10:26 PM Wednesday21 - January 2026
ಬ್ರೇಕಿಂಗ್ ನ್ಯೂಸ್
ಕೋಲಾರದಲ್ಲಿ ಸರಕಾರದಿಂದಲೇ ವೈದ್ಯಕೀಯ ಕಾಲೇಜು: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಣೆ ಶಿಕ್ಷಣ ಮತ್ತು ಕೈಗಾರಿಕೆ ಒಗ್ಗೂಡಿದರೆ ಮಾತ್ರ ನಾವೀನ್ಯತೆ ಹೆಚ್ಚಿನ ಅವಕಾಶ ಸಿಗಲಿದೆ: ಇಸ್ರೋ… ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ… ಜನಾರ್ದನ ರೆಡ್ಡಿ, ಶ್ರೀರಾಮುಲು ಶಕ್ತಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ: ಮಾಜಿ ಸಿಎಂ ಬಸವರಾಜ… ಕಾರು ಚಾಲಕನ ನಿರ್ಲಕ್ಷ್ಯ ಚಾಲನೆ: ಶ್ರಮಜೀವಿ ಶಿವರಾಜಪುರ ರಮೇಶ್ ದಾರುಣ ಸಾವು ಉಡುಪಿ ಪರ್ಯಾಯ: ಸರ್ವಜ್ಞ ಪೀಠ ಅಲಂಕರಿಸಿದ ಶೀರೂರು ಮಠದ ವೇದ ವರ್ಧನ ತೀರ್ಥರು;… 88 ಪ್ರಕರಣಗಳಲ್ಲಿ ಪೊಲೀಸಿನವರೇ ಶಾಮೀಲು; ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ:… ಬೆಂಗಳೂರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ: ಅಜೀಂ ಪ್ರೇಮ್‌ಜಿ ಫೌಂಡೇಷನ್ ಜತೆ ಕೈಜೋಡಿಸಿದ… ಕುಶಾಲನಗರ – ಮಡಿಕೇರಿ ಹೆದ್ದಾರಿಯ ಆನೆಕಾಡು ಬಳಿ ಅಪಘಾತ: ಕಾಡು ಕುರಿ ಸಾವು,…

ಇತ್ತೀಚಿನ ಸುದ್ದಿ

ಮಮ್ಮಿ ದುಡಿಯೋದು ಇಷ್ಟ ಇಲ್ಲ, ನಾನು ದುಡಿದು ಮನೆಗೆ ಬರುತ್ತೇನೆ: ಪತ್ರ ಬರೆದು ನಾಪತ್ತೆಯಾದ ಅಪ್ರಾಪ್ತ ಬಾಲಕ

29/10/2024, 18:49

*ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ಹಾಸಿಗೆ ಹಿಡಿದ ಅಜ್ಜ ಅಜ್ಜಿ..

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ತಾಯಿಯ ದುಡಿಮೆಯಲ್ಲೇ ಮೋಜು ಮಸ್ತಿ ಮಾಡುವ ಮಕ್ಕಳಿದ್ದಾರೆ, ಕಣ್ಣೆದುರಿಗೆ ತಾಯಿ ಎಷ್ಟೇ ಕಷ್ಟಪಟ್ಟು ದುಡಿದರು ಕಂಡು ಕಾಣದಂತೆ ಇರುವ ಮಕ್ಕಳೂ ಇದ್ದಾರೆ.
ಇನ್ನು ತಾಯಿಯ ದುಡಿಮೆ ಹಣವನ್ನು ತನ್ನ ಮೋಜಿಗಾಗಿ ಕೂಡಲಿಲ್ಲ ಎಂದು ತಾಯಿಯನ್ನೇ ಕೊಲೆ ಮಾಡಿರುವ ಕೊಲೆಗಡುಕ ಮಕ್ಕಳೂ ಸಹ ಸಮಾಜದಲ್ಲಿ ಇದ್ದಾರೆ. ಇವೆಲ್ಲದಕ್ಕೂ ಹೊರತಾಗಿ ದುಡಿದು ತರುವ ತನ್ನ ತಾಯಿಯ ಕಷ್ಟ ನೋಡಲಾಗದೆ ಎಸ್ ಎಸ್ ಎಲ್ ಸಿ ಓದುತ್ತಿರುವ ಅಪ್ರಾಪ್ತ ವಿದ್ಯಾರ್ಥಿಯೊಬ್ಬ ನಾನು ದುಡಿದು ಮನೆಗೆ ವಾಪಸ್ ಬರ್ತೀನಿ ಎಂದು ಪತ್ರ ಬರೆದು ಸಿನಿಮೀಯ ಮಾದರಿಯಲ್ಲಿ ನಾಪತ್ತೆಯಾಗಿರುವ ಹೃದಯವಿದ್ರಾವಕ ಘಟನೆ ನಂಜನಗೂಡು ತಾಲೂಕು ಕೆಂಪಿಸಿದ್ದನಹುಂಡಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ನನ್ನ ಮಮ್ಮಿ ದುಡಿಯೋದು ನನಗೆ ಇಷ್ಟ ಇಲ್ಲ. ಆದ್ರಿಂದ ನಾನೇ ದುಡಿದು ಮನೆಗೆ ಬರ್ತೀನಿ ಎಂದು ಪತ್ರ ಬರೆದು ಒಂದು ವಾರದ ಹಿಂದೆ ಮನೆ ಬಿಟ್ಟುಹೋದ ಬಾಲಕ ಭರತ್ ಇದುವರೆಗೆ ಹಿಂದಿರುಗಿಲ್ಲ.
ಮೊಮ್ಮಗ ಮನೆ ಬಿಟ್ಟ ದಿನದಿಂದ ಅಜ್ಜ ಅಜ್ಜಿ ಹಾಸಿಗೆ ಹಿಡಿದಿದ್ದಾರೆ. ಬಾಲಕನ ಹುಡುಕಾಡಿ ಹೈರಾಣರಾದ ಕುಟುಂಬ ಕಂಗಾಲಾಗಿದೆ.
ಎಲ್ಲೇ ಇದ್ರೂ ಮನೆಗೆ ವಾಪಸ್ ಬಾ ಎಂದು ಕೂಗುತ್ತಿರುವ ಅಜ್ಜನ ಕೊರಗಿನ ಧ್ವನಿ ಮನಕಲುಕುವಂತಿದೆ.
ಕೆಂಪಿಸಿದ್ದನಹುಂಡಿ ಗ್ರಾಮದ ಶ್ರೀ ಕನಕದಾಸ ಪ್ರೌಢಶಾಲೆಯಲ್ಲಿ ಭರತ್ ಹತ್ತನೇ ತರಗತಿ ವಿಧ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದಾನೆ. ಅದೇ ಶಾಲೆಯಲ್ಲಿ ತಾಯಿ ಮಹದೇವಮ್ಮ ಬಿಸಿಯೂಟ ಯೋಜನೆಯಡಿಯಲ್ಲಿ ಅಡುಗೆ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ತನ್ನ ಕಣ್ಣೆದುರಿಗೆ ಪಡುತ್ತಿರುವ ಕಷ್ಟ ಕಂಡು ನೊಂದಿದ್ದಾನೆ.

ಮನೆ ಬಿಟ್ಟುಹೋಗುತ್ತಿದ್ದೇನೆ.ಮೈಸೂರಿಗೆ ಹೋಗುತ್ತೇನೆ, ವರ್ಷ ಬಿಟ್ಟು ಬರುತ್ತೇನೆ, ಹುಡುಕೋ ಪ್ರಯತ್ನ ಮಾಡಬೇಡಿ,ನಾನು ನಿಮಗೆ ಸಿಕ್ಕಲ್ಲ,ಎಲ್ಲಿಗೆ ಹೋಗುತ್ತೇನೆ ಗೊತ್ತಿಲ್ಲ,ನನ್ನನ್ನ ಎಲ್ಲರೂ ಕ್ಷಮಿಸಿ,ನನ್ನ ಮಮ್ಮಿ ದುಡಿಯೋದು ನನಗೆ ಇಷ್ಟ ಇಲ್ಲ,ನಾನು ದುಡಿದು ಸಂಪಾದನೆ ಮಾಡಿ ಮನೆಗೆ ಬರುತ್ತೇನೆ ಬೇಜಾರು ಮಾಡಿಕೋಬೇಡಿ*
ಎಂದು ಪತ್ರ ಬರೆದು ಅಕ್ಟೋಬರ್ 16 ರಂದು ದಸರಾ ರಜೆ ವೇಳೆ ಮನೆ ಬಿಟ್ಟಿದ್ದಾನೆ.
ಸ್ನೇಹಿತರು, ಸಂಬಂಧಿಕರ ಮನೆ ಸೇರಿದಂತೆ ಎಲ್ಲಾ ಕಡೆ ಹುಡುಕಾಡಿದರೂ ಬಾಲಕ ಪತ್ತೆಯಾಗಿಲ್ಲ. ಹುಡುಕಾಟದಲ್ಲಿ ಹೈರಾಣದ ತಾಯಿ ಮತ್ತು ಅಜ್ಜ, ಅಜ್ಜಿ ಎಲ್ಲೇ ಇದ್ದರೂ ವಾಪಸ್ ಮನೆಗೆ ಬಾ ಎಂದು ಕರೆದ ಕೊರಗಿನ ದ್ವನಿ ನಿಜಕ್ಕೂ ಮಮ್ಮಲ ಮರಗುವಂತಿತ್ತು.
ಇದಕ್ಕೆ ಸಂಬಂಧಿಸಿದಂತೆ ಪೋಷಕರು ತಮ್ಮ ಕಂದನನ್ನು ಹುಡುಕಿ ಕೊಡುವಂತೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ಸಹ ಕೊಟ್ಟಿದ್ದಾರೆ.
ಮೊಮ್ಮಗ ನಾಪತ್ತಯಾದ ದಿನದಿಂದ ಹಾಸಿಗೆ ಹಿಡಿದ ಅಜ್ಜ ಮಲ್ಲಯ್ಯ,ಅಜ್ಜಿ ಮಾದಮ್ಮ ಹಾಸಿಗೆ ಬಿಟ್ಟು ಎದ್ದಿಲ್ಲ ಇದರಿಂದ ಇಡೀ ಕುಟುಂಬ ಆತಂಕಕ್ಕೆ ಸಿಲುಕಿದೆ.
ಭರತ್ ನಾಪತ್ತೆಯಾಗಿ 12 ದಿನಗಳು ಕಳೆದಿದೆ. ಪೊಲೀಸರಿಗೂ ಸಹ ಭರತ್ ಸುಳಿವು ಸಿಕ್ಕಿಲ್ಲದ ಕಾರಣ ಕಣ್ಣೀರಲ್ಲಿ ಕೈತೊಳೆಯುತ್ತಿರುವ ಕುಟುಂಬ ಭರತ್ ಗಾಗಿ ಕಾತುರದಿಂದ ಎದುರು ನೋಡುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು