ಇತ್ತೀಚಿನ ಸುದ್ದಿ
ಎನ್ ಐಎ ಕಾರ್ಯಾಚರಣೆ: ಮಂಗಳೂರು ಸೇರಿದಂತೆ ದೇಶಾದ್ಯಂತ ಒಟ್ಟು 4 ಮಂದಿ ವಶಕ್ಕೆ; ದಿಲ್ಲಿಯಲ್ಲಿ ವಿಚಾರಣೆ?
05/08/2021, 09:13
ಬೆಂಗಳೂರು/ಮಂಗಳೂರು(reporterkarnataka.com): ಐಸಿಸ್ ಜತೆಗಿನ ನಂಟಿನ ಆರೋಪದ ಮೇಲೆ ಉಳ್ಳಾಲದ ಮಾಸ್ತಿಕಟ್ಟೆಯ ನಿವಾಸಕ್ಕೆ ಬುಧವಾರ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಂಡ ಓರ್ವನನ್ನು ವಶಕ್ಕೆ ಪಡೆದಿದ್ದು, ದೇಶದ ವಿವಿಧ ಕಡೆಗಳಿಂದ ಒಟ್ಟು 4 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದೆ.
ಉಳ್ಳಾಲದ ಬಿ.ಎಂ. ಬಾಷಾ ಅವರ ಮನೆಗೆ ದಾಳಿ ನಡೆಸಿದ ಎನ್ ಐಎ ತಂಡ ದಿನವಿಡೀ ವಿಚಾರಣೆ ನಡೆಸಿ ಬಳಿಕ ಓರ್ವನನ್ನು ವಶಕ್ಕೆ ಪಡೆದುಕೊಂಡಿದೆ. ಮಾಸ್ತಿಕಟ್ಟೆ ನಿವಾಸಿಯಾಗಿರುವ ಬಾಷಾ ಅವರ ನಿವಾಸಕ್ಕೆ ಸುಮಾರು 20 ಮಂದಿಯ ಎನ್‌ಐಎ ತಂಡ ಮುಂಜಾನೆ 5.30ಕ್ಕೆ ದಾಳಿ ಮಾಡಿತ್ತು. ಸಂಜೆ ಬಾಷಾ ಅವರ ಕಿರಿಯ ಪುತ್ರ ಅಮ್ಮಾರ್ ಎಂಬಾತನನ್ನು ಹೆಚ್ಚಿನ ವಿಚಾರಣೆಗೆಂದು ವಶಕ್ಕೆ ಪಡೆದುಕೊಂಡಿದೆ.
ಆತನನ್ನು ಮಂಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗೆ ಬೆಂಗಳೂರು ಅಥವಾ ದಿಲ್ಲಿಗೆ ಕರೆದೊಯ್ಯಲಾಗುತ್ತದೆ ಎನ್ನಲಾಗಿದೆ.
ಎನ್ಐಎ ತಂಡ ತಲಾ ಒಬ್ಬರನ್ನು ಮಂಗಳೂರು(ಉಳ್ಳಾಲ) ಮತ್ತು ಬೆಂಗಳೂರಿನಿಂದ ಮತ್ತು ಇತರ ಇಬ್ಬರನ್ನು ಜಮ್ಮು-ಕಾಶ್ಮೀರದ ಬಂಡಿಪೋರ ಮತ್ತು ಶ್ರೀನಗರದಿಂದ ವಶಕ್ಕೆ ಪಡೆದಿದೆ ಎಂದು ತಿಳಿದು ಬಂದಿದೆ.