ಇತ್ತೀಚಿನ ಸುದ್ದಿ
ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ: ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲಿ ಮತ್ತೊಂದು ಜೀವಬಲಿ; ಭಾರೀ ಪ್ರತಿಭಟನೆ
27/01/2025, 19:30
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರದಲ್ಲಿ ಮತ್ತೊಂದು ಜೀವ ಬಲಿಯಾಗಿದೆ. ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದ ಮಹಿಳೆಯೊಬ್ಬರು ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮರುದಿನವೇ ಮತ್ತೊಬ್ಬರು ನೇಣಿಗೆ ಶರಣಾಗಿದ್ದಾರೆ.
ಮಲ್ಕುಂಡಿ ಗ್ರಾಮದ ಲತಾ ಎಂಬವರ ಪತಿ ಕೃಷ್ಣಮೂರ್ತಿ (33) ಬಲಿಯಾಗಿದ್ದಾರೆ.




ಸಾಲ ಕಟ್ಟಲಾಗದೆ ಸಿಬ್ಬಂದಿಗಳ ಕಿರುಕುಳಕ್ಕೆ ಬೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು ಬೆಳಗ್ಗೆ 9:00 ಸಮಯದಲ್ಲಿ ವಾಸದ ಮನೆಯಲ್ಲಿ ನೇಣು ಬಿಗಿದುಕೊಂಡು ಕೊನೆಯುಸಿರೆಳೆದಿದ್ದಾರೆ.
ಮೈಕ್ರೋ ಫೈನಾನ್ಸ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ 6 ಲಕ್ಷ ಹಣವನ್ನು ಸಾಲ ಕೃಷ್ಣಮೂರ್ತಿ ಅವರ ಕುಟುಂಬ
ಪಡೆದಿತ್ತು. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಸ್ಥಳಕ್ಕೆ ಹುಲ್ಲಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ಚೇತನ್ ಕುಮಾರ್ ಸಿಬ್ಬಂದಿಗಳಾದ ದಫೇದಾರ ದೊಡ್ಡಯ್ಯ ಸೇರಿದಂತೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ನಂಜನಗೂಡು ತಾಲೂಕು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಶವವನ್ನು ಸಾಗಿಸಲಾಗಿದೆ.
*ಶವಾಗಾರದ ಮುಂದೆ
ಪ್ರತಿಭಟನೆ:*
ಸಿಎಂ ಕ್ಷೇತ್ರದಿಂದ ಮೈಕ್ರೋ ಫೈನಾನ್ಸ್ ಗಳನ್ನು ತೊಲಗಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಂಜನಗೂಡಿನ ಸರ್ಕಾರಿ ಆಸ್ಪತ್ರೆಯ ಶವಗಾರದ ಮುಂದೆ ರೈತ ಸಂಘ ಮತ್ತು ಪ್ರಗತಿಪರ ಸಂಘಟಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಂಜನಗೂಡಿನಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ನರ ಬಲಿಗಳು ನಡೆಯುತ್ತಿವೆ. ಮುಖ್ಯಮಂತ್ರಿ ತವರು ಕ್ಷೇತ್ರ ಎಂದು ಲೆಕ್ಕಿಸದೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಕಿರುಕುಳ ನೀಡುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ನಡೆದಿರುವ ಕಿರುಕುಳ ಹಾಗೂ ಮಾನಕ್ಕೆ ಬೆದರಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅಂಬಳೆ ಮತ್ತು ಮಲ್ಕುಂಡಿ ಗ್ರಾಮಗಳಲ್ಲಿ ಒಂದೇ ದಿನದಲ್ಲಿ ಇಬ್ಬರೂ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬಲಿಯಾಗಿದ್ದಾರೆ.
ಈಗಾಗಲೇ ನಂಜನಗೂಡಿನ ತಸಿಲ್ದಾರ್ ಶಿವಕುಮಾರ್ ಕಾಸ್ನೂರು ಮೈಕ್ರೋ ಫೈನಾನ್ಸ್ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಿಎಂ ಕ್ಷೇತ್ರ ಮತ್ತು ತಹಸಿಲ್ದಾರ್ ಮಾತಿಗೂ ಕಿಮ್ಮತ್ತು ನೀಡದ ಮೈಕ್ರೋಫೈನಾನ್ಸ್ ಹಾವಳಿ ಸಾಲ ಪಡೆದವರನ್ನು ಬಲಿ ಪಡೆಯುತ್ತಿವೆ. ಕೂಡಲೆ ನಂಜನಗೂಡಿನಲ್ಲಿ ಮೈಕ್ರೋ ಫೈನಾನ್ಸ್ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕು. ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಜೀವ ಕಳೆದುಕೊಂಡಿರುವ ಕುಟುಂಬಗಳಿಗೆ ಸರ್ಕಾರ 25 ಲಕ್ಷ ರೂ ಗಳ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಬೃಹತ್ ಪ್ರತಿಭಟನೆಗೆ ಸಜ್ಜಾಗುತ್ತೇವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ದಸಂಸ ಮುಖಂಡರಾದ ಮಲ್ಲಹಳ್ಳಿ ನಾರಾಯಣ ಕಾರ್ಯ ಬಸವಣ್ಣ ಎಚ್ಚರಿಕೆ ನೀಡಿದ್ದಾರೆ.














