ಇತ್ತೀಚಿನ ಸುದ್ದಿ
ಆಟೋ ಚಾಲಕರುಗಳಲ್ಲಿ ಗೊಂದಲ ಬೇಡ, ನಾನು ಯಾವುದೇ ರೀತಿಯ ಆದೇಶವನ್ನು ಹೊರಡಿಸಿಲ್ಲ: ಜಿಲ್ಲಾಧಿಕಾರಿ
30/08/2024, 10:39
ಮಂಗಳೂರು(reporterkarnataka.com): ಕೇಂದ್ರ ಮೋಟರ್ ಸೈಕಲ್ ಕಾಯ್ದೆ ಸೆಕ್ಷನ್ 66-1ರ ಪ್ರಕಾರ ಇ-ಆಟೋರಿಕ್ಷಾಗಳಿಗೆ ಯಾವುದೇ ರೀತಿಯ ನಿರ್ಬಂಧ, ಕಾನೂನುಗಳನ್ನು ಜಾರಿಗೊಳಿಸುವ ಅಧಿಕಾರ ನಮಗೆ ಇಲ್ಲ. ಜಿಲ್ಲೆಯಲ್ಲಿನ ಆಟೋರಿಕ್ಷಾ ಚಾಲಕರುಗಳಲ್ಲಿ ಗೊಂದಲಗಳಿದ್ದು, ನಾನು ಯಾವುದೇ ರೀತಿಯ ಆದೇಶವನ್ನು ಹೊರಡಿಸಿಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸ್ಪಷ್ಟಪಡಿಸಿದರು.
ಅವರು ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ನಾವು ಇಲ್ಲಿ 1993-94 ರಿಂದಲೂ ಅನ್ವಯವಾಗಿರುವ ಆದೇಶದಂತೆ ನಡೆದುಕೊಂಡು ಬರುತ್ತಿದ್ದು, ಇಲ್ಲಿಯ ತನಕ ಯಾವುದೇ ರೀತಿಯ ಬದಲಾವಣೆಗಳನ್ನು ತಂದಿಲ್ಲ. ಈ ಮೊದಲು ಎಲ್‌ಪಿಜಿ-ಸಿಎನ್‌ಜಿ ಆಟೋ ರಿಕ್ಷಾ ಚಾಲಕರ ಹಿತ ದೃಷ್ಠಿಯಿಂದ ಈ ಹಿಂದಿನ ಜಿಲ್ಲಾಧಿಕಾರಿಗಳು ರಾಜ್ಯ ಮೋಟರ್ ಸೈಕಲ್ ಕಾಯ್ದೆ 115ರ ಪ್ರಕಾರ ವಲಯ-1, ವಲಯ-2 ಎಂದು ವಿಭಜಿಸಿದ್ದು, ಇತ್ತೀಚೆಗೆ ಬಂದಂತಹ ಇ-ಅಟೋ ರಿಕ್ಷಾಗಳು ಈ ನಿಯಮವನ್ನು ಪಾಲಿಸಿದ್ದು, ಇಷ್ಟೆಲ್ಲ ಗೊಂದಲಗಳಿಗೆ ಕಾರಣವಾಗಿದೆ ಎಂದು ಹೇಳಿದರು.
ಕೇಂದ್ರ ಮೋಟರ್ ಸೈಕಲ್ ಕಾಯ್ದೆ ಸೆಕ್ಷನ್ 66-1ರಲ್ಲಿಯೇ ಇ-ಆಟೋ ರಿಕ್ಷಾಗಳಿಗೆ ರಿಯಾಯಿತಿಯನ್ನು ನೀಡಿದ್ದು, ನಾವು ಯಾವುದೇ ರೀತಿಯ ಆದೇಶ, ಕಾನೂನು, ನಿಯಮಗಳನ್ನು ಹೊರಿಸಲು ಸಾಧ್ಯವಿಲ್ಲ. ನಾವು ಯಾವುದೇ ನಿಯಮ ಮಾಡಬೇಕಾದರೂ ರಾಜ್ಯ ಮೋಟರ್ ಸೈಕಲ್ ಕಾಯ್ದೆ 115 ರ ಅಡಿಯಲ್ಲಿ ನಿಯಮ ಮಾಡಬೇಕು ಆದರೆ ಅವರಿಗೆ ಸೆಕ್ಷನ್ 66-1 ರಲ್ಲಿಯೇ ರಿಯಾಯಿತಿ ಇರುವುದರಿಂದ ನಾವು ಏನನ್ನು ಮಾಡಲು ಬರುವುದಿಲ್ಲ ಎಂದರು.
ಎಲ್‌ಪಿಜಿ-ಸಿಎನ್‌ಜಿ ಆಟೋ ರಿಕ್ಷಾ ಚಾಲಕರು ಮತ್ತು ಇ-ಆಟೋ ರಿಕ್ಷಾ ಚಾಲಕರು ಹೈಕೋರ್ಟ್‌ಗೆ ಹೋಗಿದ್ದು, ಹೈಕೋರ್ಟ್ ಕೇಂದ್ರ ಮೋಟರ್ ಸೈಕಲ್ ಕಾಯ್ದೆಯನ್ನು ಎತ್ತಿ ಹಿಡಿದುದ್ದು, ಅದರ ಆದೇಶದಂತೆ ನಾವು ನಿರ್ದೇಶನವನ್ನು ನೀಡಿದ್ದೆವೆಯೇ ಹೊರತು ಯಾವುದೇ ರೀತಿಯಲ್ಲಿಯೂ ಇ-ಆಟೋ ರಿಕ್ಷಾ ಚಾಲಕರ ಪರವಾಗಿ ನಾವು ನಿರ್ದೇಶನವನ್ನು ನೀಡಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.