1:23 AM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಅಸುರ ಸಂಹಾರಕ್ಕೆ ತ್ರಿಪುರ ಸುಂದರಿಗೆ ಮೋಹವೇ ಅಸ್ತ್ರ: ಪೆರಾಜೆ ಮಠದಲ್ಲಿ ರಾಘವೇಶ್ವರ ಶ್ರೀ

17/10/2023, 23:30

ಮಂಗಳೂರು(reporterkarnataka.com): ಧರ್ಮ ರಕ್ಷಣೆಗೆ ವೀರ ರಸ, ಭೀಬತ್ಸ ರಸಗಳೇ ಪ್ರಧಾನವಲ್ಲ; ಶೃಂಗಾರ ರಸದ ಮೂಲಕವೂ ಧರ್ಮರಕ್ಷಣೆ ಮಾಡಬಹುದು ಎಂಬ ತತ್ವವನ್ನು ಜಗನ್ಮಾತೆ ತ್ರಿಪುರ ಸುಂದರಿ ಲೋಕಕ್ಕೆ ದರ್ಶನ ಮಾಡಿಸಿಕೊಟ್ಟಿದ್ದಾಳೆ. ಜಗನ್ಮಾತೆ ಜಗನ್ಮೋಹಿನಿ ರೂಪದಿಂದ ದುಷ್ಟ ಶಕ್ತಿಗಳ ಸಂಹಾರ ಮಾಡಿ ಧರ್ಮ ರಕ್ಷಣೆ ಮಾಡಿದ ಅದ್ಭುತ ಕಥಾನಕ ಶ್ರೀ ಲಲಿತೋಪಾಖ್ಯಾನ ಎಂದು ಶ್ರೀಮಜ್ಜಗದ್ಗುರು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.
ಮಾಣಿ ಪೆರಾಜೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ನವರಾತ್ರ ನಮಸ್ಯಾ ಅಂಗವಾಗಿ ‘ಶ್ರೀ ಲಲಿತೋಪಾಖ್ಯಾನ’ ಪ್ರವಚನ ಮಾಲಿಕೆಯ ಎರಡನೇ ದಿನದ ಪ್ರವಚನವನ್ನು ಶ್ರೀಗಳು ಅನುಗ್ರಹಿಸಿದರು.
ದೇವಿಯ ಮೊದಲ ರೂಪ ಪ್ರಕೃತಿಯಾದರೆ, ಎರಡನೇ ರೂಪ ವಿಷ್ಣುವಿನ ಮೂಲಕ ಐಕ್ಯಮತ್ಯ ಸಾಧಿಸಿದ ಮೋಹಿನಿ ಎರಡನೇ ರೂಪ ಎಂಬ ಉಲ್ಲೇಖ ಲಲಿತೋಪಾಖ್ಯಾನದಲ್ಲಿದೆ. ಪರಮ ವೈರಾಗ್ಯ ಮೂರ್ತಿಯಾದ ಸಾಕ್ಷಾತ್ ಶಿವ ಕೂಡಾ ಮೋಹಿನಿ ರೂಪಕ್ಕೆ ಮಾರುಹೋಗುತ್ತಾನೆ. ಹರಿ-ಹರ ತತ್ವಗಳ ದಿವ್ಯ, ಅಲೌಕಿಕ ಸಂಯೋಗದಿಂದ ಮಹಾಶಕ್ತಿ ಮಹಾಶಾಸ್ತನ ಆವೀರ್ಭಾವವಾಯಿತು ಎಂದು ಬಣ್ಣಿಸಿದರು.
ಕೆಂಪು ದಾಸವಾಳದ ಮೈಬಣ್ಣ, ಕೆಂಪು ಬಣ್ಣದ ಮಾಲೆ, ಅದೇ ಬಣ್ಣದ ಸೀರೆ ಹೀಗೆ ಅರುಣವರ್ಣ ಇಡೀ ಮಾತೆಯನ್ನು ಆವರಿಸಿತ್ತು. ಮೋಹಿನಿ ಸ್ವರೂಪಳಾದ ಮಾತೆಗೆ ಮೋಹವೇ ಅಸ್ತ್ರ. ಇಡೀ ಜಗತ್ತನ್ನೇ ಮೋಹಗೊಳಿಸುವಂಥ ಮಾಂತ್ರಿಕಶಕ್ತಿ ಮಾತೆಯದ್ದು. ಮೋಹ ಎನ್ನುವುದು ಷಡ್ವೈರಿಗಳಲ್ಲಿ ಒಂದು. ಮೋಹಪಾಷದಲ್ಲಿ ಜನ ವಿವೇಕ ಕಳೆದುಕೊಳ್ಳುತ್ತಾರೆ. ಸರಿ- ತಪ್ಪು ಯಾವುದು ಎಂಬ ಚಿಂತನೆ ಇರುವುದಿಲ್ಲ ಎಂದು ವಿಶ್ಲೇಷಿಸಿದರು.
ಮೋಹ ಎನ್ನುವುದು ನಮ್ಮೊಳಗಿನ ಶತ್ರು. ರಾವಣನ ಸಾವಿಗೆ ರಾಮ ನಿಮಿತ್ತ ಮಾತ್ರ; ಆತನನ್ನು ನಿಜವಾಗಿ ಸಾಯಿಸಿರುವುದು ಆತನ ಮೋಹ. ಆದರೆ ಮೋಹಿನಿ ವಾಸ್ತವವಾಗಿ ಮಾತೆಯ ಸ್ವರೂಪ. ಅದನ್ನು ಕೆಟ್ಟದ್ದು ಎನ್ನಲಾಗದು. ದೇವಸೃಷ್ಟಿಯಲ್ಲಿ ಕೆಟ್ಟದ್ದು ಇರಲು ಸಾಧ್ಯವೇ ಇಲ್ಲ. ವಾಸ್ತವವಾಗಿ ಕೆಟ್ಟದ್ದು ಇರುವುದು ನಮ್ಮ ಮನಸ್ಸಿನಲ್ಲಿ ಎಂದು ಪ್ರತಿಪಾದಿಸಿದರು.
ಬೆಂಕಿ, ಆಯುಧ, ಹೀಗೆ ಪ್ರತಿಯೊಂದನ್ನೂ ಒಳ್ಳೆಯದು ಹಾಗೂ ಕೆಟ್ಟದ್ದು ಎರಡಕ್ಕೂ ಬಳಸಲು ಸಾಧ್ಯ. ಆದ್ದರಿಂದ ಮೋಹ ಕೂಡಾ ಕೆಟ್ಟದ್ದು ಎನ್ನಲು ಸಾಧ್ಯವಿಲ್ಲ. ಮೋಹದಿಂದ ಒಳಿತು ಆಗಿರುವ ನಿದರ್ಶನಗಳೂ ಇವೆ ಎಂದು ಉದಾಹರಣೆ ಸಹಿತ ವಿವರಿಸಿದರು.
ಮೋಹ ಎನ್ನುವುದು ನಮ್ಮನ್ನು ಪರಸ್ಪರ ಬಂಧಿಸಿದೆ. ಇದಕ್ಕೂ ಜೀವನದಲ್ಲಿ ಒಂದು ಪ್ರಮುಖ ಪಾತ್ರ ಇದೆ. ಮೋಹವನ್ನು ಸರ್ವಥಾ ತ್ಯಾಜ್ಯ ಎನ್ನಲು ಸಾಧ್ಯವಿಲ್ಲ. ದೇವ-ದಾನವರಂಥ ಬದ್ಧ ವೈರಿಗಳು ಕೂಡಾ ಸಮುದ್ರ ಮಥನಕ್ಕೆ ಒಂದಾಗುವಂತೆ ಶ್ರೀಮನ್ನಾರಾಯಣ ಮಾಡಿರುವುದು ಈ ಮೋಹದಿಂದ ಎಂಬ ಉದಾಹರಣೆ ನೀಡಿದರು.
ಒಳಿತು ಶಾಶ್ವತವಾಗಬೇಕು. ಕೆಡುಕು ಶಾಶ್ವತವಾಗಬಾರದು ಎಂಬ ಕಾರಣಕ್ಕೆ ಲೋಕದ ಏಕೈಕ ರಕ್ಷಕನಾದ ಶ್ರೀಮನ್ನಾರಾಯಣ, ದೇವತೆಗಳಿಗೆ ಅಮೃತ ಸಿಗುವಂತೆ ಮಾಡುತ್ತಾನೆ. ಇದಕ್ಕಾಗಿ ಲಲಿತಾ ತ್ರಿಪುರಸುಂದರಿಯನ್ನು, ರಾಜರಾಜೇಶ್ವರಿಯನ್ನು ಅಂತರಂಗದಲ್ಲಿ ಆರಾಧಿಸುತ್ತಾನೆ. ಆಗ ಐಕ್ಯರೂಪಳಾದ ಲಲಿತಾ ತ್ರಿಪುರಸುಂದರಿ ಲೋಕಕಲ್ಯಾಣಕ್ಕೆ ಆವೀರ್ಭವಿಸುತ್ತಾಳೆ ಎಂದರು.
ಮೋಹದ ಮೂಲ ಮಹಾಮಾಯೆ, ಆದಿಶಕ್ತಿ. ಆಕೆ ವಿಷ್ಣುವಿನ ಐಕ್ಯರೂಪಿಣಿ ಎನ್ನುವ ಸ್ಪಷ್ಟ ಉಲ್ಲೇಖ ಲಲಿತೋಪಾಖ್ಯಾನದಲ್ಲಿದೆ.
ಅಗಸ್ತ್ಯರು ಕಾಮಾಕ್ಷಿಯ ದರ್ಶನ ಮಾಡಿದಾಗ, ಅದು ಹರಿಯ ತಪಸ್ಸು ಮಾಡಿದಂತೆ ಆಯಿತು. ಆಗ ಆವೀರ್ಭವಿಸಿದ್ದು ಹಯಗ್ರೀವ. ಹಯಗ್ರೀವ ಮುನಿ ಶ್ರೀವಿದ್ಯೆಯನ್ನು ಕರುಣಿಸಿದ ಎಂದು ಬಣ್ಣಿಸಿದರು.
ಶಿವನ ಅರ್ಧಭಾಗ ವಿಷ್ಣು ಎನ್ನುವುದನ್ನು ಎಲ್ಲ ಶಾಸ್ತ್ರಗಳು ಹೇಳುತ್ತವೆ. ಸರ್ವಜ್ಞತ್ವ, ಈಶ್ವರತ್ವ ಎರಡರ ಸಂಯೋಗವೇ ಹರಿಹರ ರೂಪ. ಒಂದೇ ದೇಹದ ಸಹಸ್ರ ಚಕ್ರಗಳಲ್ಲಿ ಎಡ-ಬಲಗಳೆಂಬ ಎರಡು ಭಾಗಗಳೇ ಶಿವ- ವಿಷ್ಣು. ಮೋಹಿನಿ ರೂಪ ಕೂಡಾ ಇದಕ್ಕೆ ಇನ್ನೊಂದು ನಿದರ್ಶನ. ಮೋಹಿನಿ ಹರಿ-ಹರ ಶಕ್ತಿಗಳ ಅದ್ವೈತರೂಪ. ಆದರೆ ಶೈವರು ಮತ್ತು ವೈಷ್ಣವರ ನಡುವೆ ಸಮನ್ವಯ ಇಲ್ಲದಿರುವುದು ವಿಪರ್ಯಾಸ ಎಂದರು.
ರೂಪ ನೂರಾರು; ಆದರೆ ತತ್ವ ಒಂದೇ ಎಂಬ ಭಾವ ನಮ್ಮದಾಗಬೇಕು. ದೇವಭಾವ ಒಂದೇ. ರೂಪ ಮಾತ್ರ ಬೇರೆ ಎನ್ನುವುದು ವಾಸ್ತವ. ಸರ್ವ ಸಮ್ಮೋಹಿನಿ ರೂಪವನ್ನು ಮೋಹಿನಿ ತಳೆಯುತ್ತಾಳೆ. ಆಕೆಯನ್ನು ನೋಡಿದ ಎಲ್ಲರೂ ಆ ರೂಪದಲ್ಲೇ ಆಕೆಯ ವಶವಾಗಿರುತ್ತಾರೆ.
ಧರ್ಮ ರಕ್ಷಣೆಯ ಕಾರ್ಯ ವೀರ ರಸದ ಮೂಲಕ, ಭೀಬತ್ಸರಸದ ಮೂಲಕ ಆಗುವುದಿದೆ. ಆದರೆ ಲಲಿತೋಪಾಖ್ಯಾನದಲ್ಲಿ ಶೃಂಗಾರರೂಪವನ್ನು ಲಲಿತಾ ತ್ರಿಪುರಸುಂದರಿ ತಾಳುತ್ತಾಳೆ. ಸೃಷ್ಟಿಯ ಎಲ್ಲ ಅಲಂಕಾರಗಳಿಂದ ಭೂಷಿತಳಾದ ಶ್ರೀಮಾತೆ ಯುದ್ಧಭೂಮಿಗೆ ಬಂದು ಅನ್ಯಾಯದ ವಿರುದ್ಧ ಮೋಹಾಸ್ತ್ರದಿಂದ ಹೋರಾಡಿದಳು. ಸುಕೋಮಲ ರೂಪದ ಮೋಹಿನಿಯ ಆಗಮನವಾಗುತ್ತಿದ್ದಂತೆ ದೇವದಾನವರ ಯುದ್ಧ ನಿಂತಿತು ಎಂದು ಹೇಳಿದರು.


ರಾಕ್ಷಸರತ್ತ ತಿರುಗಿ ಮುಗುಳು ನಗೆ ಬೀರುತ್ತಿದ್ದಂತೆ ಇಡೀ ರಾಕ್ಷಸರು ಆಕೆಯ ವಶವಾಗುತ್ತಾರೆ. ಮೋಹದ ಪ್ರಭಾವ ಅಂಥದ್ದು. ಶಕ್ತಿಶಾಲಿ ಅಸ್ತ್ರ ಅದು. ಜಗದಂಬೆ, ತ್ರಿಪುರಸುಂದರಿಯ ವಶವಾದ ರಾಕ್ಷಸರು ಅಮೃತಕಶಲವನ್ನು ಮೋಹಿನಿಗೆ ತಂದೊಪ್ಪಿಸುತ್ತಾರೆ. ಜಗನ್ಮಾತೆಯ ಆದೇಶದಂತೆ ರಾಕ್ಷಸರು ಮತ್ತು ದೇವತೆಗಳು ಎರಡು ಪಂಕ್ತಿಗಳಾಗಿ ಕುಳಿತು ಅಮೃತ ಸ್ವಾದಕ್ಕೆ ಮುಂದಾಗುತ್ತಾರೆ. ಮೋಹದ ಮಾಯೆಯಿಂದಾಗಿ ಅಮೃತವನ್ನು ದೇವತೆಗಳಿಗೆ ಬಡಿಸಿದಾಗಲೂ, ರಾಕ್ಷಸರು ಸುಮ್ಮನಿರುತ್ತಾರೆ. ಆಕೆಯ ಕೈಗಳ ಝಣ ಝಣ ಸದ್ದಿನಿಂದಲೇ ರಾಕ್ಷಸರು ಮೋಹಪರವಶರಾಗುತ್ತಾರೆ. ದೃಶಂತಿ ಎಂಬ ಒಬ್ಬ ಮಾತ್ರ ದೇವತೆಗಳ ರೂಪದಲ್ಲಿ ದೇವರ ಸಾಲಿನಲ್ಲಿ ಕುಳಿತುಕೊಳ್ಳುತ್ತಾನೆ. ಇತರ ಯಾವ ರಾಕ್ಷಸರಿಗೂ ಅಮೃತ ಲಭಿಸಬಾರದು ಎನ್ನುವ ಸ್ವಾರ್ಥ ಆತನಲ್ಲಿರುತ್ತದೆ. ಆತ ಅಮೃತವನ್ನು ಸವಿಯಲು ಮುಂದಾಗುತ್ತಿದ್ದಂತೆಯೇ ಅದೇ ಸೌಟಿನಿಂದಲೇ ಆತನ ಶಿರಚ್ಛೇದ ಮಾಡುತ್ತಾಳೆ. ಅಮೃತ ಆತನ ಶಿರಸ್ಸಿನ ಭಾಗ ತಲುಪಿದ್ದರಿಂದ ಆತ ರಾಹುವಾಗಿ, ಗ್ರಹವಾಗಿ ಮಾರ್ಪಡುತ್ತಾನೆ ಎಂದು ಬಣ್ಣಿಸಿದರು.
ದೊಡ್ಡ ಕೆಡುಕು ಸಮಾಜಕ್ಕೆ ಎದುರಾದಾಗ ಅದನ್ನು ಬಗೆಹರಿಸುವ ಮಹಾನ್ ಅವತಾರದ ಉದಯವಾಗುತ್ತದೆ. ಕೆಡುಕು ಕೆಡುಕಲ್ಲ; ಇದು ದೊಡ್ಡ ಒಳಿತಿನ ಮುನ್ಸೂಚನೆ ಎಂದರು.
ಬಂಡಾಸುರನಿಗೆ ದೈತ್ಯರನ್ನು ಸೃಷ್ಟಿ ಮಾಡುವ ಶಕ್ತಿ ಇತ್ತು. ಆತನ ಇಬ್ಬರು ತಮ್ಮ ಹಾಗೂ ಒಬ್ಬಾಕೆ ತಂಗಿಯನ್ನು ಸೃಷ್ಟಿ ಮಾಡಿ ಲೋಕಕಂಟಕನಾಗುತ್ತಾನೆ. ದೇವತೆಗಳು ಭೀತಿಯಿಂದ ಅಡಗಿ ಕುಳಿತುಕೊಳ್ಳುವಂತಾಗುತ್ತದೆ. ಆತನ ಕ್ರೌರ್ಯ ಮುಗಿಲು ಮುಟ್ಟಿದ್ದಾಗ ಅಗ್ನಿಕುಂಡದಿಂದ ತ್ರಿಪುರ ಸುಂದರಿ ಮೇಲೆದ್ದು ಬಂದಳು ಎಂದು ಕಥಾ ಭಾಗವನ್ನು ಮುಕ್ತಾಯಗೊಳಿಸಿದರು.
ಉಂಡೆಮನೆ ವಿಶ್ವೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮಠದ ವಿತ್ತಾಧಿಕಾರಿ ಜೆ.ಎಲ್.ಗಣೇಶ್, ಮಾಣಿಮಠ ಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್, ಮಂಗಳೂರಿನ ಉದ್ಯಮಿ ನೆಡ್ಲೆ ರಾಮ ಭಟ್ ದಂಪತಿ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ವಿದ್ಯಾರ್ಥಿ ಪ್ರಧಾನರಾದ ಈಶ್ವರ ಪ್ರಸಾದ್ ಕನ್ಯಾನ, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮಾತೃವಿಭಾಗದ ಪ್ರಮುಖರಾದ ವೀಣಾ ಗೋಪಾಲಕೃಷ್ಣ ಪುಳು, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಈಶ್ವರ ಪ್ರಸನ್ನ ಪೆರ್ನೆಕೋಡಿ, ಕಾರ್ಯದರ್ಶಿ ಮಹೇಶ್ ಕುದುಪುಲ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು