ಇತ್ತೀಚಿನ ಸುದ್ದಿ
ಸಿಡಿಲಿಗೆ ಮೊಳಕೆಯೊಡೆಯುವ ಕಲ್ಲಣಬೆ: ಮಲೆನಾಡಿಗರಿಗೆ ಬಲು ಪ್ರಿಯ: ಸೇರಿಗೆ ಮಾತ್ರ ಸಾವಿರ!
27/06/2023, 00:09
ಕಾರ್ಕಳ(reporterkarnataka.com): ಅಣಬೆ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಅದರಲ್ಲೂ ಮಳೆಗಾಲದಲ್ಲಿ ಸಿಡಿಲಿಗೆ ಹುಟ್ಟುವ ಕಲ್ಲಣಬೆಯನ್ನು ಬೇಡ ಅನ್ನೋವವರು ಉಂಟೇ? ಇದೀಗ ಮಲೆನಾಡಿನ ತಪ್ಪಲು ಭಾಗದಲ್ಲಿ ಕಲ್ಲಣಬೆ ಸದ್ದು ಮಾಡಲಾರಂಭಿಸಿದೆ.
ಗುಡುಗಿನೊಡನೆ ಬರುವ ಮೊದಲ ಮುಂಗಾರು ಮಳೆಯ ಸಂದರ್ಭದಲ್ಲಿ ನೆಲದೊಳಗಿನಿಂದ ಕಲ್ಲಣಬೆ ಮೊಳಕೆಯೊಡೆಯುತ್ತದೆ. ಈ ಬಾರಿ ಚಂಡಮಾರುತದ ಪರಿಣಾಮ ಮುಂಗಾರು ಮಳೆ ತಡವಾಗಿ ಆರಂಭವಾಗಿದೆ. ಹಾಗೆಯೇ ಕಲ್ಲಣಬೆಗಳು ಕೂಡ ತಡವಾಗಿ ಮೊಳಕೆಯೊಡೆದಿವೆ.
ಮಲೆನಾಡಿನ ತಪ್ಪಲಿಗೆ ಅಂಟಿಕೊಂಡಿರುವ ಹಳ್ಳಿಗಳ ಜನರು ಚೂಪಾದ ಕಟ್ಟಿಗೆ , ಕತ್ತಿ ಹಾಗೂ ಚೀಲವನ್ನು ಹಿಡಿದುಕೊಂಡು ಹಳ್ಳಿಗಳಲ್ಲಿ ಪೊದೆಯ ಬದಿಗಳಲ್ಲಿ, ಜೌಗು ಮಣ್ಣಿನ ಪ್ರದೇಶಗಳಲ್ಲಿ ಕಲ್ಲಣಬೆಯನ್ನು ಹುಡುಕುವ ದೃಶ್ಯ ಸಾಮಾನ್ಯವಾಗಿದೆ. ರಜಾ ಸಮಯದಲ್ಲಿ ಮನೆಯಲ್ಲಿ ರುವ ವಿದ್ಯಾರ್ಥೀಗಳು ಕೂಡ ಅಣಬೆ ಹೆಕ್ಕುವ ಖುಷಿಯಲ್ಲಿ ಪಾಲ್ಗೊಳ್ಳುತ್ತಾರೆ.
ಕಾರ್ಕಳ ತಾಲೂಕಿನ ಎಳ್ಳಾರೆ, ಶಿರ್ಲಾಲು, ಕೆರುವಾಶೆ, ಮಿಯ್ಯಾರು, ಹೊಸ್ಮಾರು ,ಈದು, ಬಜಗೋಳಿ, ಹೆಬ್ರಿ ತಾಲೂಕಿನ ಮುನಿಯಾಲು, ಮುದ್ರಾಡಿ, ನಾಡ್ಪಾಲು ಹೆಬ್ರಿಗಳಲ್ಲಿ ಹಳ್ಳಿಯ ಜನರು ಕಾಡಿನ ಅಂಚಿನ ಭಾಗಗಳಲ್ಲಿ ಗುಂಪಾಗಿ ಸೇರಿಕೊಂಡು ಹುಡುಕುತ್ತಾ ಸಾಗುತ್ತಿರುವುದು ಕಂಡುಬರುತ್ತಿದೆ.
ದುಬಾರಿ ಈ ಕಲ್ಲಣಬೆ: ಕಳೆದ ಬಾರಿ ಕಲ್ಲಣಬೆ ಒಂದು ಸೇರಿಗೆ 800 ರಿಂದ 1000 ರೂ ಬೆಲೆಗೆ ಮಾರಾಟವಾಗುತಿತ್ತು. ಈ ಬಾರಿ ಮಳೆ ತಡವಾದ ಕಾರಣ ನಿರೀಕ್ಷಿತ ಮಟ್ಟದಲ್ಲಿ ಕಲ್ಲಣಬೆ ಸಿಗುತಿಲ್ಲ. ಆದ್ದರಿಂದ ಸೇರಿಗೆ ,1000 ದಿಂದ 1500 ರೂ ವರೆಗೆ ಮಾರಾಟವಾಗುತ್ತಿದೆ. ಉಷ್ಣತೆ ಏರುಪೇರಿನಿಂದಾಗಿ ನಿರೀಕ್ಷಿತ ವಾಗಿ ಇಳುವರಿ ಇಲ್ಲ .
ದಾಖಲೆ ಉಷ್ಣತೆ : ಕಳೆದ ಎರಡು ವರ್ಷಗಳ ಲ್ಲಿ ಬೇಸಗೆಯಲ್ಲೇ ಸಾಕಷ್ಟು ಮಳೆ ಸುರಿದಿದ್ದರಿಂದ ಮಳೆಗಾಲ ಶುರುವಾಗುವ ಮೊದಲೇ ಕಲ್ಲಣಬೆ ಮಾರುಕಟ್ಟೆ ಪ್ರವೇಶಿಸಿತ್ತು. ಆದರೆ ಈ ಬಾರಿ ಕರಾವಳಿ ಸೇರಿದಂತೆ ರಾಜ್ಯದ ವಿವಿಧೆಡೆ ಗಳಲ್ಲಿ ಭಾರಿ ಉಷ್ಣತೆ ದಾಖಲಾಗಿದೆ.ಕರಾವಳಿ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆಯೆ ಸುರಿದಿಲ್ಲ. ಭೂಮಿ ತಂಪಾದರೆ ಮಾತ್ರ ಕಲ್ಲಣಬೆಗಳು ಹುಟ್ಟುತ್ತವೆ. ಆದರೆ ಈ ಬಾರಿ ಹಾಗಾಗಿಲ್ಲ.
ಮುಂಗಡ: ಗ್ರಾಮೀಣ ಪ್ರದೇಶಗಳಲ್ಲಿ ಕಲ್ಲಣಬೆ ರುಚಿಯನ್ನು ಸವಿದಿರುವ ಜನರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತಿದ್ದಾರೆ , ಆದ್ದರಿಂದ ಮುಂಬಯಿ ಬೆಂಗಳೂರು ನಗರಗಳಲ್ಲಿ ವಾಸಿಸುವ ಜನರು ರೂ 2000 ನೀಡಿ ಬುಕ್ಕಿಂಗ್ ಮಾಡಲು ಸಿದ್ಧರಾಗಿದ್ದಾರೆ. ಅದರೆ ಲಭ್ಯ ತೆ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಬುಕ್ಕಿಂಗ್ ಮಾಡುವುದಿಲ್ಲ ಎಂದು ಕಾರ್ಕಳ ವ್ಯಾಪಾರಿ ಮಹವೀರ ಜೈನ್ ಹೇಳುತ್ತಾರೆ.
ಎಚ್ಚರಿಕೆ ಅಗತ್ಯ: ಬಿಳಿ ಬಣ್ಣದ ಕಲ್ಲಣಬೆಯನ್ನು ಸೇವಿಸಬಹುದು .ಅದರೆ ತಿಳಿ ಕಂದು ಬಣ್ಣದಲ್ಲಿ
ರುವ ಕಲ್ಲಣಬೆಗಳು ವಿಷಕಾರಿಯಾಗಬಹುದು ಸೇವನೆ ಮುನ್ನ ಎಚ್ಚರಿಕೆ ವಹಿಸುವುದು ಅಗತ್ಯ ವಾಗಿದೆ.