4:48 PM Thursday6 - November 2025
ಬ್ರೇಕಿಂಗ್ ನ್ಯೂಸ್
ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ

ಇತ್ತೀಚಿನ ಸುದ್ದಿ

ಬದುಕೆನ್ನುವುದು ಒಂದು ಸ್ಪರ್ಧೆಯಲ್ಲ, ಸಂಘರ್ಷವೂ ಅಲ್ಲ; ಒಂದು ಸುಂದರ ಅನುಭೂತಿ

04/01/2025, 22:11

ರಾಜೇಶ್ವರಿ ಕುಮಾರ್ ರಾವ್ ಬೆಂಗಳೂರು

info.reporterkarnataka@gmail.com

ನನ್ನ ಬದುಕು ಕಷ್ಟ ದುಃಖ ನೋವುಗಳಿಂದ ತುಂಬಿರಲಿ ಎಂದು ಯಾರಾದರೂ ಬಯಸುತ್ತಾರೆಯೇ?ಎಲ್ಲರಿಗೂ ಸುಖ ಸಂತೋಷ ನೆಮ್ಮದಿ ಸಮೃದ್ಧಿಯ ಬದುಕು ಬೇಕು. ಅದು ಸಹಜ ತಾನೇ. ಆದರೆ ದೇವರ ಲೀಲೆಯೇ ಬೇರೆ. ನಮ್ಮ ಕರ್ಮಾನುಸಾರ ಅನುಭವಿಸಿಯೇ ತೀರಬೇಕಾದ ಸುಖ ದುಃಖಗಳನ್ನು ಈ ಜೀವಿತಾವಧಿಯಲ್ಲಿ ಅನುಭವಿ
ಸಿಯೇ ತೀರಬೇಕು. ಅದು ವಿಧಿಲಿಖಿತ. ಕೆಲವರ ಜೀವನದ ಆರಂಭದ ವರ್ಷಗಳಲ್ಲಿ ತುಂಬಾ ಸುಖಸಂತೋಷದಲ್ಲಿ ಮೆರೆಯುತ್ತಾರೆ. ಆದರೆ ಮುಂದಿನ ದಿನಗಳಲ್ಲಿ ಅದೆಲ್ಲಿಂದಲೂ ಕಷ್ಟಕಾರ್ಪಣ್ಯಗಳು ಅವರನ್ನು  ಮುತ್ತಿಗೆ ಹಾಕಿ ಹೈರಾಣಾಗಿಸುತ್ತವೆ. ಇನ್ನು ಕೆಲವರು ಬಡತನ, ಅನಾರೋಗ್ಯ, ಪ್ರಿಯಬಂಧುಗಳ ವಿಯೋಗ, ಇತ್ಯಾದಿ ನೋವು ದುಃಖಗಳನ್ನು ಅನುಭವಿಸಿ ಕೊನೆ ಕಾಲದಲ್ಲಿ ಬದುಕು ಯಾವುದೋ ತಿರುವು ತೆಗೆದು ಕೊಂಡು ಇದ್ದುದರಲ್ಲಿ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಇದಕ್ಕೆ ತಾರ್ಕಿಕ ಕಾರಣವನ್ನು ಊಹಿಸುವುದು ಅಸಾಧ್ಯ. ಎಲ್ಲವನ್ನೂ ನಮ್ಮ ಪೂರ್ವಾರ್ಜಿತ ಕರ್ಮಗಳ ಫಲವೆಂದು ಭಾವಿಸಿ ಸುಮ್ಮನಿರಬೇಕು.
ವಾಸುಕಿ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಅಸಾಮಾನ್ಯ ಮೇಧಾವಿ. ಅತೀ ಬುದ್ಧಿವಂತಿಕೆ, ಅನುಪಮ ಜ್ಞಾಪಕ ಶಕ್ತಿ, ಏಕಾಗ್ರತೆ, ಹಠ ಸಾಧನೆ ಅವನ ಗುಣಗಳು. ಶಾಲೆಯ ಉಪಾಧ್ಯಾಯರು ಅವನ ಚಾಣಾಕ್ಷತೆಯನ್ನು ಗುರುತಿಸಿ ಅವನತಂದೆಗೆ, “ಹುಡುಗ ನಮ್ಮ ಶಾಲೆಗೆ ಮಾತ್ರವಲ್ಲ, ಈ ರಾಜ್ಯಕ್ಕೆ ಹೆಸರು ತರುತ್ತಾನೆ. ಅವನ ವಿದ್ಯಾಭ್ಯಾಸವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ ಎಂದು ತಿಳಿ ಹೇಳಿದರು.
ಅವನ ಅಪ್ಪನಿಗೆ ಮಗನಲ್ಲಿ ಅಂತಹಾ ಅಭೂತ
ಪೂರ್ವ ಪ್ರತಿಭೆ ಕಾಣಿಸಲಿಲ್ಲ, ಏಕೆಂದರೆ ಮನೆಯಲ್ಲಿ ಯಾವಾಗಲೂ ತನ್ನ ಪಾಡಿಗೆ ತಾನಿರುತ್ತಿದ್ದ ಮೂದೇವಿ ಯಂತ ಹುಡುಗ ಆತ. ಏನೋ ಹೆಡ್ಮಾಸ್ಟರ್ ಹೇಳಿದ ಮೇಲೆ ನಿಜವೇ ಇರಬಹುದು ಎಂದುಕೊಂಡರು. ವಾಸುಕಿ ಶಾಲಾ ಪಠ್ಯ ಪುಸ್ತಕ  ಕೈಗೆಸಿಕ್ಕಿದ ಒಂದೆರಡೇ ದಿನಗಳಲ್ಲಿ ಓದಿ ಮುಗಿಸುತ್ತಿದ್ದ. ಯಾವ ಪಠ್ಯದಲ್ಲಿದ್ದ ವಿಷಯಗಳ ಬಗ್ಗೆ ಯಾವ ಪ್ರಶ್ನೆ ಕೇಳಿದರೂ ಉತ್ತರಿಸುವ ನೆನಪು ಶಕ್ತಿ ಅವನಿಗಿತ್ತು. ಹತ್ತನೇ ತರಗತಿಯಲ್ಲಿ ಮೊದಲ ರ್ಯಾಂಕ್ ಪಡೆದವನಿಗೆ ಗವರ್ಮೆಂಟ್  ಮೆರಿಟ್ ಸೀಟು ಸಿಕ್ಕಿ ಹೆಚ್ಚು ಖರ್ಚಿಲ್ಲದೆ ಇಂಜಿನಿಯರಿಂಗ್ ನಲ್ಲಿ ಟಾಪರ್ ಆದ. ಮುಂದೆ ವೈಜ್ಞಾನಿಕ ಸಂಶೋಧನೆಯತ್ತ ಅವನ ಆಸಕ್ತಿ ಬೆಳೆಯಿತು. ಮುಂದಿನ ಜೀವನದಲ್ಲಿ ಹೆಸರು ಹಣ ಗೌರವ ಎಲ್ಲವೂ ಅವನನ್ನು ಹುಡುಕಿಕೊಂಡು ಬಂತು. ಮದುವೆಯ ಬಗ್ಗೆ ಅವನ ಒಲವು ಇರಲಿಲ್ಲ. ಆದರೆ ಹೆತ್ತವರ ಒತ್ತಾಯಕ್ಕೆ ಮಣಿದು ವಧೂಪರೀಕ್ಷೆಗೆ ಹೋಗಲೇಬೇಕಾಯಿತು. ಹುಡುಗ ಹುಡುಗಿಯರ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವ ಸಂದರ್ಭದಲ್ಲಿ ತಾನು ಭೇಟಿಯಾದ ಪ್ರತಿಯೊಂದು ಹುಡುಗಿಯೂ ನೋಡಲು ರೂಪವತಿಯಾದರೂ ತಲೆಯಲ್ಲಿ ಬರೀ ಜೇಡಿಮಣ್ಣೇ ತುಂಬಿದೆ ಎನಿಸಿತವನಿಗೆ. ಒಂದು ಸ್ವಲ್ಪವೂ ಸಾಮಾನ್ಯ ಜ್ಞಾನವಿಲ್ಲ.ಆತ ಕೇಳುವ ಪ್ರಶ್ನೆಗಳೋ ಅವರ ತಲೆಯೊಳಗೆ ಹೋಗುತ್ತಿರಲಿಲ್ಲ. ಹವ್ಯಾಸವೇನೆಂದು ಪ್ರಶ್ನಿಸಿದರೆ..ಸಿನೆಮಾ ನೋಡುವುದು, ಸ್ನೇಹಿತರ ಜೊತೆ ಪಿಕ್ನಿಕ್, ಟೂರ್ ಹೋಗೋದು, ಶಾಪಿಂಗ್, ಹೊಸ ಅಡಿಗೆ ಕಲಿಯೋದು , ಕೇಕ್ ಮೇಕಿಂಗ್ ಇತ್ಯಾದಿ. ಅವನ ತಲೆಯಲ್ಲೋ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಆವಿಷ್ಕಾರಗಳು, ಭಾರತ ದೇಶ ಮುಂದಿನ ಹತ್ತು ವರ್ಷಗಳಲ್ಲಿ ಮಾಡಬಹುದಾದ ಸಾಧನೆಗಳು,ಇಂತಹ ದೊಡ್ಡ ದೊಡ್ಡ ವಿಷಯಗಳು ತುಂಬಿದ್ದು ತಾನು ಜೀವನ ಸಂಗಾತಿಯಾಗಿ ಹುಡುಕುತ್ತಿರುವ ಬಹುತೇಕ ಕನ್ಯೆಯರಲ್ಲಿ ಒಬ್ಬ ಹುಡುಗಿಯೂ ಪಾಸಾಗಲಿಲ್ಲ.ಪ್ರತಿಯೊಬ್ಬರಲ್ಲೂ ಏನಾದರೊಂದು ಕೊಂಕುಹಿಡಿದು ತೋರಿಸುತ್ತಿದ್ದ.ಬೇಸತ್ತ ಹೆತ್ತವರು ನಿನ್ನ ಲೆವೆಲ್ ಗೆ ಸರಿ ಹೊಂದುವಂತ ವಧುವನ್ನು ನೀನೇ ಹುಡುಕಿಕೋ ಎಂದು ಕೈಎತ್ತಿಬಿಟ್ಟರು. ವಾಸುಕಿ ಯಾವಾಗಲೂ ಸವಾಲೆಸೆದರೆ ಸೋಲುವ ಆಸಾಮಿಯೇ ಅಲ್ಲ. ತನ್ನ ಸಹೋದ್ಯೋಗಿಯರಲ್ಲೇ ಆತನ ಬುದ್ಧಿ ಮತ್ತೆಗೆ ಸರಿಹೊಂದುವ ಅವನಷ್ಟೇ ವಯಸ್ಸಿನ ಹೆಣ್ಣು ಅವನ ವಧೂಪರೀಕ್ಷೆಯಲ್ಲಿ ಪಾಸಾಗಿ ಬಾಳಸಂಗಾತಿಯಾದಳು. ಇಬ್ಬರೂ ತಮ್ಮತಮ್ಮ ಉದ್ಯೋಗ ಪ್ರಗತಿಯಲ್ಲಿ ವ್ಯಸ್ತರು. ಒಂದೇ ಗುಣ ಒಂದೇ ರೀತಿಯ ಮಹತ್ವಾಕಾಂಕ್ಷೆಯುಳ್ಳ ಜೋಡಿಯ ಮನದೊಳಗೆ ದಾಂಪತ್ಯವನ್ನು ನಡೆಸಿ ಕೊಂಡು ಹೋಗುವ ಯಾವ ತಾಳ್ಮೆ ಆಕಾಂಕ್ಷೆಗಳೂ ಇರಲಿಲ್ಲ. ಬರಬರುತ್ತಾ “ನೀನು ಮೇಲಾ ನಾನು ಮೇಲಾ” ಎಂಬ ಅಹಂಕಾರ ಮದುವೆಯೆಂಬ ಬಂಧನವನ್ನು ಕಿತ್ತೆಸೆದು ಡೈವರ್ಸ್ ನೀಡಿ ಬಿಡುಗಡೆ ಪಡೆಯುವಷ್ಟಕ್ಕೆ ಮುಟ್ಟಿತು. ಇದನ್ನು ‘ಇಗೋ ಕ್ಲ್ಯಾಶ್’ ಅನ್ನುತ್ತಾರೆ.
ಬದುಕೆನ್ನುವುದು ಒಂದು ಸ್ಪರ್ಧೆಯಲ್ಲ, ಸಂಘರ್ಷವೂ ಅಲ್ಲ. ಸರಳವಾಗಿ ಜೀವನವನ್ನು ಸಾಗಿಸುತ್ತ,ಅತೀ ಅಹಂಕಾರ, ಸ್ವ ಪ್ರತಿಷ್ಠೆ ಇಲ್ಲದೆ ನಡೆಸಿಕೊಂಡು ಹೋಗುವ ಒಂದು ಸುಂದರ ಅನುಭೂತಿ. ನಮ್ಮ ಸಾಧನೆ, ಗಳಿಸಿದ ಐಶ್ವರ್ಯ, ಪಡೆದ ಪದಕಗಳು , ಬಿರುದುಗಳು ಯಾವುದೂ ಸಂತೋಷ ನೆಮ್ಮದಿ ಕೊಡುವುದಿಲ್ಲ. ಬದುಕನ್ನು “ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿ” ಎಂಬಂತೆ ಸ್ವೀಕರಿಸಿದರೆ ಬದುಕಿನಲ್ಲಿ ಖಂಡಿತವಾಗಿಯೂ ಸಿಹಿಯಿರುತ್ತದೆ, ತಿಂದು ಹಂಚುವಷ್ಟು.

ಇತ್ತೀಚಿನ ಸುದ್ದಿ

ಜಾಹೀರಾತು