ಇತ್ತೀಚಿನ ಸುದ್ದಿ
ನಂಜನಗೂಡು: ಗ್ರಾಮೀಣ ಪ್ರದೇಶದ ಮನೆಗಳ ಕದ ತಟ್ಟಿದ ವಿದ್ಯಾರ್ಥಿಗಳು; ಬಡವರ ಮನೆ ಬಾಗಿಲಿಗೆ ಸಂವಿಧಾನ ಪೀಠಿಕೆ
20/02/2024, 19:52
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನರ ಮತ ಸೆಳೆಯುವ ಸಲುವಾಗಿ ಇಲ್ಲಸಲ್ಲದ ಸೌಲಭ್ಯಗಳನ್ನು ನಿಮ್ಮ ಮನೆಯ ಬಾಗಿಲಿಗೆ ತಲುಪಿಸುತ್ತೇವೆ ಎಂಬ ಭರವಸೆಯನ್ನು ಮಾತ್ರ ನೀಡುತ್ತಾರೆ . ಆದರೆ ವಸತಿ ಶಾಲೆಯ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಬಡಜನರ ಮನೆ ಬಾಗಿಲು ತಟ್ಟಿ ವಿನೂತನ ಜಾಗೃತಿ ಕಾರ್ಯಕ್ರಮಕ್ಕೆ ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಹಾಗಾದ್ರೆ ಅದು ಏನು ಅಂತೀರಾ..! ನಂಜನಗೂಡು ತಾಲ್ಲೂಕಿನ ಸಿಂಧುವಳ್ಳಿ ಗ್ರಾಮದ ಬಳಿ ಇರುವ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಮನೆ ಮನೆಗೆ ಸಂವಿಧಾನ ಜಾಗೃತಿ ಮತ್ತು ಮನ ಮನಕ್ಕೆ ಅಂಬೇಡ್ಕರ್ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಶಾಲೆಯ ಪ್ರಾಂಶುಪಾಲರಾದ ಎಸ್. ಸಿದ್ದರಾಜು ಹಾಗೂ ಶಿಕ್ಷಕರ ನೇತೃತ್ವದ ತಂಡ ವಿದ್ಯಾರ್ಥಿಗಳ ಜೊತೆಗೂಡಿ ಸಿಂಧುವಳ್ಳಿ ಗ್ರಾಮಕ್ಕೆ ತೆರಳಿ ಎಲ್ಲಾ ವರ್ಗದ ಜನರ ಬಡಾವಣೆಗಳಿಗೆ ಮತ್ತು ಮನೆಯ ಬಾಗಿಲಿಗೆ ತೆರಳಿ ಸಂವಿಧಾನದ ಪೀಠಿಕೆಯನ್ನು ಓದಿಸುವುದರ ಮೂಲಕ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ .
ಮನೆಗಳಿಗೆ ತೆರಳಿ ಮಹಿಳೆಯರು ಮತ್ತು ಮನೆಯ ಯಜಮಾನರುಗಳಿಗೆ ಗ್ರಾಮದ ಮುಖಂಡರುಗಳಿಗೆ ಸಂವಿಧಾನದ ಪೀಠಿಕೆಯನ್ನು ತೋರಿಸಿ ಅವರ ಬಾಯಿಂದ ಓದಿಸುವುದರ ಮೂಲಕ ಪ್ರಬುದ್ಧ ಸಮಾಜ ನಿರ್ಮಾಣಕ್ಕೆ ಮುಂದಾಗಿ ಅನಕ್ಷರತೆಯನ್ನು ತೊಲಗಿಸಿ ಕಡ್ಡಾಯವಾಗಿ ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ, ದೇಶದ ಸತ್ಪ್ರಜೆಗಳನ್ನಾಗಿ ಮಾಡಿ ಎಂಬ ಮಾಹಿತಿಯನ್ನು ನೀಡುವುದರ ಜೊತೆಗೆ ಸಂವಿಧಾನವನ್ನು ಉಳಿಸುವ ಜಾಗೃತಿಯನ್ನು ವಿದ್ಯಾರ್ಥಿಗಳು ಮತ್ತು ವಸತಿ ಶಾಲೆಯ ಶಿಕ್ಷಕರು ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಕಾರ್ಯವೈಖರಿಗೆ ನಂಜನಗೂಡಿನ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.