ಇತ್ತೀಚಿನ ಸುದ್ದಿ
ಮಂಗಳೂರು: ಕಾರ್ಮಿಕ ವರ್ಗದ ಬೇಡಿಕೆಗಳ ಈಡೇರಿಕೆಗಾಗಿ ಸಿಐಟಿಯುನಿಂದ ಸಂಸದರ ಕಚೇರಿ ಚಲೋ
25/01/2024, 20:12
ಮಂಗಳೂರು(reporterkarnataka.com): ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು, ಜನಪರ ಪರ್ಯಾಯ ನೀತಿಗಳನ್ನು ಜಾರಿಗೊಳಿಸಬೇಕು, ದುಡಿಯುವ ವರ್ಗದ ಹಕ್ಕನ್ನು ಸಂರಕ್ಷಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ವಿವಿಧ ವಿಭಾಗದ ಕಾರ್ಮಿಕರಿಂದ ಇಂದು ನಗರದ ಕ್ಲಾಕ್ ಟವರ್ ಬಳಿಯಲ್ಲಿ ಸಂಸದರ ಕಚೇರಿ ಚಲೋ ಚಳುವಳಿಯ ಭಾಗವಾಗಿ ಪ್ರತಿಭಟನಾ ಧರಣಿಯನ್ನು ನಡೆಸಲಾಯಿತು.
ದೇಶ ಉಳಿಸಿ, ಜನತೆಯ ಬದುಕನ್ನು ರಕ್ಷಿಸಿ ಎಂಬ ಘೋಷಣೆಯೊಂದಿಗೆ ಕಾರ್ಮಿಕ ವರ್ಗದ ನೇತ್ರತ್ವದಲ್ಲಿ ಜನವರಿ 12ರಿಂದ ಫೆಬ್ರವರಿ 16ರವರೆಗೆ ದೇಶಾದ್ಯಂತ ಪ್ರಚಾರಾಂದೋಲನ ನಡೆಯಲಿದ್ದು, ಅದರ ಭಾಗವಾಗಿ ಕಳೆದ 3 ದಿನಗಳಿಂದ ದೇಶದ ಎಲ್ಲಾ ಸಂಸದರ ಕಚೇರಿಯೆದುರು ಪ್ರತಿಭಟನೆ ನಡೆಯುತ್ತಿದೆ.
ಪ್ರತಿಭಟನಾ ಧರಣಿಯನ್ನು ಉದ್ಘಾಟಿಸಿದ ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿಯವರು, ಕಳೆದ 10 ವರ್ಷಗಳಿಂದ ದೇಶವನ್ನಾಳುತ್ತಿರುವ ನರೇಂದ್ರ ಮೋದಿ ಸರಕಾರ ಕಾರ್ಪೊರೇಟ್ ಸಂಸ್ಥೆಗಳ ಹಿತಾಸಕ್ತಿಯನ್ನು ಕಾಪಾಡುವ ಮೂಲಕ ದೇಶದ ಜನತೆಯ ಬದುಕನ್ನು ಸರ್ವನಾಶಗೊಳಿಸಿದೆ. ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ ಮಾಲಕ ವರ್ಗಕ್ಕೆ ಲಾಭ ತರುವಲ್ಲಿ ಶ್ರಮಿಸಿದ್ದು, ಮುಂಬರುವ ದಿನಗಳಲ್ಲಿ ಕಾರ್ಮಿಕ ಕಾನೂನುಗಳೇ ಇಲ್ಲದ ಹಾಗೆ ಮಾಡುವ ಹುನ್ನಾರ ನಡೆಸುತ್ತಿದೆ. ಸ್ವಾತಂತ್ರ್ಯದ ಅಮ್ರತ ಮಹೋತ್ಸವವನ್ನು ದಾಟಿ ಮುನ್ನಡೆಯುತ್ತಿದ್ದರೂ, ದುಡಿಯುವ ವರ್ಗಕ್ಕೆ ಕನಿಷ್ಟ ಕೂಲಿಯಿಲ್ಲದೆ ಬದುಕಲು ಅಸಾಧ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷರಾದ ಜೆ.ಬಾಲಕೃಷ್ಣ ಶೆಟ್ಟಿಯವರು ಮಾತನಾಡುತ್ತಾ, ಯಾವುದೇ ಸರಕಾರ ಅಧಿಕಾರಕ್ಕೇರಲು ಕಾರ್ಮಿಕ ವರ್ಗದ ಪಾತ್ರವೇ ಪ್ರಧಾನ. ಆದರೆ ಅಧಿಕಾರಕ್ಕೆ ಬಂದ ಯಾವ ಸರಕಾರಗಳೂ ಕೂಡ ಕಾರ್ಮಿಕ ವರ್ಗದ ಪರವಾಗಿ ಶ್ರಮಿಸುತ್ತಿಲ್ಲ. ಬದಲಾಗಿ ಮಾಲಕರ ಹಾಗೂ ಕಾರ್ಪೊರೇಟ್ ಕಂಪೆನಿಗಳ ಪರವಾಗಿ ಧ್ರಢವಾಗಿ ನಿಂತು ಕಾರ್ಮಿಕರ ವಿರುದ್ದವೇ ದಬ್ಬಾಳಿಕೆ ನಡೆಸುತ್ತದೆ ಎಂದು ತೀವ್ರವಾಗಿ ಟೀಕಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ, ದುಡಿಮೆಗೆ ತಕ್ಕ ಪ್ರತಿಫಲವಿಲ್ಲದೆ ಒದ್ದಾಡುತ್ತಿರುವ ಕಾರ್ಮಿಕ ವರ್ಗ,ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆಯಿಂದಲೂ ತತ್ತರಿಸುತ್ತಿದೆ.ಅಸಂಘಟಿತ ಕ್ಷೇತ್ರದ ಕೋಟ್ಯಾಂತರ ಸಂಖ್ಯೆಯ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚಿಸಲು ಅರ್ಥಿಕ ಕೊರತೆಯ ನೆಪ ಹೇಳುವ ಸರಕಾರ ಈ ದೇಶದ 100 ಕೋಟಿ ಒಡೆತನದ ಅಗರ್ಭ ಶ್ರೀಮಂತರಿಗೆ ಕೇವಲ 2% ವಿಶೇಷ ತೆರಿಗೆ ಹಾಕಿದರೆ 134 ಲಕ್ಷ ಕೋಟಿ ರೂ.ಸಂಗ್ರಹವಾಗುತ್ತದೆ. ಇದರಿಂದ ಇಡೀ ದೇಶದ ಜನತೆಗೆ ಉಚಿತವಾಗಿ ಆಹಾರ,ಆರೋಗ್ಯ, ಶಿಕ್ಷಣವನ್ನು ಉಚಿತವಾಗಿ ನೀಡಬಹುದಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರೈತ ಸಂಘಟನೆ ಯ ನಾಯಕರಾದ ಕ್ರಷ್ಣಪ್ಪ ಸಾಲ್ಯಾನ್, ಸದಾಶಿವದಾಸ್,ಯುವಜನ ಮುಖಂಡರಾದ ರಿಜ್ವಾನ್ ಹರೇಕಳ,ಜಗದೀಶ್ ಬಜಾಲ್ ರವರು ಭಾಗವಹಿಸಿದ್ದರು.
ಹೋರಾಟದ ನೇತೃತ್ವವನ್ನು ಸಿಐಟಿಯು ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು, ಸುಕುಮಾರ್ ತೊಕ್ಕೋಟು, ರಾಧಾ ಮೂಡಬಿದ್ರೆ, ಪದ್ಮಾವತಿ ಶೆಟ್ಟಿ, ಸುಂದರ ಕುಂಪಲ, ಜಯಂತ ನಾಯಕ್, ರೋಹಿದಾಸ್,ವಸಂತಿ ಕುಪ್ಪೆಪದವು,ಗಿರಿಜಾ ಮೂಡಬಿದ್ರೆ,ಜನಾರ್ದನ ಕುತ್ತಾರ್,ಭಾರತಿ ಬೋಳಾರ, ಜಯಲಕ್ಷ್ಮಿ, ಲೋಲಾಕ್ಷಿ,ಪುಷ್ಪಾ, ವಾರಿಜಾ,ಲಕ್ಷ್ಮಿ,ಜಯಶ್ರೀ ಬೆಳ್ತಂಗಡಿ, ಮುಸ್ತಾಫ,ಆಸಿಫ್, ಅಹಮ್ಮದ್ ಭಾವ ಮುಂತಾದವರು ವಹಿಸಿದ್ದರು.
ಬಳಿಕ ಸಿಐಟಿಯುನ ಉನ್ನತ ಮಟ್ಟದ ನಿಯೋಗವೊಂದು ಜಿಲ್ಲೆಯ ಸಂಸದರಾದ ನಳೀನ್ ಕುಮಾರ್ ಕಟೀಲ್ ಅವರ ಕಚೇರಿಗೆ ತೆರಳಿ ಮನವಿಯನ್ನು ಅರ್ಪಿಸಲಾಯಿತು.