ಇತ್ತೀಚಿನ ಸುದ್ದಿ
ಶ್ರೀ ಸಿದ್ದರಾಮೇಶ್ವರರು ಕಾಯಕದ ಮೂಲಕ ಪವಾಡ ಸೃಷ್ಟಿಸಿದವರು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
14/01/2025, 21:55
ಬೆಂಗಳೂರು(reporterkarnataka.com): ಶರಣ ಶ್ರೀ ಸಿದ್ದರಾಮೇಶ್ವರರು ಕಾಯಕದ ಮೂಲಕ ಪವಾಡ ಸೃಷ್ಠಿಸಿದವರು. ಕಾಯಕ ಮಾಡುವವರಿಗೆ ಯಾವತ್ತೂ ಬಡತನ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನೊಳಂಬ ಲಿಂಗಾಯತ ಸಂಘ ಏರ್ಪಡಿಸಿದ್ದ ಶ್ರೀ ಗುರು ಸಿದ್ದರಾಮೇಶ್ವರರ 852ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಸಾಹಿತ್ಯಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ನಮ್ಮದು ದಿವ್ಯ ಪರಂಪರೆ ಹೊಂದಿರುವ ಸಮಾಜ, 12 ನೇ ಶತಮಾನದಲ್ಲಿ ಹಲವಾರು ಶರಣರನ್ನು ಸೃಷ್ಟಿಸಿದ ಶ್ರೇಷ್ಠ ಕ್ರಾಂತಿಯಲ್ಲಿ ವಿಭಿನ್ನರಾದವರು ಶ್ರೀ ಸಿದ್ದರಾಮೇಶ್ವರ ಶರಣರು, ಬಸವಣ್ಣನವರ ಕಾಯಕ ತತ್ಬವನ್ನು ಪಾಲಿಸಿದ್ದರು ಎಂದು ಹೇಳಿದರು.
ಶ್ರೀ ಸಿದ್ದರಾಮೇಶ್ವರರು ಬಾಲ್ಯದಲ್ಲಿಯೇ ವಯಸ್ಸಿಗೆ ಮೀರಿ ಜ್ಞಾನ ಮತ್ತು ನಡವಳಿಕೆ ಮೂಲಕ ಪವಾಡಪುರುಷರಾಗುವ ಎಲ್ಲ ಗುಣ ಹೊಂದಿದ್ಸರು. ಅವರು ಶ್ರೀಶೈಲ ಮಲ್ಲಿಮಾರ್ಜುನನ ಆಶೀರ್ವಾದ ಪಡೆದವರು. ಮಲ್ಲಿಕಾರ್ಜುನ ಭಿಕ್ಷೆಗೆ ಬಂದಾಗ ಇವರು ಭಿಕ್ಷೆ ನೀಡದಿದ್ದಾಗ ಮಲ್ಲಿಕಾರ್ಜುನ ಕಾಣೆಯಾದಾಗ ಶ್ರೀಶೈಲಕ್ಕೆ ತೆರಳಿ ಅಲ್ಲಿಯೇ ತಪಸ್ಸು ಮಾಡಿ ಶ್ರಿಶೈಲ ಮಲ್ಲಿಕಾರ್ಜುನನ್ನು ಒಲಿಸಿಕೊಳ್ಳುತ್ತಾರೆ. ಕಾಯಕದ ಮೂಲಕ ಪವಾಡ ಸೃಷ್ಠಿಸಿದವರು ಶ್ರೀ ಸಿದ್ದರಾಮೇಶ್ವರರು ಎಂದರು.
ಬಸವಣ್ಣನವರು ಕಾಯಕೇ ಕೈಲಾಸ ಎಂದರು. ಕಾಯಕ ಪೂಜೆಗಿಂತ ದೊಡ್ಡದು. ಭಗವಂತ ಎದುರು ಬಂದರೂ ನಿಮ್ಮ ಕಾಯಕ ನಿಲ್ಲಿಸಬೇಡ ಎಂದು ಬಸವಣ್ಣನರು ಹೇಳಿದ್ದರು. ಅಂತಹ ಅದಮ್ಯ ಕಾಯಕದ ಮೂಲಕ ಪವಾಡ ಮಾಡಿದವರು ಶ್ರೀ ಸಿದ್ದರಾಮೇಶ್ವರರು. ಸೊಲ್ಲಾಪುರದಲ್ಲಿ ಬರಗಾಲ ಬಂದಾಗ ನಾಲ್ಕು ಸಾವಿರ ಶರಣರನ್ನು ಸೇರಿಸಿ ಕೆರೆ ಕಟ್ಟಿಸಿದರು. ಅದರಲ್ಲಿ ಇಂದಿಗೂ ನೀರಿದೆ ಎಂದು ಹೇಳಿದರು.
ಕಾಯಕ ಎಂದರೆ ಹೊಟ್ಟೆಪಾಡಿಗಾಗಿ ಅಲ್ಲ. ಕಾಯಕ ಅಂದರೆ ಪರಿಪೂರ್ಣತೆ. ಆ ಸಂದರ್ಭದಲ್ಲಿ ರೈತರಿಗೆ ನೀರು, ನೀರಾವರಿ ಮಹತ್ವ ಹೇಳಿಕೊಟ್ಟವರು, ಮಣ್ಣಿನ ಮಹತ್ವ, ಬದುಕಿನ ಜೀವಾಳ ಎನ್ನುವುದನ್ನು ತೋರಿಸಿದರು ಶ್ರೀ ಸಿದ್ದರಾಮೇಶ್ವರರು. ನೊಳಂಬ ಸಮಾಜದಲ್ಲಿ ಕಾಯಕ ಎನ್ನುವುದು ರಕ್ತಗತವಾಗಿ ಬಂದಿದೆ. ಕಾಯಕ ಸಮಾಜಕ್ಕೆ ಎಂದೂ ಬಡತನ, ದುಖ ಬರುವುದಿಲ್ಲ. ಕಷ್ಟಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ನೊಳಂಬ ಸಮುದಾಯಕ್ಕೆ ಇದೆ ಎಂದು ಹೇಳಿದರು.
*ಮಾಧುಸ್ವಾಮಿ ಕಾರ್ಯ ಶ್ಲಾಘನೆ:*
ನಾನು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಹಾಗೂ ಮಾಜಿ ಸಂಸದ ಬಸವರಾಜು ಅವರ ಜೊತೆ ಎರಡು ದಶಕಗಳ ಕಾಲ ಕೆಲಸ ಮಾಡುವ ಅವಕಾಶ ಪಡೆದಿದ್ದೆ. ಸಣ್ಣ ನಿರಾವರಿ ಇಲಾಖೆಯಲ್ಲಿ ದೊಡ್ಡ ಸಾಧನೆ ಮಾಡಿರುವುದು ಮಾಧುಸ್ವಾಮಿಯವರು. ಅವರು ಬಹಳ ಅದ್ಬುತವಾದ ಕೆಲಸಗಳನ್ನು ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ ಜಿಲ್ಲೆಗಳಲ್ಲಿ ಅವರು ಮಾಡಿರುವ ಕಾರ್ಯಗಳು ಶ್ಲಾಘನೀಯ. ಚಿಕ್ಕನಾಯಕನಹಳ್ಳಿಯ ದೊಡ್ಡ ನಾಯಕ ಮಾಧುಸ್ವಾಮಿಯವರು, ಮಾಜಿ ಸಂಸದ ಬಸವರಾಜು ಅವರು ಹೇಮಾವತಿ ನೀರಿಗಾಗಿ ನಿರಂತರ ಹೋರಾಟ ಮಾಡಿದ್ದಾರೆ. ನೊಳಂಬರ ನಾಡಿನಲ್ಲಿ ನೀರಾವರಿ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ಕೆರೆ ತುಂಬಿಸುವ ಕೆಲಸ ಮಾಡಿದೆ. ಗೋರೂರು ಹೆಬ್ಬೂರು ಏತ ನೀರಾವರಿ ಯೋಜನೆ 30 ವರ್ಷದಿಂದ ನೆನೆಗುದಿಗೆ ಬಿದ್ದಿತ್ತು. ಹದಿನೆಂಟು ತಿಂಗಳಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡು, ಪರಮಪೂಜ್ಯ ಶ್ರೀ ಶಿವಕುಮಾರಸ್ವಾಮಿ ಹಾಗೂ ಬಾಲಗಂಗಾಧರ ನಾಥ ಸ್ವಾಮೀಜಿ ಅವರ ಕೈಯಿಂದ ಉದ್ಘಾಟನೆ ಮಾಡಿಸಿದೆ.
ನೀರಾವರಿ ಸಚಿವನಾಗಿ ಸುಮಾರು ಏಳೂವರೆ ಲಕ್ಷ ಎಕರೆ ಜಮೀನು ನೀರಾವರಿ ಮಾಡಿದ ಸಂತೃಪ್ತಿ ಇದೆ ಎಂದರು.
ಶರಣರ ಸಾಹಿತ್ಯ ಮತ್ತು ಅವರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕಿದೆ. ಇತ್ತೀಚೆಗೆ ಪಾಶ್ಚಾತ್ಯ ಸಂಸ್ಕೃತಿ ಅನುಕರಣೆ ಹೆಚ್ಚಾಗಿದೆ. ನಾಗರಿಕತೆ ಮತ್ತು ಸಂಸ್ಕೃತಿ ಬೇರೆ ಬೇರೆ ಇದನ್ನು ಅರ್ಥ ಮಾಡಿಕೊಂಡು ನಮ್ಮ ಸಂಸ್ಕೃತಿ ಉಳಿಸಿಕೊಂಡು ಹೋಗಬೇಕು. ಈ ಮೂಲಕ ಶ್ರೀ ಸಿದ್ದರಾಮೇಶ್ವರ ಜಯಂತಿ ಆಯೋಜನೆ ಮಾಡಿರುವುದಕ್ಕೆ ಸಾರ್ಥಕವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಂಗ ಸ್ವಾಮೀಜಿ, ಅರಸೀಕರೆಯ ಜ್ಞಾನಪ್ರಭು ಸ್ವಾಮೀಜಿ , ಶಿವಶಂಕರ ಶಿವಯೋಗಿ ಮಹಾ ಸ್ವಾಮಿಗಳು, ಮಾಜಿ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಡಾ. ಸಿ.ಎನ್. ಅಶ್ವತ್ಥ್ ನಾರಾಯಣ, ಸಿ.ಟಿ. ರವಿ, ನಿವೃತ್ತ ಡಿಜಿಪಿ ಶಂಕರ ಬಿದರಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.