ಇತ್ತೀಚಿನ ಸುದ್ದಿ
BJP MP | ಗುತ್ತಿಗೆಯಲ್ಲಿ ಶೇ.4ರಷ್ಟು ಮುಸ್ಲಿಂ ಮೀಸಲಾತಿ ವಿರುದ್ಧ ಹೈಕೋರ್ಟ್ ಮೊರೆ ಹೋಗುವೆ: ಸಂಸದ ತೇಜಸ್ವಿ ಸೂರ್ಯ
18/03/2025, 11:53

ನವದೆಹಲಿ(reporterkarnataka.cm): ಸರಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡಲು ರಾಜ್ಯ ಸರಕಾರ ಮುಂದಾಗಿರುವುದು ಅಸಾಂವಿಧಾನಿಕವಾಗಿದ್ದು, ಇದರ ವಿರುದ್ಧ ಕರ್ನಾಟಕ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸುತ್ತೇವೆ ಎಂದು ಸಂಸದ ತೇಜಸ್ವಿ ಸೂರ್ಯ ಎಚ್ಚರಿಸಿದ್ದಾರೆ.
ಮೀಸಲಾತಿ ನಿರ್ಧಾರ ವಾಪಸ್ ಪಡೆಯದಿದ್ದಲ್ಲಿ ದೇಶಾದ್ಯಂತ ಹೋರಾಟಕ್ಕೆ ಕರೆ ನೀಡುತ್ತೇವೆ. ಧರ್ಮ ಆಧಾರಿತ ಮೀಸಲಾತಿ ಜಾರಿಗೆ ಬಾರದಂತೆ ನಾವು ಹೋರಾಡುತ್ತೇವೆ. ಸರಕಾರದ ಈ ಆಟಾಟೋಪಕ್ಕೆ ಕೊನೆ ಹಾಡುತ್ತೇವೆ ಎಂದರು.
ರಾಜ್ಯ ಸರಕಾರ ಬಜೆಟ್ನಲ್ಲಿ ಸರಕಾರಿ ಟೆಂಡರ್ಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಲು ತೆಗೆದುಕೊಂಡಿರುವ ಕ್ರಮ ಸಂವಿಧಾನಕ್ಕೆ ಮಾಡಿದ ಅಪಚಾರ. ಸಂವಿಧಾನಡಿ ಧರ್ಮದ ಆಧಾರದಲ್ಲಿ ಮೀಸಲಾತಿಗೆ ಅವಕಾಶವಿಲ್ಲ. ಹಲವು ಬಾರಿ ಸುಪ್ರೀಂ ಕೋರ್ಟ್, ಅನೇಕ ನ್ಯಾಯಾಲಗಳು ಈ ರೀತಿ ಮೀಸಲಾತಿ ನೀಡಬಾರದು ಎಂದಿವೆ. ಮತಬ್ಯಾಂಕ್ಗೋಸ್ಕರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಸಂವಿಧಾನಬಾಹಿರ ಕೆಲಸ ಮಾಡಿದೆ ಎಂದು ದೂರಿದರು.
ಡಾ. ಮನಮೋಹನ್ ಸಿಂಗ್ ಅವರು ಈ ಹಿಂದೆ ಪ್ರಧಾನಿಯಾಗಿದ್ದಾಗ ದೇಶದ ಸಂಪತ್ತಿನ ಮೇಲೆ ಮುಸಲ್ಮಾನರಿಗೆ ಪ್ರಥಮ ಹಕ್ಕಿರಬೇಕು ಎಂದಿದ್ದರು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಮುಸ್ಲಿಂ ಸಮುದಾಯದವರಿದ್ದಾರೋ ಅಷ್ಟು ಶೇಕಡಾವಾರು ಮೀಸಲಾತಿ ನೀಡಬೇಕು ಎಂದು ಕಾಂಗ್ರೆಸ್ ನಾಯಕ
ರಾಹುಲ್ ಗಾಂಧಿ ಹೇಳಿದ್ದರು. ಇದನ್ನು ಮುಂದುವರಿಸಿಕೊಂಡು ಸಿದ್ದರಾಮಯ್ಯ ಅವರು ಕಾನೂನುಬಾಹಿರವಾಗಿ ಶೇ.4ರಷ್ಟು ಮೀಸಲಾತಿ ಕಲ್ಪಿಸಿದ್ದಾರೆ ಎಂದು ಕಿಡಿಕಾರಿದರು.
ಸಂವಿಧಾನ ರಚನೆ ವೇಳೆ ಧರ್ಮದ ಆಧಾರದಲ್ಲಿ ಮೀಸಲಾತಿ ವಿಷಯ ಚರ್ಚೆಗೆ ಬಂದಾಗ, ಮೊದಲು ಇದನ್ನು ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರೇ ವಿರೋಧಿಸಿದ್ದರು. ಧರ್ಮದ ಆಧಾರದಲ್ಲಿ ಮೀಸಲಾತಿ ಕಲ್ಪಿಸಿದ್ದಲ್ಲಿ ದೇಶ ವಿಭಜನೆ, ನುಚ್ಚು ನೂರಾಗುತ್ತದೆ. ಇದನ್ನು ನಾವು ವಿರೋಧಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು. ತಮ್ಮನ್ನ ತಾವು ಅಂಬೇಡ್ಕರ್ ವಾದಿ, ಸಮಾಜವಾದಿ ಎಂದು ಕರೆದುಕೊಳ್ಳುವ ಸಿದ್ದರಾಮಯ್ಯ ಅವರು ಸಂವಿಧಾನ ವಿರೋಧ, ಅಂಬೇಡ್ಕರ್ ಅವರ ನಿಲುವಿಗೆ ವಿರೋಧದ ಕೆಲಸ ಮಾಡಿದ್ದಾರೆ. ಈ ಅಸಾಂವಿಧಾನಿಕ ನಡೆಯ ವಿರುದ್ಧ ನಾವು ವಿಧಾನಸಭೆ, ಸಂಸತ್ನಲ್ಲೂ ಧ್ವನಿ ಎತ್ತುತ್ತೇವೆ ಎಂದು ತೇಜಸ್ವಿ ಸೂರ್ಯ ಹೇಳಿದರು.