9:12 AM Thursday18 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

Forest Minister | 5 ಹುಲಿಗಳ ಸಾವು ಪ್ರಕರಣ: ಡಿಸಿಎಫ್ ಚಕ್ರಪಾಣಿ ಸೇರಿ 3 ಅಧಿಕಾರಿಗಳ ಅಮಾನತಿಗೆ ಈಶ್ವರ ಖಂಡ್ರೆ ಶಿಫಾರಸು

04/07/2025, 16:21

ಬೆಂಗಳೂರು(reporterkarnataka.com): ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯ ತೋರಿದ ಡಿಸಿಎಫ್ ಚಕ್ರಪಾಣಿ ಮತ್ತು ಮೂವರು ಅಧಿಕಾರಿಗಳನ್ನು ಅಮಾನತು ಮಾಡಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಶಿಫಾರಸು ಮಾಡಿದ್ದಾರೆ.
ಉನ್ನತ ಮಟ್ಟದ ವಿಚಾರಣಾ ಸಮಿತಿಯ ಪ್ರಾಥಮಿಕ ವರದಿ ಸ್ವೀಕರಿಸಿ, ಪರಾಮರ್ಶಿಸಿದ ಸಚಿವರು, ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಮೇಲ್ನೋಟಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಈ ಶಿಫಾರಸು ಮಾಡಿದ್ದಾರೆ.
ವೇತನ ಪಾವತಿಸದಿರುವುದೂ ಕರ್ತವ್ಯಲೋಪ:
ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಪಾವತಿ ಮಾಡಲು ಏಪ್ರಿಲ್ ತಿಂಗಳಾಂತ್ಯಕ್ಕೇ ಹಣ ಬಿಡುಗಡೆಯಾಗಿದ್ದರೂ, ಜೂನ್ ತಿಂಗಳವರೆಗೆ ವೇತನ ಪಾವತಿಸದಿರುವುದು ಡಿಸಿಎಫ್ ಚಕ್ರಪಾಣಿ ಅವರ ಮೂಲಭೂತ ಕರ್ತವ್ಯ ಲೋಪವಾಗಿದ್ದು, ಇದು ಗಸ್ತು ಕಾರ್ಯಕ್ಕೆ ಹಿನ್ನಡೆ ಉಂಟು ಮಾಡಿದೆ. ಈ ಸಂಬಂಧ ಡಿಸಿಎಫ್ ಚಕ್ರಪಾಣಿ ಅಮಾನತಿಗೆ ಶಿಫಾರಸು ಮಾಡಿ, ಇಲಾಖಾ ವಿಚಾರಣೆ ಮಾಡಲು ಶಿಫಾರಸು ಮಾಡಿದ್ದಾರೆ.
ಹೊರಗುತ್ತಿಗೆ ಸಿಬ್ಬಂದಿ ಮಾರ್ಚ್ ನಿಂದ 3 ತಿಂಗಳ ವೇತನ ಪಾವತಿ ಆಗಿಲ್ಲ ಎಂದು ಜೂನ್ 23ರಂದು ಪ್ರತಿಭಟನೆ ನಡೆಸಿದ್ದರು. ಸಕಾಲದಲ್ಲಿ ವೇತನ ಸಿಗದೆ ಮುಂಚೂಣಿಯ ಸಿಬ್ಬಂದಿ ಕರ್ತವ್ಯ ವಿಮುಖರಾಗಲು ಕಾರಣವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಸುಮಾರು 11 ವರ್ಷದ ತಾಯಿ ಹುಲಿ ಮತ್ತು 10-11 ತಿಂಗಳ 4 ಮರಿ ಹುಲಿಗಳ ಸಾವಿಗೆ ಹುಲಿ ದಾಳಿ ಮಾಡಿ ಕೊಂದ ಹಸುವಿನ ಮೃತದೇಹದ ಒಳಗೆ ಸೇಡು ತೀರಿಸಿಕೊಳ್ಳಲು ಸಿಂಪಡಿಸಲಾದ ರಾಸಾಯನಿಕ ಸಂಯುಕ್ತ ಕಾರಣ ಎಂಬುದು ಪ್ರಾಥಮಿಕ ತನಿಖಾ ವರದಿಯಿಂದ ತಿಳಿದು ಬಂದಿದೆ.
ಗಸ್ತು ಸಿಬ್ಬಂದಿಯ ಕಾರ್ಯಕ್ಷಮತೆಯ ಮೇಲೆ ಸಂಬಂಧಿತ ವಲಯದ ಎ.ಸಿ.ಎಫ್, ಆರ್.ಎಫ್.ಓ. ಮತ್ತು ಡಿ.ಆರ್.ಎಫ್.ಓ. ನಿಗಾ ಇಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಅರಣ್ಯ ರಕ್ಷಣೆಯ ತಮ್ಮ ಮೂಲಭೂತ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿರುತ್ತಾರೆ ಎಂದು ತಿಳಿಸಿರುವ ಈಶ್ವರ ಖಂಡ್ರೆ, ಮೂರು ಸಿಬ್ಬಂದಿಯನ್ನು ಅಮಾನತು ಮಾಡಿ, ಇಲಾಖಾ ವಿಚಾರಣೆ ನಡೆಸಲು ಸೂಚನೆ ನೀಡಿದ್ದಾರೆ.
ಪ್ರಾಥಮಿಕ ತನಿಖಾ ವರದಿ ಸಲ್ಲಿಸಿರುವ ಅಪರ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ನೇತೃತ್ವದ ಉನ್ನತ ಮಟ್ಟದ ಸಮಿತಿಯಲ್ಲಿ ವನ್ಯಜೀವಿ ವಿಭಾಗದ ಎಪಿಸಿಸಿಎಫ್ ಶ್ರೀನಿವಾಸುಲು, ಚಾಮರಾಜನಗರ ಸಿಸಿಎಫ್ ಹೀರಾಲಾಲ್, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಎ.ಐ.ಜಿ ಹರಿಣಿ ವೇಣುಗೋಪಾಲ್, ವನ್ಯಜೀವಿ ತಜ್ಞ ಡಾ. ಸಂಜಯ್ ಗುಬ್ಬಿ ಮತ್ತು ಮೈಸೂರು ಮೃಗಾಲಯದ ಸಹಾಯಕ ನಿರ್ದೇಶಕ ಡಾ. ಶಶಿಧರ್ ಸದಸ್ಯರಾಗಿದ್ದರು.
ಈ ಸಮಿತಿಗೆ ಅಂತಿಮ ವರದಿಯನ್ನು ಇದೇ ತಿಂಗಳ 10ರೊಳಗೆ ಸಲ್ಲಿಸುವಂತೆಯೂ ಅರಣ್ಯ ಸಚಿವರು ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು