ಇತ್ತೀಚಿನ ಸುದ್ದಿ
ಬಜೆಟ್ ಮಂಡನೆ ವೇಳೆ ಸಭಾತ್ಯಾಗ ಮಾಡಿದ ಬಿಜೆಪಿ, ಜೆಡಿಎಸ್: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ
16/02/2024, 21:31
ಬೆಂಗಳೂರು(reporterkarnataka.com): ಬಜೆಟ್ ವೇಳೆ ಸಭಾತ್ಯಾಗ ಮಾಡಿದ ವಿರೋಧ ಪಕ್ಷಗಳ ವಿರುದ್ಧ ಕಿಡಿ ಕಾಡಿರುವ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸದನದ ಗೌರವಕ್ಕೆ ದಕ್ಕೆ ತಂದಿದ್ದಾರೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಐತಿಹಾಸಿಕ ಬಜೆಟ್ ಮಂಡಿಸಿದ್ದಾರೆ. ಎಲ್ಲಾ ಕ್ಷೇತ್ರಗಳಿಗೆ ಸಮಾನಾಗಿ ಅನುದಾನ ಹಂಚಿಕೆ ಮಾಡಿದ್ದಾರೆ. ಅವರದ್ದೆ (ಬಿಜೆಪಿ) ಸರ್ಕಾರ ಕೇಂದ್ರದಲ್ಲಿದ್ದು, ಜಿಎಸ್ ಟಿ ಸೇರಿದಂತೆ ಇನ್ನಿತರ ಯಾವುದೇ ಅನುದಾನ ಬಿಡುಗಡೆ ಮಾಡಲು ಒತ್ತಡ ಹೇರಿಲ್ಲ. ಬದಲಿಗೆ ರಾಜಕೀಯ ಮಾಡಿಕೊಂಡೇ ಬಂದಿದ್ದಾರೆ ಎಂದು ಸಚಿವರು ಆರೋಪಿಸಿದರು.
ರಾಜ್ಯದಲ್ಲಿ ಎದುರಾಗಿರುವ ಬರಗಾಲದ ನಡುವೆಯೂ ಸಿಎಂ ಸಿದ್ದರಾಮಯ್ಯ 3 ಲಕ್ಷದ 71 ಸಾವಿರದ 383 ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಜನಪ್ರಿಯ ಬಜೆಟ್ ಗೆ ಬಿಜೆಪಿ ಅವಮಾನ ಮಾಡಿದೆ. ಮುಂದಿನ ದಿನಗಳಲ್ಲಿ ಜನರೇ ಇದಕ್ಕೆ ಉತ್ತರ ನೀಡುವರು. ಯಾವುದೇ ಒಂದು ಸಮುದಾಯವನ್ನು ಒಲೈಸುವ ಬಜೆಟ್ ಇದಾಗಿಲ್ಲ. ಎಲ್ಲಾ ವರ್ಗದವರಿಗೆ ಸಲ್ಲುವ ಬಜೆಟ್ ಇದಾಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು ನೀಡಿದರು.