ಇತ್ತೀಚಿನ ಸುದ್ದಿ
ಎಸ್ಐಟಿ ಇನ್ಸ್ ಪೆಕ್ಟರ್ ಧರ್ಮಸ್ಥಳ ಗ್ರಾಪಂಗೆ ಭೇಟಿ: ಯುಡಿಆರ್ ದಾಖಲೆ, ಅಧಿಕಾರಿಗಳ ವಿವರ ಸಂಗ್ರಹ
06/08/2025, 18:11

ಧರ್ಮಸ್ಥಳ(reporterkarnataka.com): ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ 1995ರಿಂದ 2014ರ ವರೆಗೆ ಧರ್ಮಸ್ಥಳ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳ ದಾಖಲೆಗಳನ್ನು ಸಂಗ್ರಹಿಸಲು ಇಂದು ವಿಶೇಷ ತನಿಖಾ ತಂಡದ (ಎಸ್ಐಟಿ) ಇನ್ಸ್ ಪೆಕ್ಟರೊಬ್ಬರು ಪಂಚಾಯಿತಿಗೆ ಭೇಟಿ ನೀಡಿದ್ದಾರೆ.
ಎಸ್ಐಟಿ ಇನ್ಸ್ ಪೆಕ್ಟರ್ ಸಂಪತ್ ಅವರು ಧರ್ಮಸ್ಥಳ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ವಿವರಗಳನ್ನು ಕಲೆ ಹಾಕಿದ್ದಾರೆ.
ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳ ವಿವರ ಹಾಗೂ ಅಸಹಜ ಸಾವಿನ(ಯುಡಿಆರ್) ದಾಖಲೆಗಳನ್ನು ಇನ್ಸ್ ಪೆಕ್ಟರ್ ಸಂಪತ್ ಅವರು ಸಂಗ್ರಹಿಸಿದ್ದಾರೆ.
ಅನಾಮಿಕ ದೂರುದಾರ ನೀಡಿದ ದೂರಿನನ್ವಯ ಈ ಕಾರ್ಯಾಚರಣೆ ಆರಂಭಿಸಲಾಗಿದೆ. ದೂರುದಾರ ಕಾರ್ಮಿಕನು 1995ರಿಂದ 2014ರ ವರೆಗೆ ಧರ್ಮಸ್ಥಳ ಗ್ರಾಮದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೃತದೇಹವನ್ನು ಅಧಿಕಾರಿಗಳ ಸೂಚನೆ ಮೇರೆಗೆ ಗುಪ್ತವಾಗಿ ಹೂತಿಟ್ಟಿದ್ದಾಗಿ ಆರೋಪಿಸಿದ್ದಾನೆ. ಈ ಕುರಿತು ಜುಲೈ 4ರಂದು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜುಲೈ 19ರಂದು ಎಸ್ಐಟಿ ರಚನೆಯಾದ ಬಳಿಕ ಪ್ರಕರಣವನ್ನು ಎಸ್ಐಟಿಗೆ ಹಸ್ತಾಂತರಿಸಲಾಯಿತು.