11:26 PM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

New Delhi | ರಾಜ್ಯದಲ್ಲಿ ಯೂರಿಯಾ ವಿತರಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ: ದಿಲ್ಲಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪ

28/07/2025, 22:40

ದೆಹಲಿ(reporterkarnataka.com): ಹತ್ತು ಹದಿನೈದು ದಿನಗಳಲ್ಲಿ ಕರ್ನಾಟಕಕ್ಕೆ ಅಗತ್ಯವಿರುವ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರವನ್ನು ಪೂರೈಸುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ.ಪಿ. ನಡ್ಡಾ ತಿಳಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ನವ ದೆಹಲಿಯಲ್ಲಿ ಇಂದು ರಾಜ್ಯದ ಬಿಜೆಪಿ ಸಂಸದರ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಕರ್ನಾಟಕದಲ್ಲಿ ರೈತರಿಗೆ ಸಕಾಲಕ್ಕೆ ಯುರಿಯಾ ಗೊಬ್ಬರ ಸಿಗುತ್ರಿಲ್ಲ. ಇದು ದಿಡೀರ್ ಉದ್ಭವಿಸಿದ ಸಮಸ್ಯೆ ಅಲ್ಲ. ಮುಂಗಾರು ಹಾಗೂ ಮುಂಗಾರು ಪೂರ್ವ ಮಳೆ ಈ ವರ್ಷ ಚನ್ನಾಗಿ ಬಂದಿರುವುದರಿಂದ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ರೈತರು ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಮೆಕ್ಕೆ ಜೋಳ ಬಿತ್ತನೆ ಪ್ರದೇಶ ಈ ವರ್ಷ ಶೇ 1.5 ರಷ್ಟು ಹೆಚ್ಚಳವಾಗಿದೆ. ಅಷ್ಟು ಪ್ರಮಾಣದಲ್ಲಿ ಬಿತ್ತನೆಯಾಗಿರುವುದು ಕೃಷಿ ಇಲಾಖೆಗೆ ಗೊತ್ತಿದೆ. ಅದನ್ನು ಇಲಾಖೆ ಒಪ್ಪಿಕೊಂಡಿದೆ. ಸಾಮಾನ್ಯವಾಗಿ ಯುರಿಯಾ ಬಹಳ ಬೇಡಿಕೆ ಜುಲೈ ನಿಂದ ಪ್ರಾರಂಭವಾಗಿ ಆಗಸ್ಟ್ ವರೆಗೂ ಇರುತ್ತದೆ. ಆದರೆ, ಸಮಯಕ್ಕೆ ಸರಿಯಾಗಿ ಮಳೆ ಆಗಿರುವುದರಿಂದ ಜೂನ್ ಮೂರನೇ ವಾರದಿಂದಲೇ ಗೊಬ್ಬರದ ಬೇಡಿಕೆ ಪ್ರಾರಂಭವಾಗಿದೆ ಎಂದರು.
ಸಾಮಾನ್ಯವಾಗಿ ರೈತರು ಒಂದು ಬಾರಿ ಯೂರಿಯಾ ಗೊಬ್ಬರ ಹಾಕುತ್ತಾರೆ. ಆದರೆ, ಈ ಬಾರಿ ಒಂದು ಸಾರಿ ಹಾಕಿದ ನಂತರ ಮಳೆಯಾಗಿ ಮತ್ತೊಂದು ಸಾರಿ ಹಾಕಿದಾಗಲೂ ಮಳೆಯಾಗಿ ಮೂರು ಬಾರಿ ಗೊಬ್ಬರ ಹಾಕುವ ಪರಿಸ್ಥಿತಿ ನಿರ್ಮಾಣ ಆಗಿದೆ. ಪದೇ ಪದೇ ಯುರಿಯಾ ಹಾಕುವುದರಿಂದ ರೈತರಿಗೆ ಅರ್ಥಿಕ ಸಂಕಷ್ಟ ಬಂದೊದಗಿದೆ. ಅದಲ್ಲದೇ ಗೋವಿನ ಜೋಳದಲ್ಲಿ ಕಸ ಬೆಳೆದಿದ್ದರಿಂದ ಕೂಲಿ ಕಾರ್ಮಿಕರ ಕೊರತೆಯಿಂದ ಅದಕ್ಕೂ ಔಷಧ ಹೊಡೆಯುವ ಪರಿಸ್ಥಿತಿ ಬಂದಿದೆ. ಇದರಿಂದ ರೈತರಿಗೆ ಸಾಕಷ್ಟು ಆರ್ಥಿಕ ಹೊರೆಯಾಗುತ್ತಿದೆ. ಇದರ ಹೊರತಾಗಿ ಗೊಬ್ಬರ ಡೀಲರ್ ಅಂಗಡಿಗಳ ಮುಂದೆ ಹಗಲು ರಾತ್ರಿ ನಿಲ್ಲುವುದರಿಂದ ಬಹಳ ಕ್ಷೋಭೆ ಉಂಟಾಗಿದೆ ಇದರಿಂದ ರೈತರು ಬಹಳ ಉಗ್ರವಾಗಿ ಪ್ರತಿಭಟಿಸಿದ್ದಾರೆ. ಈ ಸಮಸ್ಯೆ ಸುಮಾರು ಎಂಟತ್ತು ಜಿಲ್ಲೆಗಳಲ್ಲಿ ತೀರ್ವವಾಗಿದೆ. ಮೂರ್ನಾಲ್ಕು ಜಿಲ್ಲೆಗಳಲ್ಲಿ ಸಾಮಾಮ್ಯವಾಗಿದೆ ಎಂದರು.

*ಕೃಷಿ ಇಲಾಖೆ ವಿಫಲ:*
ಕೃಷಿ ಇಲಾಖೆ ಹವಾಮಾನದಲ್ಲಿ ಆಗಿರುವ ಬದಾವಣೆಯನ್ನು ತಿಳಿದುಕೊಂಡು ಬಫರ್ ಸ್ಟಾಕ್ ಇಟ್ಟುಕೊಳ್ಳಬೇಕಿತ್ತು. ಕಳೆದ ವರ್ಷ ಎಷ್ಟು ಗೊಬ್ಬರ ಬಳಕೆಯಾಗಿತ್ತು ಅದನ್ನು ಲೆಕ್ಕ ಹಾಕಿ ಈ ವರ್ಷದ ಅಗತ್ಯತೆಯನ್ನು ಅರಿತುಕೊಂಡು ಶೇಖರಣೆ ಮಾಡಿಟ್ಟುಕೊಳ್ಳಬೇಕಿತ್ತು. ಕೇಂದ್ರ ಸರ್ಕಾರ ಒದಗಿಸಿರುವ ಗೊಬ್ಬರವನ್ನು ಹಂಚುವ ಕೆಲಸ ರಾಜ್ಯ ಸರ್ಕಾರದ್ದು, ಕೇಂದ್ರ ಸರ್ಕಾರ ಗೊಬ್ಬರವನ್ನೂ ರೈಲ್ಬೆ ವ್ಯಾಗನ್ ಕೊಟ್ಟು ಹತ್ತಿರದ ಯಾರ್ಡ್ ವರೆಗೂ ಎಲ್ಲ ಜವಾಬ್ದಾರಿ ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದೆ. ಅಲ್ಲಿಂದ ರಾಜ್ಯ ಸರ್ಕಾರ ವಿತರಣೆ ಮಾಡಬೇಕು. ಗೊಬ್ಬರ ವಿತರಣೆಯಲ್ಲಿ ಅವ್ಯವಸ್ಥೆ ಆಗಿದೆ. ಕೃಷಿ ಇಲಾಖೆ ರೈತರ ಅಂದಾಜು ಬೇಡಿಕೆಯನ್ನು ಅರಿತುಕೊಳ್ಳಲು ವಿಫಲವಾಗಿದೆ ಎಂದು ಆರೋಪಿಸಿದರು.

*ಭ್ರಷ್ಟಾಚಾರ:*
ರಾಜ್ಯದಲ್ಲಿ ಗೊಬ್ಬರ ವಿತರಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ.‌ ಕರ್ನಾಟಕದಲ್ಲಿ ಗೊಬ್ಬರ ಇದೆ. ಆದರೆ, ರೈತರಿಗೆ ಸಿಗುತ್ತಿಲ್ಲ. ಶ್ರೀಮಂತ ರೈತರು ಹೆಚ್ಚುವರಿ ದುಡ್ಡು ಕೊಟ್ಟು ಗೊಬ್ಬರ ಖರಿದಿಸುತ್ತಿದ್ದಾರೆ. ಆದರೆ, ಸಣ್ಣ ಮತ್ತು ಅತಿ ಸಣ್ಣ ರೈತರು ಅಂಗಡಿಗಳ ಮುಂದೆ ಗೊಬ್ಬರಕ್ಕಾಗಿ ಸಾಲಿನಲ್ಲಿ ನಿಂತಿದ್ದಾರೆ. ಅನಧಿಕೃತವಾಗಿ ಗೊಬ್ಬರ ದಾಸ್ತಾನು ಮಾಡಿ, ಕಾಳ ಸಂತೆ ಮೂಲಕ ಹೆಚ್ಚುವರಿ ದರಕ್ಕೆ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ಬೇಡಿಕೆ ಇದೆ ಎನ್ನುವ ಮಾಹಿತಿ ಅಧಿಕಾರಿಗಳಿಗಿಲ್ಲ. ಆಡಳಿತದ ಅವ್ಯವಸ್ಥೆಯಿಂದ ರೈತರಿಗೆ ಸಂಕಷ್ಟ ಎದುರಾಗಿದೆ ಎಂದರು.

*ಲಿಂಕ್ ಮಾರಾಟ ತಡೆಯಬೇಕು:*
ಕರ್ನಾಟಕದಲ್ಲಿ 1.35 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನಿದೆ. ಅದನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ತುರ್ತಾಗಿ ರೈತರಿಗೆ ಬೇಕಾಗಿರುವ ಗೊಬ್ಬರದ ಸಮಸ್ಯೆಗೆ ಪರಿಹಾರ ಸಿಗಲಿದೆ. ರಾಜ್ಯ ಸರ್ಕಾರ ಸೊಸೈಟಿಗಳ ಮೂಲಕ ರೈತರಿಗೆ ಹಂಚಬೇಕು. ಬೇರೆ ಗೊಬ್ಬರ ತೆಗೆದುಕೊಂಡರೆ ಮಾತ್ರ ಯೂರಿಯಾ ಗೊಬ್ಬರ ಕೊಡುತ್ತೇವೆ ಎಂದು ಯಾವುದೇ ರೀತಿಯ ಒತ್ತಡ ಮಾಡಬಾರದು ಎಂದು ಕೇಂದ್ರ ಸರ್ಕಾರದ ಆದೇಶ ಇದೆ. ಆ ರೀತಿ ಬೇರೆ ಗೊಬ್ಬರದ ಲಿಂಕ್ ಮಾಡಿ ಮಾರಾಟ ಮಾಡುವವರ ಪರವಾನಗಿ ರದ್ದು ಪಡೆಸುವಂತೆ‌ ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ. ಆದರೆ, ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಅವರ ಮೇಲೆ ಮತ್ತೊಂದು ಹೊರೆ ಹಾಕುತ್ತಿದೆ. ರಾಜ್ಯ ಸರ್ಕಾರ ಯಾವುದೇ ಬೇರೆ ಗೊಬ್ಬರದ ಲಿಂಕ್ ಮಾಡದೇ ರೈತರಿಗೆ ಯೂರಿಯಾ ಗೊಬ್ಬರ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.

*ಸರಿಯಾಗಿ ವಿತರಿಸಲಿ:*
ಮುಂಗಾರು ಹಂಗಾಮಿಗೆ 11.17 ಲಕ್ಷ ಮೆಟ್ರಿಕ್ ಟನ್ ಗೊಬ್ಬರದ ಬೇಡಿಕೆ ಇದೆ. ಜುಲೈ ಅಂತ್ಯದವರೆಗೆ 6.25 ಲಕ್ಷ ಮೆಟ್ರಿಕ್ ಟನ್ ಕೊಡಬೇಕು. ಈಗಾಗಲೇ 5.35 ಲಕ್ಷ ಮೆಟ್ರಿಕ್ ಟನ್ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಇದುವರೆಗೂ 8.82 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಇದೆ. ಅದರಲ್ಲಿ ಕರ್ನಾಟಕ ಸರ್ಕಾರ 7.74 ಲಕ್ಷ ಮೆಟ್ರಿಕ್ ಟನ್ ವಿತರಣೆಯಾಗಿದೆ ಎಂದು ವರದಿ ಕಳುಹಿಸಿದೆ. ಅಂದರೆ ಅವರು 6.25 ಲಕ್ಷ ಮೆಟ್ರಿಕ್ ಟನ್ ವಿತರಣೆ ಬದಲು 7.74 ಲಕ್ಷ ಮೆಟ್ರಿಕ್ ಟನ್ ವಿತರಣೆ ಮಾಡಿದ್ದಾರೆ ಎಂದರೆ ಅವರ ಬಳಿ ಬಫರ್ ಸ್ಟಾಕ್ ಇತ್ತು ಎಂದರ್ಥ. ಈಗ ಕೇಂದ್ರ ಸರ್ಕಾರ ಕೊಡಬೇಕಾಗಿರುವುದು 1.35 ಲಕ್ಷ ಮೆಟ್ರಿಕ್ ಟನ್.ನಾವು ಇಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಜೆ.ಪಿ. ನಡ್ಡಾ ಅವರನ್ನು ನಿಯೋಗದಲ್ಲಿ ಭೇಟಿ ಮಾಡಿ ರಾಜ್ಯದಲ್ಲಿನ‌ ಗೊಬ್ಬರದ ಸಮಸ್ಯೆ ಕುರಿತು ಚರ್ಚೆ ಮಾಡಿದ್ದೇವು. ಅವರು ತಕ್ಷಣ ಅಧಿಕಾರಿಗಳ ಜೊತೆ ಚರ್ಚಿಸಿ ಕರ್ನಾಟಕಕ್ಕೆ 1.35 ಲಕ್ಷ ಮೆಟ್ರಿಕ್ ಟನ್ ಯುರಿಯಾ ಗೊಬ್ಬರವನ್ನು ಕಳುಹಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಮೂರ್ನಾಲ್ಕು ಕಂಪನಿಗಳಿಗೆ ಸೂಚನೆ ಕೊಡುತ್ತೇನೆ ಕೋರಮಂಡಲ, ಮದ್ರಾಸ್ ಫರ್ಟಿಲೈಸರ್ ಗಳಿಗೆ ಸೂಚನೆ ಕೊಡುತ್ತೇವೆ. ಹತ್ತು ಹದಿನೈದು ದಿನಗಳಲ್ಲಿ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಸುವುದಾಗಿ ತಿಳಿಸಿದ್ದಾರೆ. ಇವತ್ತು ಹದಿನಾರು ಸಾವಿರ ಮೆಟ್ರಿಕ್ ಟನ್ ಗೊಬ್ಬರ ಕಳುಹಿಸಲಾಗುತ್ತಿದೆ. ಪ್ರತಿ ದಿನ ಹದಿನೈದರಿಂದ ಇಪ್ಪತ್ತು ಸಾವಿರ ಮೆಟ್ರಿಕ್ ಟನ್ ಗೊಬ್ಬರ ಸರಬರಾಜು ಮಾಡಲಾಗುತ್ತದೆ. ರಾಜ್ಯ ಸರ್ಕಾರ ಕೇಂದ್ರದಿಂದ ಸರಬರಾಜಾದ ಗೊಬ್ಬರವನ್ನು ಯಾವ ಜಿಲ್ಲೆ, ತಾಲೂಕು, ಹಾಗೂ ಯಾವ ಗ್ರಾಮದಲ್ಲಿ ಬೇಡಿಕೆ ಇದೆ ಎನ್ನುವುದನ್ನು ತಿಳಿದುಕೊಂಡು ಸರಬರಾಜು ಮಾಡಬೇಕು. ರೈತರು ಎಲ್ಲಿಯೂ ಸರತಿ ಸಾಲಿನಲ್ಲಿ ನಿಲ್ಲದೇ ಅವರಿಗೆ ಗೊಬ್ಬರ ದೊರೆಯುವಂತೆ ನೋಡಿಕೊಳ್ಳಬೇಕು. ಎಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಾರೊ ಅವರ ಅಂಗಡಿಗಳ ಮೇಲೆ ದಾಳಿ ಮಾಡಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಅಕ್ರಮವಾಗಿ ಸಂಗ್ರಹಿಸಿದ್ದ ಗೊಬ್ಬರವನ್ನು ವಶಪಡಿಸಿಕೊಂಡು ರೈತರಿಗೆ ವಿತರಿಸಬೇಕು. ಅವರ ಪರವಾನಗಿ ರದ್ದುಪಡಿಸುವ ಕ್ರಮ ಕೈಗೊಳ್ಳಬೇಕು. ಎಲ್ಲಿ ಗೊಬ್ಬರದ ಅಗತ್ಯವಿದೆ ಅಲ್ಲಿ ಸರಿಯಾಗಿ ಸರಬರಾಜು ಮಾಡಿದರೆ ಯೂರಿಯಾ ಗೊಬ್ಬರ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸದರಾದ ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ, ಡಾ. ಸಿ.ಎನ್. ಮಂಜುನಾಥ, ಪಿ.ಸಿ ಗದ್ದಿಗೌಡರ, ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ರಾಜ್ಯ ಸಭಾ ಸದಸ್ಯರಾದ ಈರಣ್ಣ ಕಡಾಡಿ ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು