ಇತ್ತೀಚಿನ ಸುದ್ದಿ
ಆಪ್ ಪಕ್ಷವನ್ನು ದೆಹಲಿ ಜನರು ತಿರಸ್ಕಾರ ಮಾಡಿದ್ದಾರೆ; ಇಂಡಿ ಒಕ್ಕೂಟ ಒಡೆದು ಚೂರಾಗಿದೆ: ಆರ್.ಅಶೋಕ್
09/02/2025, 09:37
![](https://reporterkarnataka.com/wp-content/uploads/2025/02/IMG-20250209-WA0005.jpg)
ಬೆಂಗಳೂರು(reporterkarnataka.com): ಭ್ರಷ್ಟಾಚಾರದಲ್ಲಿ ಮುಳುಗಿದ್ದ ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷವನ್ನು ನವದೆಹಲಿಯ ಜನರು ತಿರಸ್ಕಾರ ಮಾಡಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಕ್ಕೆ ಸಿಕ್ಕಿರುವ ಗೆಲುವು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯ ಆಪ್ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಅರವಿಂದ ಕೇಜ್ರಿವಾಲ್ ಆರಂಭದಲ್ಲಿ ಸರಳವಾದ ಕಾರಿನಲ್ಲಿ ಸಂಚರಿಸುತ್ತಿದ್ದರು. ಈಗ ದೊಡ್ಡ ಅರಮನೆ ಕಟ್ಟಿಕೊಂಡಿದ್ದು, ಐಷಾರಾಮಿ ಕಾರಿನಲ್ಲಿ ಸಂಚರಿಸುತ್ತಿದ್ದಾರೆ. ಅವರ ಆಡಳಿತವನ್ನು ನೋಡಿ ಜನರು ಬೇಸತ್ತಿದ್ದಾರೆ. ಯಮುನಾ ನದಿಯ ಬಗ್ಗೆ ಅವರು ಆಡಿದ ಮಾತು ಜನರಲ್ಲಿ ಬೇಸರ ತಂದಿದೆ. ಜನರು ಪ್ರತಿ ದಿನ ಕುಡಿಯುವ ನೀರಿನ ಬಗ್ಗೆ ಆಪಾದನೆ ಮಾಡಿದ್ದರು ಎಂದರು.
ಯಮುನಾ ನದಿಯನ್ನು ಸರ್ಕಾರ ಸ್ವಚ್ಛವಾಗಿ ಇಡಬೇಕಿತ್ತು. ಅದನ್ನು ಬಿಟ್ಟು ನದಿಯ ಮೇಲೆಯೇ ಆಪಾದನೆ ಮಾಡಿದ್ದರು. ಜೈಲಿಗೆ ಹೋದರೂ ರಾಜೀನಾಮೆ ನೀಡದೆ ಅಲ್ಲಿಯೇ ಕುಳಿತು ಕಡತಕ್ಕೆ ಸಹಿ ಹಾಕಿದ್ದರು. ಬೇರೆಯವರಿಗೆ ಅಧಿಕಾರವನ್ನು ವಹಿಸುವ ಬದಲು, ತಾವೇ ಅಧಿಕಾರ ಇಟ್ಟುಕೊಂಡು ಸರ್ಕಾರಿ ಕೆಲಸಗಳನ್ನು ಸ್ಥಗಿತಗೊಳಿಸಿದ್ದರು. ಇವರು ಭ್ರಷ್ಟಚಾರಿ ಎಂದು ಇಂಡಿ ಒಕ್ಕೂಟದ ನಾಯಕರೇ ಹೇಳಿದ್ದರು. ಮಳ್ಳಿಯಂತೆ ಬಂದು, ಕಳ್ಳನಂತೆ ಆಗಿದ್ದಾರೆ ಎಂಬುದು ಜನರಿಗೆ ಅರಿವಾಯಿತು ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಹಾಗೂ ಆಡಳಿತ ಬಿಜೆಪಿಯ ಗೆಲುವಿಗೆ ಬಲ ತಂದಿದೆ. ಇದು ಕೇಂದ್ರ ಸರ್ಕಾರದ ಆಡಳಿತಕ್ಕೆ ಸಂದ ಗೆಲುವು. ಜನರು ಇಂಡಿ ಒಕ್ಕೂಟವನ್ನು ತಿರಸ್ಕಾರ ಮಾಡಿದ್ದಾರೆ. ಇಂಡಿ ಒಕ್ಕೂಟ ಒಡೆದು ಚೂರಾಗಿದೆ. ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ ಸೇರಿದಂತೆ ಎಲ್ಲರೂ ಬೇರೆಯಾಗಿದ್ದಾರೆ. ರಾಹುಲ್ ಗಾಂಧಿಯೂ ಸೇರಿದಂತೆ ಒಂದೇ ಕುಟುಂಬದವರು ದೊಡ್ಡ ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ದೆಹಲಿಯ ಜನರು ಮೋದಿಯವರ ಆಡಳಿತಕ್ಕೆ ಬೆಲೆ ಕೊಟ್ಟಿದ್ದಾರೆ ಎಂದರು.