1:20 PM Saturday11 - January 2025
ಬ್ರೇಕಿಂಗ್ ನ್ಯೂಸ್
ರಾಜ್ಯವನ್ನು “ಕೌಶಲ್ಯ ಅಭಿವೃದ್ಧಿ ಹಬ್‌” ಮಾಡುವುದೇ ನಮ್ಮ ಸರ್ಕಾರದ ಗುರಿ!;ಜಿಟಿಟಿಸಿ ಕೈಗಾರಿಕೆ-ಶೈಕ್ಷಣಿಕ ಸಮಾವೇಶದಲ್ಲಿ… ರಾಜ್ಯದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದೆ: ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಸಂಕಷ್ಟಕ್ಕೀಡಾದ ಬಿಗ್ ಬಾಸ್ ಸೀಸನ್ 11: ಶೋ ನಿಲ್ಲಿಸುವಂತೆ ಬೆಂಗಳೂರು ಜಿಪಂ ಸಿಇಒ… ಶೃಂಗೇರಿ ದೇಗುಲಕ್ಕೆ ನಾಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ: ಸುವರ್ಣ ಮಹೋತ್ಸವದಲ್ಲಿ ಭಾಗಿ ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘನೆ: ಸರಕಾರಿ ನೌಕರರ ಸಂಘಕ್ಕೆ ಚುನಾವಣೆಗೆ ಸಿವಿಲ್ ಕೋರ್ಟ್… ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರಕಾರಿ ಬಸ್: ಪ್ರಯಾಣಿಕರಲ್ಲಿ ಆತಂಕ ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪನೆ, ರಾಹುಲ್ ಗಾಂಧಿ ಕೊಟ್ಟಿದ್ದ ಭರವಸೆ ಸಾಕಾರ: ಸಚಿವ… ನಿಮ್ಹಾನ್ಸ್‌ನಲ್ಲಿ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಯ ನೇಮಕಾತಿಗೆ ಕ್ರಮ ಕೈಗೊಳ್ಳಿ: ಮುಖ್ಯಮಂತ್ರಿ ಸೂಚನೆ ದೇಸಿ ತಿನಿಸಿನ ಬೇಡಿಕೆ ಹೆಚ್ಚಸಲು ಕ್ರಮ: ಸಚಿವ ಎನ್. ಚಲುವರಾಯಸ್ವಾಮಿ ನಂಜನಗೂಡು: ಶಿವಶರಣ ಒಕ್ಕಲಿಗರ ಮುದ್ದಣನವರ ಪ್ರಪ್ರಥಮ ಜಯಂತಿ ಆಚರಣೆ

ಇತ್ತೀಚಿನ ಸುದ್ದಿ

ಮೊದಲಿಗೆ ಅಕ್ರಮ ರೆಸಾರ್ಟ್ ತೆರವು: ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆ ಕ್ಷಮಿಸದು: ಸಚಿವ ಖಂಡ್ರೆ

04/08/2024, 22:48

ಪಶ್ಚಿಮಘಟ್ಟ ಸೇರಿ ಅರಣ್ಯ ಒತ್ತುವರಿ ತೆರವು ಕಾರ್ಯಪಡೆ ರಚನೆ:ಈಶ್ವರ ಖಂಡ್ರೆ

ಬೆಂಗಳೂರು(reporterkarnataka.com): ರಾಜ್ಯದ 10 ಜಿಲ್ಲೆಗಳಲ್ಲಿ ಆವರಿಸಿರುವ ಪಶ್ಚಿಮಘಟ್ಟ ಸೇರಿದಂತೆ ಎಲ್ಲ ಘಟ್ಟ ಪ್ರದೇಶದಲ್ಲಿ ಅಕ್ರಮವಾಗಿ ತಲೆ ಎತ್ತಿರುವ ರೆಸಾರ್ಟ್, ಹೋಂ ಸ್ಟೇ ಮತ್ತು ಇಲ್ಲಿನ ಎಲ್ಲ ಅರಣ್ಯ ಒತ್ತುವರಿಗಳನ್ನು ತೆರವು ಮಾಡಲು ‘ಪಶ್ಚಿಮಘಟ್ಟ ಸೇರಿ ಅರಣ್ಯ ಒತ್ತುವರಿ ತೆರವು ಕಾರ್ಯಪಡೆ’ ರಚಿಸಿರುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಘೋಷಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಹೇಳಿಕೆ ನೀಡಿರುವ ಅವರು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥರ ನೇತೃತ್ವದಲ್ಲಿ ಈ ಕಾರ್ಯಪಡೆ ರಚಿಸಲಾಗಿದ್ದು, ನಾಳೆಯಿಂದಲೇ ಪಶ್ಚಿಘಟ್ಟ ಮತ್ತು ಇತರ ಘಟ್ಟ ಪ್ರದೇಶಗಳಲ್ಲಿನ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಘಟ್ಟ ಪ್ರದೇಶಗಳಲ್ಲಿನ ಅರಣ್ಯದಲ್ಲಿ 2015ರ ನಂತರ ಆಗಿರುವ ಒತ್ತುವರಿಗೆ ಸಂಬಂಧಿಸಿದಂತೆ 64ಎ ಪ್ರಕ್ರಿಯೆ ಪೂರ್ಣಗೊಂಡಿರುವ ಎಲ್ಲ ಪ್ರಕರಣಗಳಲ್ಲಿ ಇಂದಿನಿಂದಲೇ ತೆರವು ಕಾರ್ಯಾಚರಣೆ ಮಾಡಲು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಎಸಿಎಫ್, ಡಿಸಿಎಫ್, ಸಿಎಫ್, ಸಿಸಿಎಫ್, ಎ.ಪಿ.ಸಿಸಿಎಫ್ ಗಳಿಗೂ ಅರಣ್ಯ ಒತ್ತುವರಿ ಪ್ರಕರಣಗಳ ವಿಚಾರಣೆ ನಡೆಸಿ 64ಎ ಅಡಿಯಲ್ಲಿ ಆದೇಶ ನೀಡಲು ಅವಕಾಶವಿದ್ದು, ಬಾಕಿ ಇರುವ ಎಲ್ಲ 64 ಎ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಲು ಎಸಿಎಫ್ ಮೇಲ್ಪಟ್ಟ ದರ್ಜೆಯ ಎಲ್ಲ ಅಧಿಕಾರಿಗಳಿಗೂ ವಾರದಲ್ಲಿ ಎರಡು ದಿನ ತಮ್ಮ ತಮ್ಮ ವಲಯದಲ್ಲಿ ಪ್ರಕ್ರಿಯೆ ನಡೆಸಿ ತ್ವರಿತವಾಗಿ ಆದೇಶ ನೀಡಲು ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಈಗಾಗಲೇ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಅಡ್ವೊಕೇಟ್ ಜನರಲ್ ಅವರೊಂದಿಗೆ ಸಮಾಲೋಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪಶ್ಚಿಮಘಟ್ಟ ಅರಣ್ಯ ಒತ್ತುವರಿ ಕಾರ್ಯಪಡೆಗೆ ಸೂಚಿಸಿರುವುದಾಗಿ ಈಶ್ವರ ಖಂಡ್ರೆ ಹೇಳಿದ್ದಾರೆ.
ಮೊದಲಿಗೆ ದೊಡ್ಡ ಪ್ರಮಾಣದಲ್ಲಿ ಅರಣ್ಯ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಅಕ್ರಮ ರೆಸಾರ್ಟ್, ಹೋಂಸ್ಟೇಗಳನ್ನು ತೆರವು ಮಾಡಿ, ಬಳಿಕ ತೋಟ, ಕಟ್ಟಡಗಳನ್ನು ತೆರವು ಮಾಡಲು ಸೂಚಿಸಲಾಗಿದೆ. ಎಲ್ಲರೂ ಕಾನೂನಿನ ಮುಂದೆ ಸಮಾನರು. ಪಶ್ಚಿಮ ಘಟ್ಟವನ್ನು ಒತ್ತುವರಿ ಮಾಡಿ ವಾಣಿಜ್ಯ ಚಟುವಟಿಕೆ ನಡೆಸುವವರಿಗೆ ಅವಕಾಶ ನೀಡುವುದಿಲ್ಲ. ಇಂಥಹ ಚಟುವಟಿಕೆಯಿಂದ ಪರಿಸರಕ್ಕೆ ಆಗುವ ಹಾನಿಯನ್ನು ಸರಿದೂಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಅವೈಜ್ಞಾನಿಕ ರಸ್ತೆ ಕಾಮಗಾರಿ ವಿರುದ್ಧವೂ ಕ್ರಮ:
ಪಶ್ಚಿಮ ಘಟ್ಟ ಪ್ರದೇಶದಲ್ಲಿ ರಸ್ತೆಗಳ ಮೇಲ್ದರ್ಜೆ, ವಿಸ್ತರಣೆಯ ವೇಳೆ ಅವೈಜ್ಞಾನಿಕವಾಗಿ 90ಡಿಗ್ರಿಗೆ ಗುಡ್ಡ ಕಡಿದಿರುವುದೂ ಕುಸಿತಕ್ಕೆ ಕಾರಣವಾಗಿದ್ದು, ಇಂತಹ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಮತ್ತು ಎಂಜಿನಿಯರುಗಳಿಗೂ ನೋಟಿಸ್ ನೀಡಿ ಕ್ರಮ ಜರುಗಿಸಲು ನಿರ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ವಯನಾಡು ಮತ್ತು ಉತ್ತರ ಕನ್ನಡದ ಶಿರೂರಿನಲ್ಲಿ ಘೋರ ದುರಂತ ಸಂಭವಿಸಿದ್ದು ಜೀವಹಾನಿ ಆಗಿದೆ. ಸಹಸ್ರಾರು ವರ್ಷಗಳ ಗುಡ್ಡವೇ ಕಣ್ಮರೆಯಾಗಿದೆ. ಶಿರಾಡಿ ಘಾಟ್, ಚಾರ್ಮಾಡಿ ಘಾಟ್ ಸೇರಿದಂತೆ ರಾಜ್ಯದ ಪಶ್ಚಿಮಘಟ್ಟಗಳಲ್ಲಿ ನಿರಂತರವಾಗಿ ಗುಡ್ಡ ಕುಸಿತಗಳು ಸಂಭವಿಸುತ್ತಿವೆ. ಈಗಲೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು