ಇತ್ತೀಚಿನ ಸುದ್ದಿ
ದ.ಕ. ಸೈಬರ್ ಪೊಲೀಸರ ಕಾರ್ಯಾಚರಣೆ: ಪೂಜೆ ಮಾಡಿ ಪರಿಹಾರ ನೀಡುವುದಾಗಿ ಹೇಳಿ 24 ಸಾವಿರ ರೂ. ವಂಚಿಸಿದ ಬೆಂಗಳೂರಿನ ನಿವಾಸಿಯ ಬಂಧನ
05/11/2025, 20:43
ಮಂಗಳೂರು(reporterkarnataka.com): ಸಾರ್ವಜನಿಕರ ಸಮಸ್ಯೆಗಳನ್ನು ಪೂಜೆ ಮಾಡಿ ಪರಿಹಾರ ನೀಡುವುದಾಗಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರಚಾರ ನೀಡಿ ವ್ಯಕ್ತಿಯೊಬ್ಬರಿಗೆ ವಂಚಿಸಿದ ಪ್ರಕರಣ ಸಂಬಂಧಿಸಿದಂತೆ ಬೆಂಗಳೂರು ನಿವಾಸಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಸುಂಕದಕಟ್ಟೆಯ ಶ್ರೀನಿವಾಸ ನಗರ ನಿವಾಸಿಯಾದ ವಾಸುದೇವ ಆರ್. ಎಂಬಾತ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಾರ್ವಜನಿಕರಿಗೆ ವೈಯಕ್ತಿಕ ಸಮಸ್ಯೆಗಳನ್ನು ತತ್‌ಕ್ಷಣದಲ್ಲಿ ಪೂಜೆ ಮಾಡಿ ಪರಿಹರಿಸುವುದಾಗಿ ಜಾಹೀರಾತು ನೀಡಿ, ವ್ಯಕ್ತಿಯೊಬ್ಬರಿಗೆ ಸುಮಾರು 24,78,274/- ರೂ. ವಂಚಿಸಿದ್ದ.
ಈ ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ. 87-2025, U/S 66(D) IT Act and 318(4) BNS ರಂತೆ ಪ್ರಕರಣ ದಾಖಲಾಗಿತ್ತು. ಇದೀಗ ಬೆಂಗಳೂರಿನ ಯಶವಂತಪುರ
ಗೋಕುಲ 1st ಹಂತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರೋಪಿ ವಾಸುದೇವ ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿ, ಆತನಿಂದ ಕೃತ್ಯಕ್ಕೆ ಬಳಸಿದ 4 ಮೊಬೈಲ್ ಫೋನ್‌ಗಳು ಹಾಗೂ 20,300/- ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಸೊತ್ತಿನ ಒಟ್ಟು ಮೌಲ್ಯ ರೂ 1,60,300/- ಆಗಿರುತ್ತದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.












