ಇತ್ತೀಚಿನ ಸುದ್ದಿ
ಆರಗಗೆ ಭಾರಿ ಮುಖಭಂಗ: ಪಲ್ಟಿ ಹೊಡೆದ ಗುಡ್ಡೇಕೊಪ್ಪ ಗ್ರಾಪಂ ಅವಿಶ್ವಾಸ ನಿರ್ಣಯ; ಗುರುವಿಗೆ ತಿರುಮಂತ್ರ ಹಾಕಿದ ಶಿಷ್ಯ..!
06/11/2025, 22:56
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಶಾಸಕ ಆರಗ ಜ್ಞಾನೇಂದ್ರ ಅವರ ಊರು ಆದ ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಅವಿಶ್ವಾಸ ನಿರ್ಣಯ ಪಲ್ಟಿ ಹೊಡೆದಿದೆ. ಹಾಲಿ ಅಧ್ಯಕ್ಷ ಅಗಸಾಡಿ ಶಾಮಣ್ಣ ವಿರುದ್ಧ ಶಾಸಕ ಆರಗ ಜ್ಞಾನೇಂದ್ರರೇ ರೂಪಿಸಿದ್ದ ಅವಿಶ್ವಾಸ ನಿರ್ಣಯ ಗುರುವಾರ ಮಂಡನೆಯಾಗಿದೆ. ಅಗಸಾಡಿ ಶಾಮಣ್ಣನ ವಿರುದ್ಧ 6 ಮತ ಚಲಾವಣೆಯಾಗಿದ್ದು 4 ಸದಸ್ಯರು ಗೈರಾಗಿದ್ದಾರೆ. ಇದರಿಂದಾಗಿ ಅವಿಶ್ವಾಸ ನಿರ್ಣಯ ಪಲ್ಟಿ ಹೊಡೆದಿದೆ..
ರಾಜ್ಯದ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರರವರು ಸ್ವಕ್ಷೇತ್ರ ಗುಡ್ಡೇಕೊಪ್ಪ ಗ್ರಾಮ ಪಂಚಾಯತಿಯ ಮೇಲೆ ಹಲವು ವರ್ಷಗಳಿಂದ ನಿಯಂತ್ರಣ ಸಾಧಿಸಿದ್ದರು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಬ್ಯಾನರ್ ಹಿಡಿಯುವವರು ಕೂಡ ಇರಲಿಲ್ಲ. ಅವಿಶ್ವಾಸ ನಿರ್ಣಯ ಮಂಡನೆ ತಮ್ಮ ಪರವಾಗಿ ನಡೆದೆ ನಡೆಯುತ್ತದೆ ಎಂಬ ನಂಬಿಕೆಯಲ್ಲಿದ್ದ ಬಿಜೆಪಿ ಬೆಂಬಲಿತ ಸದಸ್ಯರು ಸೇರಿದಂತೆ ಶಾಸಕರಿಗೆ ಮುಖಭಂಗವಾಗಿದೆ.
ಕಟ್ಟ ಬಿಜೆಪಿ ಅಭಿಮಾನಿ, ಆರಗ ಜ್ಞಾನೇಂದ್ರ ಅವರ ಶಿಷ್ಯರಾಗಿರುವ ಅಗಸಾಡಿ ಶಾಮಣ್ಣ ಬಿಜೆಪಿ ತಂತ್ರಗಾರಿಕೆಗೆ ತಿರುಮಂತ್ರ ರೂಪಿಸಿ ನಾಲ್ವರು ಸದಸ್ಯರು ಅವಿಶ್ವಾಸ ನಿರ್ಣಯ ಸಭೆಗೆ ಹಾಜರಾಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಗುಡ್ಡೇಕೊಪ್ಪದಲ್ಲಿ ಹಲವು ವರ್ಷಗಳಿಂದ ಹಿಡಿತ ಸಾಧಿಸಿದ್ದ ಜ್ಞಾನೇಂದ್ರರ ಅಸ್ಥಿತ್ವ ಅಲುಗಾಡುವಂತೆ ಮಾಡಿದ್ದಾರೆ.
ಜಯಪೂಜಾರಿ ಹಿರೇಸರ (ಉಪಾಧ್ಯಕ್ಷರು), ರಾಘವೇಂದ್ರ ಪವರ್, ಸೂರ್ಯಕಲ ರವಿ, ಉಮಚಂದ್ರನಯ್ಕ್, ಗುರುಮೂರ್ತಿ ಗೌಡ್ರು, ಮಮತಾ ಗೋವಿಂದಪ್ಪ ಆವಿಶ್ವಾಸ ಸಭೆಗೆ ಹಾಜರಾಗಿ ಮತ ಚಲಾಯಿಸಿದರು. ಅಧ್ಯಕ್ಷ ಅಗಸಾಡಿ ಶಾಮಪ್ಪ, ಸಂದೇಶ ಶೆಟ್ಟಿ ಜಯಪುರ, ನಾಗರತ್ನ ಯಲ್ಲಪ್ಪ, ಜಯಂತಿ ರಮೇಶ್ ಸಭೆಗೆ ಗೈರಾಗಿದ್ದಾರೆ.












