬದುಕು ಇನ್ನಷ್ಟು ಉತ್ತಮವಾಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ,ರಾಜ್ಯ ಸಚಿವರಾದ ಭಗೀರಥ ಚೌಧರಿ ಹಾಗೂ ವಿವಿಧ ರಾಜ್ಯಗಳ ಕೃಷಿ ಸಚಿವರು ಹಾಗೂ ಅಧಿಕಾರಿಗಳು ಕಾರ್ಯದಲ್ಲಿ ಪಾಲ್ಗೊಂಡಿದ್ದರು.














