ಇತ್ತೀಚಿನ ಸುದ್ದಿ
ಕೇರಳದ ಪಾನೂರಿನಲ್ಲಿ ಕೊರೊನಾ ಹೊಸ ಉಪ ತಳಿ ಪತ್ತೆ: ರಾಜ್ಯದಲ್ಲೂ ಮುಂಜಾಗ್ರತೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ
17/12/2023, 17:02
ತಿರುವನಂತಪುರ(reporterarnataka.com):ಕೊರೊನಾ ಹೊಸ ಉಪ ತಳಿ ಪತ್ತೆಯಾಗುವ ಮೂಲಕ ಮತ್ತೆ ದೇಶದ ಜನತೆಗೆ ಶಾಕ್ ಕೊಟ್ಟಿದೆ. ಕೊರೊನಾ ಉಪತಳಿ ಜೆಎನ್ 1 ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾಗಿದ್ದು, 80ರ ಹರೆಯ ವೃದ್ಧರೊಬ್ಬರು ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಹೈ ಅಲರ್ಟ್ ವಹಿಸಲಾಗಿದೆ.
ಕೇರಳದಲ್ಲಿ ಕೊರೊನಾ ಉಪ ತಳಿ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡ ಹೈ ಅಲರ್ಟ್ ಆಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತುರ್ತು ಸಭೆ ನಡೆಸಿ, ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಂಗಳವಾರ ಹೈ ಪವರ್ ಸಭೆ ಕರೆಯಲಾಗಿದೆ. ಎಲ್ಲರೂ ಎಚ್ಚರಿಕೆಯಿಂದ ಇರೋಣ. ಅನಾಹುತ ಆಗುವುದಕ್ಕೆ ಬಿಡಬಾರದು. ಅಂತರ್ ರಾಜ್ಯ ಗಡಿ ಭಾಗಗಳನ್ನು ಸೀಲ್ ಮಾಡೋದು, ರೈಲ್ವೆ, ವಿಮಾನ ನಿಲ್ದಾಣಗಳಲ್ಲಿ ಸದ್ಯಕ್ಕೆ ತಪಾಸಣೆ ಮಾಡೋದು ಅಗತ್ಯವಿಲ್ಲ. ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆಗೆ ಸಿದ್ಧತೆ ನಡೆದಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೇರಳದ ಕಣ್ಣೂರಿನ ಪಾನೂರಿನ 80ರ ಹರೆಯದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಕಣ್ಣೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಸಾರ್ವಜನಿಕ ಸಭೆ, ಸಮಾರಂಭಗಳ ಮೇಲೆ ನಿರ್ಬಂಧಗಳನ್ನು ಹಾಕಲಾಗಿದೆ. ಆದರೆ ವೃದ್ದ ಸಾವನ್ನಪ್ಪಿರುವುದು ವಯೋಸಹಜ ಕಾಯಿಲೆಯಿಂದಲೋ ಅಥವಾ ಕೊರೊನಾ ಹೊಸ ಉಪ ತಳಿಯ ಸೋಂಕಿನಿಂದಲೋ ಎನ್ನುವ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಇದೀಗ ಕಂಡು ಬಂದಿರುವ ಜೆಎನ್ 1 ವೈರಸ್ ಓಮೈಕ್ರಾನ್ ಸಬ್ ವೇರಿಯಂಟ್ ಬಿಎ 2.86 ವಂಶಕ್ಕೆ ಸೇರಿದ್ದಾಗಿದೆ. ಪಿರೋಲಾ ಎಂದು ಇದನ್ನು ಕರೆಯಲಾಗುತ್ತದೆ. ಇದರ ತೀವ್ರತೆಯ ಬಗ್ಗೆ ಸಂಶೋಧನೆಗಳಿಂದ ಇನ್ನಷ್ಟೇ ತಿಳಿದು ಬರಬೇಕಿದೆ.