ಇತ್ತೀಚಿನ ಸುದ್ದಿ
ಬೆಂಗಳೂರು: 20ರಿಂದ 4 ದಿನಗಳ ಕಾಲ ಲೇಸರ್ ಚಿಕಿತ್ಸೆ, ಸರ್ಜರಿ ಅಂತಾರಾಷ್ಟ್ರೀಯ ಸಮ್ಮೇಳನ
19/03/2025, 23:17

ಬೆಂಗಳೂರು(reporterkarnataka.com): ಜಾಗತಿಕ ಮಟ್ಟದ ಚರ್ಮರೋಗ ತಜ್ಞರು ನೀಡುವ ಲೇಸರ್ ಮತ್ತು ಉನ್ನತ ಮಟ್ಟದ ಚಿಕಿತ್ಸೆಯನ್ನು ರಾಜ್ಯದ ಜನರಿಗೆ ಪರಿಚಯಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಇದೇ 20ರಿಂದ 23ರವರೆಗೆ ನಾಲ್ಕು ದಿನಗಳ “ ಭಾರತ್ ಸಮಿಟ್ ಆಫ್ ಲೇಸರ್ ಮೆಡಿಸನ್ ಅಂಡ್ ಸರ್ಜರಿ” ( ಬಿಎಸ್‌ಎಲ್‌ಎಂಎಸ್) – ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಶೆರಟಾನ್ ಗ್ರಾಂಡ್ ಬೆಂಗಳೂರು ವೈಟ್‌ಫೀಲ್ಡ್ ಹೊಟೇಲ್ ಹಾಗೂ ಕನ್ವೆನ್ಷನ್ ಸೆಂಟರ್ ನಲ್ಲಿ ಸಮಾವೇಶ ನಡೆಯಲಿದ್ದು, ರಾಜ್ಯದ ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್ ಅವರು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ ಎಂದು ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಡಾ.ಬಿ.ಎಸ್. ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಸಮಾವೇಶ ದೇಶದಲ್ಲೇ ಮಾತ್ರವಲ್ಲ ಇಡೀ ವಿಶ್ವದಲ್ಲೇ ಮೊದಲ ಬಾರಿಗೆ ನಡೆಯುತ್ತಿದ್ದು, ದೇಶ-ವಿದೇಶಗಳಿಂದ 800ಕ್ಕೂ ಹೆಚ್ಚು ಪ್ರಸಿದ್ಧ ಚರ್ಮರೋಗ ತಜ್ಞರು ಭಾಗವಹಿಸಲಿದ್ದಾರೆ. ವಿಶೇಷವಾಗಿ ದಕ್ಷಿಣ ಭಾರತದ ಎಲ್ಲ ಚರ್ಮರೋಗ ತಜ್ಞರು ಪಾಲ್ಗೊಳ್ಳುತ್ತಿದ್ದಾರೆ. ವಿಶ್ವದಾದ್ಯಂತ ಚರ್ಮರೋಗ ತಜ್ಞರು ನೀಡುವ ಅತ್ಯಾಧುನಿಕ ಲೇಸರ್ ಮತ್ತು ಉನ್ನತ ಮಟ್ಟದ ಚಿಕಿತ್ಸೆಯನ್ನು ರಾಜ್ಯದ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಚರ್ಮರೋಗ ತಜ್ಞರು ತಮ್ಮ ದಿನನಿತ್ಯದ ಚಿಕಿತ್ಸಾ ವಿಧಾನಗಳು, ಉನ್ನತ ಹಾಗೂ ಸುರಕ್ಷತೆಯ ಲೇಸರ್ ಚಿಕಿತ್ಸೆ ಮತ್ತು ತಂತ್ರಜ್ಞಾನದ ಅರಿಯವನ್ನು ತಿಳಿಸುವ ಉದ್ದೇಶದಿಂದ ಸಮಾವೇಶವನ್ನು ಆಯೋಜಿಸಲಾಗಿದೆ. ಪ್ರಮುಖವಾಗಿ ಈ ಸಮ್ಮೇಳನದಲ್ಲಿ ಚರ್ಮದ ಬಣ್ಣಕ್ಕೆ ಸಂಬಂಧಿಸಿದ ಚಿಕಿತ್ಸೆ, ಮೊಡವೆ, ದೇಹದಲ್ಲಿ ಅನಗತ್ಯವಾಗಿ ಬೆಳೆಯುವ ಕೂದಲು, ಟ್ಯಾಟು ನಿರ್ಮೂಲನೆ ಹಾಗೂ ಚರ್ಮದ ನವ ಯೌವನ ಪಡೆಯುವಿಕೆ ಕುರಿತಂತೆ ಚರ್ಚೆಗೋಷ್ಠಿಗಳು, ಕಾರ್ಯಾಗಾರಗಳು ನಡೆಯಲಿವೆ ಎಂದು ಅವರು ತಿಳಿಸಿದರು.
ಸಮ್ಮೇಳನದ ಸಂಘಟಕ ವೈದ್ಯ ಡಾ. ವೆಂಕಟರಾಮನ್ ಮಾತನಾಡಿ, ಚರ್ಮಕ್ಕೆ ಸಂಬಂಧಿಸಿದ ಲೇಸರ್ ಚಿಕಿತ್ಸೆಯು ಅಮೆರಿಕ, ಕೆನಡಾ ಮತ್ತಿತರ ದೇಶಗಳಲ್ಲಿ ಈಗಾಗಲೇ ಪ್ರಸಿದ್ಧಿಯಾಗಿದೆ. ಆದರೆ, ನಮ್ಮ ದೇಶದಲ್ಲಿ ಅಷ್ಟೊಂದು ಇನ್ನೂ ಪ್ರವರ್ಧಮಾನಕ್ಕೆ ಬಂದಿಲ್ಲ. ಈ ನಿಟ್ಟಿನಲ್ಲಿ ಲೇಸರ್ ಚಿಕಿತ್ಸೆಯನ್ನು ಎಲ್ಲ ಚರ್ಮ ವ್ಯಾಧಿಗಳಿಗೆ ನೀಡಬಹುದೆಂದು ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಸಮಾವೇಶ ನಡೆಯುತ್ತಿದೆ ಎಂದರು.
ಚರ್ಮರೋಗದ ಖ್ಯಾತ ತಜ್ಞ ಡಾ. ಗಿರೀಶ್ ಮಾತನಾಡಿ, ಲೇಸರ್ ಚಿಕಿತ್ಸೆ ಜನರಿಗೆ ತುಂಬಾ ಅನುಕೂಲಕರವಾಗಿದೆ. ಚಿಕಿತ್ಸೆಯು ದೇಹದ ಮೇಲೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ. ಈ ಚಿಕಿತ್ಸಾ ಪದ್ಧತಿ ಕರ್ನಾಟಕದ ಜನರಿಗೆ ಬಹಳ ಉಪಯುಕ್ತವಾಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಸಂಘಟನಾ ಅಧ್ಯಕ್ಷ ಪ್ರೊ. ಅರುಣ ಸಿ. ಇನಾಮದಾರ, ಚರ್ಮರೋಗ ತಜ್ಞರು ಡಾ. ರಾಜೇಂದ್ರನ್, ಡಾ. ಮಧುರಾ ಮತ್ತು ಡಾ. ಚೈತ್ರಾ ಮತ್ತಿತರರು ಉಪಸ್ಥಿತರಿದ್ದರು.