ಇತ್ತೀಚಿನ ಸುದ್ದಿ
ಬೆಳಗಾವಿ: ಮಗಳ ಮದುವೆ ಮಾಡಿ ಕೊಡದ ಆಕ್ರೋಶ; ಯುವಕನಿಂದ ತಾಯಿ- ಮಗನ ಭೀಕರ ಹತ್ಯೆ
05/12/2024, 22:13

ಸಂತೋಷ್ ಬೆಳಗಾವಿ
info.reporterkarnataka@gmail.com
ಮಗಳನ್ನು ಮದುವೆ ಮಾಡಿಕೊಟ್ಟಿಲ್ಲ ಎಂಬ ಕಾರಣಕ್ಕೆ ಆಕ್ರೋಶಗೊಂಡ ಯುವಕನೊಬ್ಬ ಮನೆಗೆ ನುಗ್ಗಿ ಯುವತಿಯ ತಾಯಿ ಮತ್ತು ಸಹೋದರನನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಅಕ್ಕೋಳ ಗ್ರಾಮದ ಮಂಗಳಾ ನಾಯಿಕ (42) ಹಾಗೂ ಪ್ರಜ್ವಲ ನಾಯಿಕ (18) ಕೊಲೆಯಾದ ತಾಯಿ, ಮಗ ಎಂದು ಗುರುತಿಸಲಾಗಿದೆ.
ಆರೋಪಿ ರವಿ ಎಂಬಾತ ತಾಯಿ- ಮಗನ ತಲೆಗೆ
ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ. ನಂತರ ಘಟನೆ ಮಾಹಿತಿ ಪಡೆದ ನಿಪ್ಪಾಣಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಆರೋಪಿ ರವಿಯನ್ನು ವಶಕ್ಕೆ ಪಡೆದಿದ್ದಾರೆ.
*ತಾಯಿ ವಿರೋಧ:*
ಮಗಳನ್ನು ಮದುವೆ ಮಾಡಿಕೊಡುವಂತೆ ಮಂಗಳಾ ನಾಯಿಕ ಅವರನ್ನು ಆರೋಪಿ ರವಿ ಆಗಾಗ ಪೀಡಿಸುತ್ತಿದ್ದ. ಆದರೆ, ಮಗಳನ್ನು ಮದುವೆ ಮಾಡಿ ಕೊಡಲು ಮಂಗಳಾ ಅವರು ಒಪ್ಪದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರವಿಯು ಈ ದುಷ್ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಬಚಾವಾದ ಮಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.