ಇತ್ತೀಚಿನ ಸುದ್ದಿ
ಅನಾಥವಾಗಿದೆ ಸರಕಾರಿ ವಿದ್ಯಾದೇಗುಲ; ನೈನಾಡು ಸರಕಾರಿ ಪದವಿಪೂರ್ವ ಕಾಲೇಜು ಕೇವಲ 13 ವರ್ಷದಲ್ಲೇ ಬಂದ್!!
22/06/2024, 14:17
*ಪದವಿ ಪೂರ್ವ ವಿದ್ಯಾಭ್ಯಾಸಕ್ಕೆ ಎರಡು ತಾಲೂಕುಗಳ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪರದಾಟ*
ಯಾದವ ಕುಲಾಲ್ ಅಗ್ರಬೈಲು ಬಿ.ಸಿ.ರೋಡ್
info.reporterkarnataka@gmail.com
ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿರುವ ಎರಡು ತಾಲೂಕುಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ, ಬಡ ವಿದ್ಯಾರ್ಥಿಗಳು ಪಿಯುಸಿ ಶಿಕ್ಷಣ ವಂಚಿತರಾಗುವುದನ್ನು ತಪ್ಪಿಸಲು ನಿರ್ಮಾಣ ಮಾಡಿದ ಸರಕಾರಿ ಪದವಿಪೂರ್ವ ಕಾಲೇಜು ಊರ ಗ್ರಾಮಸ್ಥರ ಸಹಕಾರ ಹಾಗೂ ಲಕ್ಷಾಂತರ ಖರ್ಚು ಮಾಡುವ ದಾನಿಗಳ ಸಹಕಾರ ಇದ್ದರೂ ಕೇವಲ 13 ವರ್ಷದಲ್ಲೇ ಬಾಗಿಲು ಮುಚ್ಚಿ ಮೌನವಾಗಿದೆ. ಹಲವಾರು ವರ್ಷಗಳಲ್ಲಿ ಈ ಕಾಲೇಜಿನಲ್ಲಿ ಮಕ್ಕಳ ಕಲರವ, ಉಪನ್ಯಾಸಕರ ಉಪನ್ಯಾಸ ಇಲ್ಲದೆ ಬಣಗುಡುತ್ತಿದೆ.
ಹೌದು, ಇದು ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕುಗಳ ಗಡಿ ಪ್ರದೇಶವಾದ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ನಯನಾಡು ಎಂಬಲ್ಲಿ ನಬಾರ್ಡ್ ಆರ್‌ಐಡಿಎಫ್-೧೨ ಇದರ ಯೋಜನೆಯಡಿಯಲ್ಲಿ ೨೦೦೯-೧೦ರಲ್ಲಿ ಆರಂಭಗೊಂಡ ನೈನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಕಥೆ. ಬಜಿರೆ, ಪೊಸಪಟ್ನ, ಕುಳಾಲ್, ಎಡ್ತೂರು, ನೇರಳಕಟ್ಟೆ, ಮೂರ್ಜೆ, ನಿನ್ಯಾರು, ದೆಂಚಿನಡ್ಕ ಹೀಗೆ ಎರಡೂ ತಾಲೂಕುಗಳ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಯನಾಡು ಪದವಿಪೂರ್ವ ಕಾಲೇಜಿನಿಂದ ಪಿಯುಸಿ ವಿದ್ಯಾಭ್ಯಾಸಕ್ಕಾಗಿ ತುಂಬಾ ಅನುಕೂಲವಾಗುತ್ತಿತ್ತು.
*ಹೇಗೆ ಸ್ಥಾಪನೆಯಾಯಿತು?:* ಸರಕಾರಿ ಪ್ರೌಢ ಶಾಲೆ ನಯನಾಡು ಇದರಲ್ಲಿ ೪.೧೦ ಎಕ್ರೆ ಭೂಮಿ ಇದ್ದು, ಇದರಲ್ಲಿ ರಸ್ತೆಗೆ ತಾಗಿಕೊಂಡಿರುವ ಜಾಗದಲ್ಲಿ ಈ ಕಾಲೇಜು ನಿರ್ಮಾಣವಾಯಿತು. ಕಾಲೇಜು ಆರಂಭದಲ್ಲಿ ಕೇವಲ ಎರಡು ಉಪನ್ಯಾಸಕರನ್ನು ನಿಯೋಜಿಸಿದ್ದು, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಕೊರತೆಯಾಗದಂತೆ ಸ್ಥಳೀಯ ಉದ್ಯಮಿಗಳು ಅತಿಥಿ ಉಪನ್ಯಾಸಕರನ್ನು ನೇಮಿಸುವ ಮುಖಾಂತರ ಕಾಲೇಜು ಉಳಿವಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರು. ವಿದ್ಯಾರ್ಥಿಗಳಿಗೆ ಹತ್ತಿರದಲ್ಲೇ ಇರುವ ಪ್ರೌಢ ಶಾಲೆಯಿಂದ ಮಧ್ಯಾಹ್ನದ ಬಿಸಿಯೂಟವನ್ನೂ ನೀಡುವ ವ್ಯವಸ್ಥೆ ಇದ್ದು, ವಿದ್ಯಾರ್ಥಿಗಳ ಕೊರತೆ ಎಂಬ ನೆಪವೊಡ್ಡಿ ಇಲಾಖೆಯಿಂದಲೇ ಕಾಲೇಜು ಬಂದು ಮಾಡಲು ಸೂಚನೆ ಬಂದಿದ್ದು ೨೦೨೨-೨೦೨೩ರಲ್ಲಿ ಕಾಲೇಜು ಬಂದ್ ಮಾಡಲಾಯಿತು.
*ಹೇಗಿತ್ತು ಕಾಲೇಜು?:* ಕಲಾ ಮತ್ತು ವಾಣಿಜ್ಯ ಈ ಎರಡು ವಿಭಾಗಗಳಲ್ಲಿ ಕಾಲೇಜು ಆರಂಭವಾಗಿರುತ್ತದೆ. ನಾಲ್ಕು ವಿಶಾಲವಾದ ತರಗತಿ ಕೊಠಡಿ, ಉಪನ್ಯಾಸಕರ ಮತ್ತು ಪ್ರಾಂಶುಪಾಲರ ಕೊಠಡಿ, ಒಟ್ಟು ಆರು ವಿಶಾಲವಾದ ಕೊಠಡಿಗಳು ಈ ಕಟ್ಟಡದಲ್ಲಿದೆ. ಅಷ್ಟೇ ಅಲ್ಲದೇ ಮುಂದಿನ ಕಟ್ಟಡದ ಅಭಿವೃದ್ಧಿಗಾಗಿ ಮಹಡಿ ಮೆಟ್ಟಿಲುಗಳನ್ನು ಮಾಡಿದ್ದು ಇದರಿಂದಾಗಿ ಕಟ್ಟಡದ ಮೇಲ್ಭಾಗದಲ್ಲೂ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇತ್ತು.
*ಈಗ ಹೇಗಿದೆ ಕಾಲೇಜು?:* ಕಾಲೇಜಿನ ಎದುರುಗಡೆ ಇರುವ ದ್ವಜಸ್ತಂಬದ ಸಿಂಹಗಳು ನಾಲ್ಕೂ ಬದಿಯಲ್ಲಿ ವಿದ್ಯಾರ್ಥಿಗಳ ಬರುವಿಕೆಗಾಗಿ ಕಾಯುತ್ತಿದೆ. ಕಾಲೇಜು ತರಗತಿಯ ಕೋಣೆಯಲ್ಲಿ ‘ವೆಲ್‌ಕಮ್ ಟೂ ಪಿಯುಸಿ’ ಎಂದು ವಿದ್ಯಾರ್ಥಿಗಳು ಅಂಟಿಸಿರುವ ಬಣ್ಣಕಾಗದದ ಅಲಂಕಾರಗಳೂ ಹಾಗೇ ಇದೆ. ಕಾಲೇಜು ಕಟ್ಟಡದ ಮಧ್ಯಭಾಗದಲ್ಲಿರುವ ಹೂವಿನ ಗಿಡಗಳಲ್ಲಿ ಮಳೆ ನೀರು ಬಿದ್ದು ಹೂ ಬಿಟ್ಟಿದೆ. ಕಾಲೇಜು ಕಟ್ಟಡದ ಹಿಂದುಗಡೆ ಪುಟ್ಟ ಗಿಡಗಳು ಮರವಾಗಿ ಬೆಳೆದಿದೆ. ಕ್ಲಾಸ್ ರೂಮ್‌ಗಳು ಯಾವುದೇ ಹಾನಿಯಾಗದೇ ದೂಳಿನಿಂದ ಕೂಡಿದೆ.
ಸರಕಾರದ ಯೋಜನೆಗಳಲ್ಲಿ ಕಟ್ಟಡಗಳು ನಿರ್ಮಾಣವಾಗಿ ನಂತರ ಅದನ್ನು ಎಲ್ಲಾ ವ್ಯವಸ್ಥೆಯೊಂದಿಗೆ ಮುಂದುವರಿಸಿಕೊಂಡು ಹೋದರೆ ಇಂತಹ ಕಾಲೇಜು ಕಟ್ಟಡಗಳು ಅನಾಥವಾಗುತ್ತಿರಲಿಲ್ಲ. ಈಗ ಇರುವ ಈ ಕಟ್ಟಡ ಸುಸಜ್ಜಿತವಾಗಿದ್ದು, ಜಡಿ ಮಳೆ ಆರಂಭವಾಗುವ ಮೊದಲೇ ಈ ಕಟ್ಟಡವನ್ನು ಸ್ವಚ್ಛತೆ ಮಾಡಿ ಯಾವುದಾದರೂ ಸಂಬಂಧ ಪಟ್ಟ ಇಲಾಖೆಗೆ ಕಟ್ಟಡ ಹಸ್ತಾಂತರಿಸಿ ಕಟ್ಟಡವನ್ನು ಉಳಿಸುವುದು ಅಗತ್ಯ.
ಸರಕಾರಿ ಕಾಲೇಜು ಉಳಿವಿಗಾಗಿ ಅನೇಕ ಪ್ರಯತ್ನ ಮಾಡಿದ್ದೇವೆ. ಗ್ರಾಮೀಣ ಭಾಗದಲ್ಲಿ ಸರಕಾರಿ ಕಾಲೇಜು ನಿರ್ಮಾಣ ಮಾಡಿರುವುದು ತುಂಬಾ ತಂತೋಷವಾಗಿತ್ತು. ಆದರೆ ಸರಕಾರ ಅದರ ಜೊತೆ ಸಂಬಂಧಪಟ್ಟ ವಿಷಯಕ್ಕೆ ಉಪನ್ಯಾಸಕರನ್ನು ಸಹ ನೇಮಕಾತಿ ಮಾಡಬೇಕಿತ್ತು. ವಿದ್ಯಾರ್ಥಿಗಳು ಅದೇ ನಿರೀಕ್ಷೆಯಲ್ಲಿರುತ್ತಿದ್ದರು. ಆದರೆ ವರ್ಷಹೋದಂತೆ ಪರ್ಮನೆಂಟ್ ಉಪನ್ಯಾಸಕರು ಈ ಕಾಲೇಜಿನಲ್ಲಿಲ್ಲದಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಾ ಬಂತು ಎಂದು
ಪಿಂಟೊ ಬೇಕರಿಯ ನೆವ್ಲುಸ್ಟರ್ ಹೇಳುತ್ತಾರೆ.
ಉಪನ್ಯಾಸಕರ ಕೊರತೆಯಿಂದ ಸಾಧ್ಯವಾದಷ್ಟು ಅತಿಥಿ ಉಪನ್ಯಾಸಕರನ್ನು ನೇಮಿಸಿ ಅವರ ಖರ್ಚು ನಾವೆಲ್ಲಾ ಜೊತೆಗೂಡಿ ಭರಿಸಿ ಕಾಲೇಜು ಉಳಿವಿಗಾಗಿ ತುಂಬಾ ಪ್ರಯತ್ನ ಪಟ್ಟಿದ್ದೇವೆ. ಸ್ಥಳೀಯ ಶಾಸಕರೊಂದಿಗೆ ಬೆಂಗಳೂರಿಗೆ ಹೋಗಿ ಅನೇಕ ಪ್ರಯತ್ನ ಮಾಡಿದ್ದೇವೆ. ಆದರೂ ಕಾಲೇಜು ಉಳಿಸುವಲ್ಲಿ ನಮ್ಮಿಂದಾಗಲಿಲ್ಲ ಎಂದು ಕ್ಯಾಶ್ಯೂ ಉದ್ಯಮಿ ಹರೀಂದ್ರ ಪೈ ನುಡಿಯುತ್ತಾರೆ.
ನಯನಾಡು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕೊರತೆ ಎಂದು ಅಲ್ಲಿನ ಪ್ರಾಂಶುಪಾಲರ ವರದಿಯ ನೀಡಿರುತ್ತಾರೆ. ಆ ನಂತರ ಇಲಾಖೆಯಿಂದಲೇ ಪರಿಶೀಲನೆ ಮಾಡಿದ್ದೇವೆ. ಆ ಊರಿನಲ್ಲಿರುವ ಎರಡು ಉದ್ಯಮಿಗಳು ಕಾಲೇಜು ಉಳಿವಿಗಾಗಿ ಉಪನ್ಯಾಸಕರನ್ನು ನೇಮಿಸಿ, ಅವರಿಗೆ ಖರ್ಚುಗಳನ್ನು ಅವರೇ ಭರಿಸಿ ತುಂಬಾ ಪ್ರಯತ್ನ ಪಟ್ಟಿದ್ದಾರೆ. ಆದರೂ ಕಾಲೇಜನ್ನು ಉಳಿಸಲು ಸಾಧ್ಯವಾಗಲಿಲ್ಲ.ಡಿಡಿಪಿಯು ಜಯಣ್ಣ ಹೇಳುತ್ತಾರೆ.