ಇತ್ತೀಚಿನ ಸುದ್ದಿ
ವಾಯ್ಸ್ ಆಫ್ ಆರಾಧನಾ ಸ್ಪರ್ಧೆ: ತಪಸ್ಯಾ ಕಟೀಲು ಮತ್ತು ರೋಶನ್ ಗಿಳಿಯಾರು ಜುಲೈ ತಿಂಗಳ ಟಾಪರ್
31/07/2021, 19:11
ಮಂಗಳೂರು(reporterkarnataka.com); ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜುಲೈ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ತಪಸ್ಯಾ ಕಟೀಲು ಹಾಗೂ ರೋಶನ್ ಗಿಳಿಯಾರು ಆಯ್ಕೆಗೊಂಡಿದ್ದಾರೆ.
ತಪಸ್ಯಾ ಕಟೀಲು ಅವರು ದಿನೇಶ್ ಕುಮಾರ್ ಹಾಗೂ ಕವಿತಾ ದಂಪತಿಯ ಪುತ್ರಿ. ಕಟೀಲಿನಲ್ಲಿ ಜನಿಸಿದ ಈಕೆ ಪ್ರಸ್ತುತ 7ನೇ ತರಗತಿಯಲ್ಲಿ
ಬೆಳ್ಮಣ್ ನ ಶ್ರೀ ಲಕ್ಷ್ಮೀಜನಾರ್ದನ ಇಂಟರ್ನ್ಯಾಶನಲ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ತನ್ನ ನಾಲ್ಕನೇ ವಯಸ್ಸಿನಿಂದ ಕಟೀಲು ಶ್ರೀ ದುರ್ಗಾಮಕ್ಕಳ ಮೇಳದ ರಾಜೇಶ್ ಐ.ಕಟೀಲು ಅವರಿಂದ ಯಕ್ಷಗಾನ ನಾಟ್ಯಾಭ್ಯಾಸ ಕಲಿಯುತ್ತಿದ್ದಾಳೆ. ಈಗಾಗಲೇ ಸುಮಾರು 50 ಕಡೆಗಳಲ್ಲಿ ಯಕ್ಷಗಾನ ಪ್ರದರ್ಶಿನ ನೀಡಿದ್ದಾಳೆ.
ಚೆಂಡೆ, ಮದ್ದಳೆ ಹಾಗೂ ಭಾಗವತಿಕೆಯನ್ನು ಕೃಷ್ಣರಾಜ ನಂದಳಿಕೆ ಅವರಿಂದ ಕಲಿಯುತ್ತಿದ್ದಾಳೆ.
ಸಂಗೀತ, ನೃತ್ಯ, ಏಕಪಾತ್ರಾಭಿನಯ ಮುಂತಾದ ಹವ್ಯಾಸ ಹೊಂದಿರುವ ತಪಸ್ಯಾ ಡ್ರಾಯಿಂಗ್ ನಲ್ಲಿಯೂ ಮುಂದಿದ್ದಾಳೆ. ಈಕೆ ಸುಮಾರು 13 ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಪಾತ್ರ ನಿರ್ವಹಿಸಿದ್ದಾಳೆ. ಇತ್ತೀಚೆಗೆ ಕಾರ್ಕಳ ಅಜೆಕಾರಿನಲ್ಲಿ ನಡೆದ ಆದಿ ಗ್ರಾಮೋತ್ಸವ ಸಾಹಿತ್ಯ ಸಮ್ಮೇಳದಲ್ಲಿ ಬಾಲ ಪ್ರತಿಭೆ ಎಂಬ ಗೌರವ ಪಡೆದಿದ್ದಾಳೆ. ವಾಯ್ಸ್ಆಫ್ ಆರಾಧನಾ ಅವಾರ್ಡ್ ಪಡೆದ ಹೆಗ್ಗಳಿಕೆಯೂ ಈಕೆಯದ್ದಾಗಿದೆ.
ಇನ್ನೊಬ್ಬ ಬಾಲಪ್ರತಿಭೆ ರೋಶನ್ ಗಿಳಿಯಾರು. ಈತ ಶಿವರಾಮ್ ಕಾರ್ಕಡ ಹಾಗೂ ರಾಧಿಕಾ ದಂಪತಿ ಪ್ರಥಮ ಪುತ್ರ. ಈತನಿಗೆ ರೋಹನ್ ಹಾಗೂ ರೋಚನ್ ಸಹೋದರರಿದ್ದಾರೆ. ಬಾಲ್ಯದ ವಿದ್ಯಾಭ್ಯಾಸವನ್ನು ಮೂಡುಗಿಳಿಯಾರು ಕೇಶವ ಶಿಶು ಮಂದಿರದಲ್ಲಿ ಪೂರೈಸಿ, ಪ್ರಾಥಮಿಕ ವಿದ್ಯಾಭ್ಯಾಸವನ್ನು ತೆಕ್ಕಟ್ಟೆಯ ಸೇವಾ ಸಂಗಮ ವಿದ್ಯಾಕೇಂದ್ರದಲ್ಲಿ ಮುಗಿಸಿದ್ದಾನೆ. ಪ್ರಸ್ತುತ ಕೋಟ ವಿವೇಕ ಪ್ರೌಢ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾನೆ. 8ನೇ ವಯಸ್ಸಿನಲ್ಲಿ ವಡ್ಡರ್ಸೆ ಮಹಾಲಿಂಗೇಶ್ವರ ಯಕ್ಷಗಾನ ಕಲಾರಂಗದ ಪ್ರಸಾದ್ ಮೊಗೆಬೆಟ್ಟು ಹಾಗೂ ದೇವದಾಸ್ ಕೂಡ್ಲಿ ಅವರಲ್ಲಿ ಯಕ್ಷಗಾನ ಹೆಜ್ಜೆಯನ್ನು ಅಭ್ಯಾಸ ಮಾಡಿದ್ದಾನೆ.
ರಾಜಶೇಖರ್ ಹೆಬ್ಬಾರ್ ಅವರ ನಿರ್ದೇಶನದ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದಲ್ಲಿ ರಾಮಕೃಷ್ಣ ಭಟ್ ಅವರಲ್ಲಿ ಚಂಡೆ, ಮದ್ದಲೆ, ಉದಯ್ ಹೊಸಾಳ ಹಾಗೂ ಸದಾನಂದ ಐತಾಳ್ ಅವರಲ್ಲಿ ಭಾಗವತಿಕೆ, ನೀಲಾವರ ಕೇಶವ ಆಚಾರ್ ಅವರಲ್ಲಿ ಹೆಜ್ಜೆಯನ್ನು ಅಭ್ಯಾಸ ಮಾಡಿದ್ದಾನೆ. ಕೋಟ ಕಾರಂತ ಥೀಮ್ ಪಾರ್ಕ್ ನಲ್ಲಿ ವಕ್ವಾಡಿ ಗಿರೀಶ್ ಆಚಾರ್ಯ ಅವರಲ್ಲಿ ಚಿತ್ರಕಲೆ, ಜನಾರ್ಧನ್ ಕುಂಬಾಶಿ ಅವರಲ್ಲಿ ಕರೋಕೆ ಸಂಗೀತ, ಮೊದಲು ಸಂದೀಪ್ ಪೂಜಾರಿ ಇವರಲ್ಲಿ ಕರಾಟೆ ಕಲಿತು ಪ್ರಸ್ತುತ ಮಂಜುನಾಥ್ ಮೊಗವೀರ ಗಿಳಿಯಾರು ಅವರಲ್ಲಿ ಕರಾಟೆಯನ್ನು ಕಲಿಯುತ್ತಿದ್ದಾನೆ. ಇದರ ಜೊತೆಗೆ ರವಿ ಬಸ್ರೂರ್ ನಿರ್ದೇಶನದ ಗಿರ್ಮಿಟ್ ಚಲನಚಿತ್ರ, ಜಿ. ಮೂರ್ತಿ ನಿರ್ದೇಶನದ ಸುಗಂಧಿ ಚಲನಚಿತ್ರ, ರಾಘವೇಂದ್ರ ಶಿರಿಯಾರ ನಿರ್ದೇಶನದ ಅಜ್ಜಿಮನಿ ಹಾಗೂ ಅಕ್ರೂಟ್ ಕಿರುಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾನೆ. ಇಲ್ಲಿಯ ತನಕ 30ಕ್ಕೂ ಹೆಚ್ಚು ಏಕವ್ಯಕ್ತಿ ಯಕ್ಷಗಾನ ಪ್ರದರ್ಶನ ನೀಡಿದ್ದಾನೆ. 20ಕ್ಕೂ ಹೆಚ್ಚು ಯಕ್ಷಗಾನ ಪಾತ್ರಗಳಲ್ಲಿ ಅಭಿನಯಿಸಿದ ಹೆಮ್ಮೆ ಆತನದ್ದು. ಮಹಾಗಣಪತಿ ಕಲಾಸಂಘದ ಪ್ರತಿಭಾ ಪುರಸ್ಕಾರ, ಪಂಚವರ್ಣ ಯುವಕ ಮಂಡಲ ಕೋಟ ಅವರು ನೀಡಿದ ಪ್ರತಿಭಾ ಪುರಸ್ಕಾರ, ಪಟ್ಲ ಫೌಂಡೇಶನ್
ನೀಡಿದ ಪ್ರತಿಭಾ ಪುರಸ್ಕಾರ, ಅಭಿಮತ ಕಾರ್ಯಕ್ರಮದಲ್ಲಿ ನೀಡಿದ ಪ್ರತಿಭಾ ಪುರಸ್ಕಾರ, ಮಾಧುರ್ಯೋತ್ಸವ ಕಾರ್ಯಕ್ರಮದಲ್ಲಿ ನೀಡಿದ ಪ್ರತಿಭಾ ಪುರಸ್ಕಾರ ಗಳು ದೊರೆತಿವೆ.