ಇತ್ತೀಚಿನ ಸುದ್ದಿ
ಆಸ್ಪತ್ರೆ ಮೇಲೆ ಪಾಕ್ ದಾಳಿ; 400ಕ್ಕೂ ಅಧಿಕ ಸಾವು: ಅಫ್ಘಾನ್ ಸರಕಾರ ಆರೋಪ
17/03/2026, 11:17
ಕಾಬೂಲ್(reporterkarnataka.com): ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಪುನರ್ವಸತಿ ಕೇಂದ್ರ ಆಸ್ಪತ್ರೆಯೊಂದರ ಮೇಲೆ ಸೋಮವಾರ ತಡರಾತ್ರಿ ವಾಯುದಾಳಿ ನಡೆದಿದ್ದು, 400ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು
ಅಫ್ಘಾನ್ ಸರ್ಕಾರ ಆರೋಪಿಸಿದೆ.
ಅಫ್ಘಾನ್ ಸರ್ಕಾರದ ವಕ್ತಾರ ಹಮ್ಹುಲ್ಲಾ ಫಿತ್ರತ್ ಈ ವಿಷಯ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ ಫಿತ್ರತ್, “ಕಾಬೂಲ್‌ನ ಆಸ್ಪತ್ರೆ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿದೆ. ದಾಳಿಯಿಂದ ಆಸ್ಪತ್ರೆಯ ಬಹುಭಾಗ ಧ್ವಂಸಗೊಂಡಿದ್ದು, ಹಲವರು ಸಾವನ್ನಪ್ಪಿದ್ದಾರೆ. ಗಾಯಾಳುಗಳ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ” ಎಂದು ಹೇಳಿದ್ದಾರೆ.
ಆದರೆ, ಇದಕ್ಕೆ ಪ್ರತಿಕ್ರಿಯಿಸಿದ ಪಾಕಿಸ್ತಾನ, ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. ಕಾಬೂಲ್ ಮೇಲೆ ನಡೆದ ದಾಳಿಯಲ್ಲಿ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಲಾಗಿಲ್ಲ, ಈ ಆರೋಪಗಳು ಸುಳ್ಳು ಹಾಗೂ ದಾರಿ ತಪ್ಪಿಸುವಂತಿವೆ ಎಂದು ಪಾಕ್ ಮಾಹಿತಿ ಸಚಿವಾಲಯ ಸ್ಪಷ್ಟಪಡಿಸಿದೆ.
ಇನ್ನೊಂದೆಡೆ, ದಾಳಿಯನ್ನು ಖಂಡಿಸಿರುವ ಅಫ್ಘಾನಿಸ್ತಾನದ ಸಚಿವರು, ಘಟನೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷ ಈಗ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಗಡಿಭಾಗದಲ್ಲಿ ಉದ್ಭವಿಸಿದ ಉದ್ವಿಗ್ನತೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರುವುದಾಗಿ ಹೇಳಲಾಗುತ್ತಿದೆ.
ಪಾಕಿಸ್ತಾನದ ಯುದ್ಧ ವಿಮಾನಗಳು ಕಾಬೂಲ್‌ನಲ್ಲಿರುವ ಮಾದಕ ವ್ಯಸನಿಗಳ ಚಿಕಿತ್ಸಾ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ. ಸುಮಾರು 2,000 ಹಾಸಿಗೆಗಳ ಸಾಮರ್ಥ್ಯದ ಈ ಬೃಹತ್ ಆಸ್ಪತ್ರೆಯ ಮೇಲೆ ರಾತ್ರಿ 9 ಗಂಟೆಗೆ ಬಾಂಬ್ ದಾಳಿ ನಡೆದಿದೆ. ಆಸ್ಪತ್ರೆಯ ಬಹುತೇಕ ಭಾಗ ಧ್ವಂಸಗೊಂಡಿದೆ. ಮೃತಪಟ್ಟ 400 ಜನರಲ್ಲಿ ಹೆಚ್ಚಿನವರು ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಾಗಿದ್ದಾರೆ. 250ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ವಕ್ತಾರ ಹಮ್ದುಲ್ಲಾ ಫಿತ್ರಾತ್ ಹೇಳಿದ್ದಾರೆ.












