ಇತ್ತೀಚಿನ ಸುದ್ದಿ
ಹೆಚ್ಚುತ್ತಿರುವ ಗರ್ಭಿಣಿಯರ, ಬಾಣಂತಿಯರ ಸಾವು ಪ್ರಕರಣ: ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸರಕಾರದಿಂದ ಸರ್ಜರಿ!!
29/11/2024, 11:46
ಗಣೇಶ್ ಇನಾಂದಾರ ಬಳ್ಳಾರಿ
info.reporterkarnataka@gmail.com
ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಸಾವು ಹಾಗೂ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಲೋಪದೋಷಗಳು ಆಗುತ್ತಿರುವುದಕ್ಕೆ ಸಂಬಂಧಿಸಿಯೇ ಹಲವು ಬಾರಿ ಚರ್ಚೆಗೆ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ಈ ಆಸ್ಪತ್ರೆಯಲ್ಲಿ ಗರ್ಭಿಣಿಯರ, ಬಾಣಂತಿಯರ ಸಾವು ಗಂಭೀರ ಚರ್ಚೆಗೆ ಕಾರಣವಾಗಿದೆ. ಇದೀಗ ವಿಮ್ಸ್ ಆಸ್ಪತ್ರೆಗೆ ಸರ್ಜರಿ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
ಕಳೆದ ಕೆಲವೇ ದಿನಗಳ ಅಂತರದಲ್ಲಿ ವಿಮ್ಸ್‌ನಲ್ಲಿ ನಾಲ್ವರು ಮಹಿಳೆಯರು ಸಾವನ್ನಪ್ಪಿರುವುದು ವರದಿಯಾಗಿದೆ.
ಈ ರೀತಿ ಸಾವಿನ ಪ್ರಕರಣಗಳು ವಿಮ್ಸ್‌ನಲ್ಲಿ ವರದಿಯಾಗುತ್ತಿರುವುದು ರೋಗಿಗಳಲ್ಲಿ ಹಾಗೂ ಆಸ್ಪತ್ರೆಗೆ ಬರುವವರಲ್ಲಿ ಆತಂಕ ಮೂಡಿಸಿದೆ.
ಬಳ್ಳಾರಿಯ ವಿಮ್ಸ್ (ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ) ಬಗ್ಗೆ ಹಲವು ವರ್ಷಗಳಿಂದ ವಿಮ್ಸ್‌ನ ವೈದ್ಯರ ಬಗ್ಗೆ ಹಾಗೂ ಅಲ್ಲಿನ ಆಡಳಿತ ವ್ಯವಸ್ಥೆಯ ಬಗ್ಗೆ ಒಂದಿಲ್ಲೊಂದು ಆರೋಪಗಳು ಕೇಳಿ ಬರುತ್ತಲ್ಲೇ ಇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಬಾಣಂತಿಯರು ಇಲ್ಲಿ ಸಾವನ್ನಪ್ಪುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಆಸ್ಪತ್ರೆಯ ಸರ್ಜರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
*ವಿಮ್ಸ್ ಪ್ರಕರಣ:* ವರದಿ ನೀಡಲು ಸೂಚನೆ:
ಬಳ್ಳಾರಿಯ ವಿಮ್ಸ್‌ನಲ್ಲಿ ಕೂಡ್ಲಿಗಿಯ ಬಾಣಂತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಅವರಿಗೆ ನಿರ್ದೇಶನ ನೀಡಿದ್ದಾರೆ. ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಅವರೊಂದಿಗೆ
ಈ ವಿಚಾರವಾಗಿ ಮಾತನಾಡಿರುವ ಜಮೀರ್ ಅವರು ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡಿದ್ದಾರೆ.
ಅಲ್ಲದೇ ಇಲ್ಲಿ ಬಾಣಂತಿಯರ ಸಾವಿನ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಅಗತ್ಯ ಮುನ್ನಚ್ಚರಿಕೆ ವಹಿಸುವಂತೆ ನಿರ್ದೇಶನ ನೀಡಿದ್ದಾರೆ. ಆದರೆ, ಇದಕ್ಕೂ ಮೊದಲು ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿದ್ದ ನಾಲ್ಕು ಬಾಣಂತಿಯರ ಸಾವು ಪ್ರಕರಣ ಹಾಗೂ ಈಗಿನ ಘಟನೆಗೆ ಸಂಬಂಧ ಇಲ್ಲ ಎಂದು ಹೇಳಲಾಗಿದೆ.
ಜಿಲ್ಲೆಯ ಕೂಡ್ಲಿಗಿ ಗುಡೇಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮಹಾಲಕ್ಷ್ಮಿ ಎಂಬುವರು ವಿಮ್ಸ್ ಆಸ್ಪತ್ರೆಗೆ ನವೆಂಬರ್ 24ಕ್ಕೆ ದಾಖಲಾಗಿದ್ದರು. ಆದರೆ, ದಾಖಲಾದ ಎರಡೇ ದಿನಕ್ಕೆ ಅಂದರೆ ನವೆಂಬರ್ 26 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಆರೋಗ್ಯ ಅಧಿಕಾರಿಗಳಿಂದ ವರದಿ ಪಡೆಯಲಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಈ ರೀತಿಯ ದುರಂತ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸುವಹಿಸುವುದಾಗಿ ಜಿಲ್ಲಾಧಿಕಾರಿಗಳು ಸಚಿವರಿಗೆ ಹೇಳಿದ್ದಾರೆ ಎನ್ನಲಾಗಿದೆ.
*ಸಾವು ಹೆಚ್ಚಳ:* ಬಳ್ಳಾರಿಯ ಜಿಲ್ಲಾ ಆಸ್ಪತ್ರೆ ಹಾಗೂ ವಿಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡುವ ಗರ್ಭಿಣಿ ಮಹಿಳೆಯರು ಸಾವನ್ನಪ್ಪುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವು ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಆಗಿರುವ ಡಾ. ಸುನಿತಾ ಅವರ ಅಧ್ಯಕ್ಷತೆಯಲ್ಲಿ ತಂಡವೊಂದನ್ನು ರಚಿಸಲಾಗಿದೆ. ಮೂವರು ತಜ್ಞ ವೈದ್ಯರನ್ನು ಒಳಗೊಂಡ ತಂಡವು ಬಳ್ಳಾರಿಯ ಜಿಲ್ಲಾ ಆಸ್ಪತ್ರೆ ಹಾಗೂ ವಿಮ್ಸ್‌ಗೆ ಭೇಟಿ ನೀಡಿ ಗರ್ಭಿಣಿಯರ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ಸಲ್ಲಿಸಲಿದೆ ಎಂದು ಹೇಳಲಾಗಿದೆ. ಈ ವರದಿಯ ಆಧಾರದ ಮೇಲೆ ಸರ್ಕಾರವು ಇನ್ನಷ್ಟು ಮುಂಜಾಗ್ರತಾ ಕ್ರಮ ಅಥವಾ ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.