ಇತ್ತೀಚಿನ ಸುದ್ದಿ
ಉಪರಾಷ್ಟ್ರಪತಿ ಚುನಾವಣೆ: ರಾಧಾಕೃಷ್ಣನ್ ನಾಮಪತ್ರ ಸಲ್ಲಿಕೆ; ಪ್ರಧಾನಿ ಮೋದಿ, ಸಚಿವರಾದ ರಾಜನಾಥ್ ಸಿಂಗ್, ಜೋಶಿ ಸಾಥ್
20/08/2025, 21:51

ನವದೆಹಲಿ(reporterkarnataka.com): ಸಂವಿಧಾನಿಕ ಉಪರಾಷ್ಟ್ರಪತಿ ಚುನಾವಣೆಗೆ ಇಂದು ಎನ್ ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಮುಖ ಸಚಿವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.
ಈ ವೇಳೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಪ್ರಮುಖರನೇಕರು ರಾಧಾಕೃಷ್ಣನ್ ಅವರಿಗೆ ಸಾಥ್ ನೀಡಿದರು.
ಇದಕ್ಕೂ ಮುನ್ನ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ಗೃಹ ಕಚೇರಿಯಲ್ಲೇ ನಾಮಪತ್ರ ಸಲ್ಲಿಕೆಯ ಅಂತಿಮ ಸಿದ್ಧತೆ ನಡೆಸಿ, ಬಳಿಕ ಎನ್ ಡಿಎ ಆಪ್ತರೊಂದಿಗೆ ತೆರಳಿದರು.
ಉಪರಾಷ್ಟ್ರಪತಿ ಹುದ್ದೆಗೆ ರಾಧಾಕೃಷ್ಣನ್ ಅವರ ಹೆಸರು ಘೋಷಿಸಿದ ದಿನದಿಂದಲೇ ಬಿಜೆಪಿ ಮತ್ತು ಎನ್ ಡಿಎ ಮೈತ್ರಿಕೂಟದಲ್ಲಿ ಪ್ರಕ್ರಿಯೆ ಚುರುಕುಗೊಂಡಿದ್ದು, ಕಳೆದ ಎರಡು ದಿನಗಳಿಂದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನವದೆಹಲಿಯ ಗೃಹ ಕಚೇರಿ ಎನ್ ಡಿಎ ಕೇಂದ್ರಬಿಂದುವಾಗಿ ಗಮನ ಸೆಳೆಯಿತು.
ಉಪರಾಷ್ಟ್ರಪತಿ ಅಭ್ಯರ್ಥಿ ರಾಧಾಕೃಷ್ಣನ್ ಅವರು ತಮ್ಮ ಆಪ್ತರಾಗಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಗೃಹದಲ್ಲೇ ತಂಗಿದ್ದರಿಂದ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಸಂಸದರು ಹಾಗೂ ಕೇಂದ್ರ ಸರ್ಕಾರದ ಪ್ರಮುಖ ಸಚಿವರುಗಳು ಆಗಮಿಸಿ ಬೆಂಬಲ ಸೂಚಿಸುವ ಜತೆಗೆ ಶುಭ ಹಾರೈಸುತ್ತಿದ್ದರು.
ಉಪರಾಷ್ಟ್ರಪತಿ ಅಭ್ಯರ್ಥಿ ರಾಧಾಕೃಷ್ಣನ್ ಅವರು ಇಂದು ನಾಮಪತ್ರ ಸಲ್ಲಿಕೆಗೆ ಸಚಿವ ಪ್ರಲ್ಹಾದ ಜೋಶಿ ಅವರ ಗೃಹದಿಂದ ತೆರಳುವ ಸಂದರ್ಭದಲ್ಲಿ ತಮ್ಮೊಂದಿಗೆ ಸಚಿವ ಪ್ರಲ್ಹಾದ ಜೋಶಿ, ಕಿರಣ್ ರಿಜಿಜು, ಅರ್ಜುನ್ ರಾಮ್ ಮೇಘವಾಲ್ ಸೇರಿದಂತೆ ಎನ್ ಡಿಎ ಪ್ರಮುಖರು ಜತೆಗಿದ್ದರು.