ಇತ್ತೀಚಿನ ಸುದ್ದಿ
ನಾಯಿ ಅಡ್ಡ ಬಂದು ಬೈಕ್ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಸಾವು; ಶ್ವಾನ ಕೂಡ ಬಲಿ
01/11/2024, 20:02
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬೈಕಿಗೆ ಬೀದಿನಾಯಿ ಅಡ್ಡಬಂದು ಅಪಘಾತ ಸಂಭವಿಸಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಪಟ್ಟಣದಲ್ಲಿ ನಡೆದಿದೆ.
ಮೃತ ಯುವಕ ಗೋಣಿಬೀಡು ಸಮೀಪದ ಆನೆದಿಬ್ಬ ನಿವಾಸಿ ಜಾಫರ್ (24) ಎಂದು ಗುರುತಿಸಲಾಗಿದೆ.
ಆನೆದಿಬ್ಬ ಗ್ರಾಮದ ಇಸಾಕ್ ಎಂಬುವವರ ಪುತ್ರ ಜಾಫರ್ ಶುಕ್ರವಾರ ಬೆಳಿಗ್ಗೆ ಸಮೀಪದ ಬೆಟ್ಟದಮನೆಯ ಗ್ರಾಮದಲ್ಲಿ ತಾನು ಕೆಲಸ ಮಾಡಿದ್ದ ಹಣವನ್ನು ಪಡೆಯಲು ಹೋಗಿದ್ದರು ಎನ್ನಲಾಗಿದೆ. ಬೆಟ್ಟದಮನೆಯಿಂದ ವಾಪಾಸಾಗುತ್ತಿದ್ದ ವೇಳೆ ಗೋಣಿಬೀಡು ಪಟ್ಟಣ ವ್ಯಾಪ್ತಿಯಲ್ಲಿ ಬೀದಿನಾಯಿಯೊಂದು ಬೈಕಿಗೆ ಅಡ್ಡಬಂದಿದ್ದು, ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಚರಂಡಿಗೆ ಮಗುಚಿದೆ. ಈ ಸಂದರ್ಭ ಚರಂಡಿಗೆ ಅಳವಡಿಸಿದ್ದ ಸಿಮೆಂಟ್ ಚಪ್ಪಡಿಗಳಿಗೆ ಜಾಫರ್ ತಲೆ ಹೊಡೆದಿದ್ದು, ತೀವ್ರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ನಾಯಿಯೂ ಕೂಡ ಸ್ಥಳದಲ್ಲೇ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸ್ನೇಹಜೀವಿಯಾಗಿದ್ದ ಜಾಫರ್ ನಿಧನಕ್ಕೆ ಸ್ಥಳೀಯರು ಕಂಬನಿ ಮಿಡಿದಿದ್ದಾರೆ.