ಇತ್ತೀಚಿನ ಸುದ್ದಿ
ಪರಶುರಾಮ ಥೀಮ್ ಪಾರ್ಕ್ ಫೋಟೋ ತೆಗೆಯಲು ಹೋದ ವ್ಯಕ್ತಿಗೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ಆರೋಪ: ದೂರು ದಾಖಲು
20/10/2023, 23:32
ಕಾರ್ಕಳ(reporterkarnataka.com): ಬೈಲೂರಿನ ಪರಶುರಾಮ ಥೀಮ್ ಪಾರ್ಕಿಗೆ ಫೋಟೋ ತೆಗೆಯಲು ಹೋದ ಯುವಕನಿಗೆ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ತೊಂದರೆ ನೀಡಿರುವುದಾಗಿ ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.
ಕಾರ್ಕಳದ ಅಲ್ಟಾಝ್ (26) ಎಂಬವರು ಅ.19ರಂದು ಸಂಜೆ ಬೈಲೂರಿನ ಪರಶುರಾಮ ಥೀಮ್ ಪಾರ್ಕಿಗೆ ಫೋಟೋ ತೆಗೆಯಲು ತೆರಳಿದ್ದು ಈ ವೇಳೆ ಅಲ್ಲಿಯೇ ಇದ್ದ ಬಿಜೆಪಿ ಯುವ ಮೋರ್ಚಾದ ಮುಖಂಡರಾದ ವಿಖ್ಯಾತ್, ಸುಹಾಸ್ ಮುಟ್ಟಪಾಡಿ, ರಾಕೇಶ್ ಕುಕ್ಕುಂದೂರು, ರಂಜಿತ್ ಕೌಡೂರು, ಮುಸ್ತಾ ಜಾರ್ಕಳ ಮೊದಲಾದವರು ಅಕ್ರಮ ಕೂಟ ಸೇರಿ ಅಲ್ಟಾಝ್ ಅವರನ್ನು ಎಳೆದುಕೊಂಡು ಹೋದರೆನ್ನಲಾಗಿದೆ.
ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಮೂರ್ತಿಯ ಬಳಿ ಕರೆದುಕೊಂಡು ಹೋಗಿ ಅದು ಕಂಚಿನ ಮೂರ್ತಿ ಎಂಬುದಾಗಿ ಸುತ್ತಿಗೆ ನೀಡಿ ಪರೀಕ್ಷಿಸು ಎಂದು ಹೇಳಿದ್ದಲ್ಲದೇ, ಅಲ್ಟಜ್ ಅವರಲ್ಲಿ ‘ಅದು ಕಂಚಿನ ಮೂರ್ತಿ’ ಎಂದು ಹೇಳಿಸಿ ವಿಡಿಯೋ ಮಾಡಿ ತೊಂದರೆ ಮಾಡಲು ಪ್ರಯತ್ನಿಸಿದ್ದಾರೆ. ಅಲ್ಲದೆ ಅಲ್ಟಾಝ್ ರವರ ಮೊಬೈಲನ್ನು ಎಳೆದುಕೊಂಡು ತೊಂದರೆ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.