ಇತ್ತೀಚಿನ ಸುದ್ದಿ
New Delhi | ಭಾರತದಲ್ಲಿ 3,343 GW ಸೌರಶಕ್ತಿ ಉತ್ಪಾದನಾ ಸಾಮರ್ಥ್ಯ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
23/09/2025, 21:18

ನವದೆಹಲಿ(reporterkarnataka.com): ಭಾರತ ಸೌರಶಕ್ತಿ ಉತ್ಪಾದನೆಯಲ್ಲಿ ಜಾಗತಿಕ ಮುಂಚೂಣಿಯಲ್ಲಿದ್ದು, MNRE ಸೌರ PV ಸಂಭಾವ್ಯ ಮೌಲ್ಯಮಾಪನ ವರದಿ ಪ್ರಕಾರ ದೇಶಾದ್ಯಂತ 3,343 GW ಸೌರಶಕ್ತಿ ಉತ್ಪಾದನಾ ಸಾಮರ್ಥ್ಯ ಹೊಂದಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ದೆಹಲಿಯ MNRE ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ʼಭಾರತದ ಸೌರ ಪಿವಿ ಸಂಭಾವ್ಯ ಮೌಲ್ಯಮಾಪನʼ ವರದಿ ಬಿಡುಗಡೆ ಮಾಡಿ ಮತ್ತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೌರಶಕ್ತಿ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿ ಹೆಜ್ಜೆಯಿರಿಸಿದ್ದು, ಶುದ್ಧ ಇಂಧನದ ಭವಿಷ್ಯ ರೂಪಿಸುತ್ತಿದೆ ಎಂದು ಪ್ರತಿಪಾದಿಸಿದರು.
ಇಸ್ರೋ ಸಹಯೋಗದೊಂದಿಗೆ ಜಿಯೋ ಸ್ಪೇಷಲ್ ಮತ್ತು ಬಹು-ಪ್ಯಾರಾಮೀಟರ್ ವಿಧಾನವು ಸೌರಶಕ್ತಿ ಉತ್ಪಾದನೆಯಲ್ಲಿ ಮಾದರಿ ಬದಲಾವಣೆ ಕಂಡಿದೆ. ಇದರಲ್ಲಿ ʼನಾರಿ ಶಕ್ತಿʼಯೂ ಮುಂಚೂಣಿಯಲ್ಲಿದೆ. ಅಂತರಾಷ್ಟ್ರೀಯ ಸೌರ ತರಬೇತಿ ಕಾರ್ಯಕ್ರಮದಡಿ 15 ರಾಷ್ಟ್ರಗಳ 28 ಮಹಿಳಾ ತರಬೇತಿದಾರರು ಪಾಲ್ಗೊಂಡಿರುವುದೇ ಇದಕ್ಕೆ ನಿದರ್ಶನ ಎಂದು ಹೇಳುತ್ತ ಅವರೊಂದಿಗೆ ಸಂವಾದ ಸಹ ನಡೆಸಿದರು.
ಸೇವಾ ಪರ್ವ್ ಆಶ್ರಯದಲ್ಲಿ ಗುರುಗ್ರಾಮ್‌ನ ರಾಷ್ಟ್ರೀಯ ಸೌರಶಕ್ತಿ ಸಂಸ್ಥೆಯಲ್ಲಿ (NISE) ಸೌರ ಕೋಶ ಮತ್ತು ಮಾಡ್ಯೂಲ್ ತಯಾರಿಕೆ ಕುರಿತು ಪ್ರಥಮ ತರಬೇತಿ ಕಾರ್ಯಕ್ರಮ ಆಯೋಜಿಸುವ ಮೂಲಕ ಭಾರತ ಶುದ್ಧ ಇಂಧನ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆಯುತ್ತಿದೆ ಎಂದು ಹೇಳಿದರು.
ಭಾರತ 3,343 GW ಸೌರಶಕ್ತಿ ಸಾಮರ್ಥ್ಯ ಹೊಂದಿದ್ದು, ಇದಕ್ಕಾಗಿ ಒಟ್ಟಾರೆ ಶೇ.6.69ರಷ್ಟು ಪಾಳುಭೂಮಿಯನ್ನು ಬಳಸಿಕೊಳ್ಳುತ್ತಿದೆ. ರಾಜಸ್ಥಾನ, ಗುಜರಾತ್‌ನ ಮರುಭೂಮಿ ಪ್ರದೇಶ ಹೊರತುಪಡಿಸಿ ಇತರೆ ರಾಜ್ಯಗಳು ಸೌರ ಪಿವಿಗಳ ಅಳವಡಿಕೆಗೆ ಹೆಚ್ಚಿನ ಸಾಮರ್ಥ್ಯ ಹೊಂದಿವೆ ಎಂಬುದು MNRE ಮೌಲ್ಯಮಾಪನ ವರದಿ ಉಲ್ಲೇಖಿಸಿದೆ ಎಂದರು.
*ರಾಜ್ಯಗಳ ಗಮನಾರ್ಹ ಕೊಡುಗೆ:* ರಾಜಸ್ಥಾನ, ಮಹಾರಾಷ್ಟ್ರ ಮತ್ತು ಗುಜರಾತ್‌ನ ಪ್ರಸಿದ್ಧ ಪ್ರದೇಶಗಳಲ್ಲದೆ, ವಿಶಾಲವಾದ ಪಾಳುಭೂಮಿ ಲಭ್ಯತೆ ಮತ್ತು ಹೆಚ್ಚಿನ ವಿಕಿರಣಶೀಲತೆಯಿಂದಾಗಿ ಇತರೆ ರಾಜ್ಯಗಳು ಸಹ ಸೌರ ಸ್ಥಾವರ ಅಳವಡಿಕೆಯಲ್ಲಿ ಹೆಚ್ಚಿನ ಸಾಮರ್ಥ್ಯವುಳ್ಳವಾಗಿವೆ. ಆಯಾ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಗಮನಾರ್ಹ ಕೊಡುಗೆ ನೀಡಬೇಕೆಂದು ಮನವಿ ಮಾಡಿದರು.
ಸೌರ ಯೋಜನೆ ಸ್ಥಾಪನೆ, ಮೂಲಸೌಕರ್ಯ ಅಭಿವೃದ್ಧಿ, ಖಾಸಗಿ ವಲಯದ ಸಹಭಾಗಿತ್ವ ಹಾಗೂ ಹೂಡಿಕೆಗೆ ಸಿದ್ಧ ಚೌಕಟ್ಟನ್ನು ರೂಪಿಸುತ್ತದೆ. ಅದರಂತೆ ಭಾರತ 2047ರ ವೇಳೆಗೆ ಇಂಧನ ಸ್ವಾವಲಂಬಿಯಾಗುವ ಜತೆಗೆ 2070ರ ವೇಳೆಗೆ ನಿವ್ವಳ-ಶೂನ್ಯ ಹೊರಸೂಸುವಿಕೆಯ ಗುರಿಯನ್ನು ತಲುಪಲಿದೆ. ಭಾರತದಾದ್ಯಂತ 3,343 GW ಸೌರ ಶಕ್ತಿ ಸಾಮರ್ಥ್ಯದ ಅಂದಾಜು ಮಾಡಿದೆ ಎಂದು ಸಚಿವ ಜೋಶಿ ಹೇಳಿದರು.
2030ರ ವೇಳೆಗೆ 500 GW ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ಗುರಿ ಸಾಧಿಸುವತ್ತ ನಿರ್ಣಾಯಕ ಹೆಜ್ಜೆಯಿರಿಸುವ ಭಾರತ ಈಗಾಗಲೇ 250 GW ಪಳೆಯುಳಿಕೆಯೇತರ ಸ್ಥಾಪಿತ ವಿದ್ಯುತ್ ಸಾಮರ್ಥ್ಯವನ್ನು ದಾಟಿದೆ ಮತ್ತು 2030ರ ಗಡುವಿಗೆ 5 ವರ್ಷಗಳ ಮೊದಲೇ ಶೇ.50ರಷ್ಟು ಗುರಿ ಸಾಧಿಸಿದೆ. ಅಲ್ಲದೇ, ವಾರ್ಷಿಕ 100 GWಗಿಂತ ಹೆಚ್ಚಿನ ಸೌರ PV ಮಾಡ್ಯೂಲ್ ಸಾಮರ್ಥ್ಯ ಮತ್ತು 20 GWಗಿಂತ ಹೆಚ್ಚಿನ ಪವನ ಟರ್ಬೈನ್ ಉತ್ಪಾದನಾ ಸಾಮರ್ಥ್ಯದೊಂದಿಗೆ ದೇಶೀಯ ಉತ್ಪಾದನಾ ನೆಲೆಯನ್ನು ಸೃಷ್ಟಿಸಿದೆ ಎಂದು ಹೇಳಿದರು.
*ನಿತ್ಯ 3.5 ರಿಂದ 5.5 kWh/m² ಸೌರ ವಿಕಿರಣ:* ಭಾರತ ವಿಶ್ವದ ಅತ್ಯಂತ ಶ್ರೀಮಂತ ಸೌರ ಸಂಪನ್ಮೂಲಗಳಲ್ಲಿ ಒಂದಾಗಿದ್ದು, ದೇಶದ ಹೆಚ್ಚಿನ ಭಾಗಗಳಲ್ಲಿ ಸರಾಸರಿ ವಿಕಿರಣವು ದಿನಕ್ಕೆ 3.5 ರಿಂದ 5.5 kWh/m² ವರೆಗೆ ಇರುತ್ತದೆ. ಈಗಾಗಲೇ 100 GWಗಿಂತ ಹೆಚ್ಚು ಸ್ಥಾಪಿತ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯ ಮತ್ತು 15GWಗಿಂತ ಹೆಚ್ಚು ಸೌರ ಕೋಶ ಉತ್ಪಾದನಾ ಸಾಮರ್ಥ್ಯವನ್ನು ಸಾಧಿಸಿದೆ. ಈ ಮೂಲಕ ಸ್ವಾವಲಂಬಿ ಮತ್ತು ಜಾಗತಿಕವಾಗಿ ಸೌರ ಉತ್ಪಾದನಾ ಪರಿಸರಕ್ಕೆ ವಿಶಿಷ್ಠ ಕೊಡುಗೆ ನೀಡುತ್ತದೆ ಎಂದು ಹೇಳಿದರು.
*ಮಹಿಳಾ ಸಬಲೀಕರಣ-ಅಂತರಾಷ್ಟ್ರೀಯ ಸಹಕಾರ:* ಸೌರಶಕ್ತಿ ತಂತ್ರಜ್ಞಾನ ಮತ್ತು ಮಹಿಳೆಯರಿಗಾಗಿ ಆಯೋಜಿಸಿದ್ದ ಅಂತರಾಷ್ಟ್ರೀಯ ತರಬೇತಿ ಕಾರ್ಯಕ್ರಮದಲ್ಲಿ 15 ರಾಷ್ಟ್ರಗಳ 28 ಮಹಿಳಾ ತರಬೇತಿದಾರರು ಪಾಲ್ಗೊಂಡಿದ್ದು, ಸಚಿವರು ಸಂವಾದ ನಡೆಸಿದರು. ಭಾರತದ ಶುದ್ಧ ಇಂಧನ ಪರಿವರ್ತನೆ ತಂತ್ರಜ್ಞಾನ ಮಾತ್ರವಲ್ಲ, ಮಹಿಳಾ ಸಬಲೀಕರಣವನ್ನೂ ಸಾಕಾರಗೊಳಿಸುತ್ತಿದೆ ಎನ್ನುತ್ತ ಪ್ರಧಾನಿ ಮೋದಿ ಅವರ ʼಸೌರ ದೀದಿʼಯ ದೃಷ್ಟಿಕೋನ ಬಗ್ಗೆ ವಿಶ್ಲೇಷಿಸಿದರು.
*ಜಾಗತಿಕ ನಾಯಕತ್ವಕ್ಕೆ ಭಾರತ ಸಜ್ಜು:* ನವೀಕರಿಸಬಹುದಾದ ಇಂಧನ ಪ್ರಯಾಣದಲ್ಲಿ ನಾರಿ ಶಕ್ತಿ ಮುಂಚೂಣಿಯಲ್ಲಿದೆ. ನಿರಂತರ ಪ್ರಯತ್ನ, ಜಾಗತಿಕ ಮತ್ತು ದೇಶೀಯ ಪಾಲುದಾರಿಕೆ ಮತ್ತು ನಾಗರಿಕರ ಸಕ್ರಿಯ ಸಹಭಾಗಿತ್ವ, ಇಂಧನ ಸುರಕ್ಷತೆ, ಆರ್ಥಿಕ ಬೆಳವಣಿಗೆ ಮತ್ತು ಪರಿಸರ ಸುಸ್ಥಿರತೆಯು ʼಶುದ್ಧ ಇಂಧನ ಪರಿವರ್ತನೆʼಯಲ್ಲಿ ಭಾರತವು ಜಾಗತಿಕ ನಾಯಕನಾಗಿ ಹೊರಹೊಮ್ಮಲು ಸಜ್ಜಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಘೋಷಿಸಿದರು.