8:35 AM Sunday19 - May 2024
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ…

ಇತ್ತೀಚಿನ ಸುದ್ದಿ

ಶ್ರೀ ಹರಿಯ ಪಾದವನ್ನು ಸೇರಿದ ಪರ್ತಗಾಳೀ ಜೀವೋತ್ತಮ ಮಠದ ಶ್ರೀಪಾದರ ಪುಣ್ಯಸ್ಮರಣೆ

19/07/2021, 17:01

ಶ್ರೀಮನ್ಮಧ್ವಾಚಾರ್ಯರ ಸಿದ್ಧಾಂತವನ್ನು ಅನುಸರಿಸುತ್ತಿರುವ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರಮುಖ ಪೀಠಗಳಲ್ಲಿ ಒಂದಾದ ಶ್ರೀ ಗೋಕರ್ಣ ಪರ್ತಗಾಳೀ ಜೀವೋತ್ತಮ ಮಠವು ಶ್ರೀನಾರಾಯಣ ತೀರ್ಥರಿಂದ ಪ್ರವರ್ತಿತವಾದಂತಹ ಮಠ. ಶ್ರೀರಾಮ ಹಾಗೂ ಶ್ರೀವೀರ ವಿಠ್ಠಲ ದೇವರನ್ನು ಮಠದ ಪ್ರಧಾನ ದೇವರಾಗಿ ಪೂಜಿಸುತ್ತಾ ಬಂದಿರುವ ಶ್ರೀಜೀವೋತ್ತಮ ಮಠವನ್ನು ಶ್ರೀಜೀವೋತ್ತಮ ತೀರ್ಥರು, ಶ್ರೀ ಇಂದಿರಾಕಾಂತ ತೀರ್ಥರು, ಶ್ರೀ ದ್ವಾರಕಾನಾಥ ತೀರ್ಥರೆ ಮೊದಲಾದ ಮಹಾಯತಿಗಳು ಅಲಂಕರಿಸಿದ್ದಾರೆ. ಶ್ರೀ ವಿದ್ಯಾಧಿರಾಜ ತೀರ್ಥರು ಅಧುನಾ ಶ್ರೀ ಗೋಕರ್ಣ ಪರ್ತಗಾಳಿ ಮಠದ ಪೀಠಾಧೀಶರು.

ಶ್ರೀ ಜೀವೋತ್ತಮತೀರ್ಥರು, ಶ್ರೀ ಪೂರ್ಣಪ್ರಜ್ಞತೀರ್ಥರು, ಶ್ರೀ ಪದ್ಮನಾಭತೀರ್ಥರು, ಶ್ರೀ ಇಂದಿರಾಕಾಂತ ತೀರ್ಥರ ತರುವಾಯ ಶ್ರೀಮಠದ ಪರಂಪರೆಯಲ್ಲಿ ಐವತ್ತಕ್ಕೂ ಹೆಚ್ಚಿನ ಚಾತುರ್ಮಾಸಗಳನ್ನು ಆಚರಿಸಿರುವ ಶ್ರೀವಿದ್ಯಾಧಿರಾಜ ತೀರ್ಥರದು ಶ್ರೀಮಠದ ಪರಂಪರೆಯಲ್ಲಿ ಅತ್ಯಂತ ವಿಶಿಷ್ಟವಾದಂತಹ ಸಾಧನೆ. ಶ್ರೀಸೇನಾಪುರ ಲಕ್ಷ್ಮೀನಾರಾಯಣಾಚಾರ್ಯ ದಂಪತಿಯ ಸುಪುತ್ರರಾಗಿ ಉಡುಪಿಯ ಸಮೀಪದ ಗಂಗೊಳ್ಳಿಯಲ್ಲಿ ಜನಿಸಿದ ಶ್ರೀಗಳ ಪೂರ್ವಾಶ್ರಮದ ಹೆಸರು ಶ್ರೀರಾಘವೇಂದ್ರಾಚಾರ್ಯರು. ಶ್ರೀದ್ವಾರಕಾನಾಥ ತೀರ್ಥರಿಂದ 1967ರ ಫೆಬ್ರವರಿ 26ರಂದು ಸಂನ್ಯಾಸದೀಕ್ಷೆಯನ್ನು ಸ್ವೀಕರಿಸಿದ ಶ್ರೀರಾಘವೇಂದ್ರಾಚಾರ್ಯರು ಶ್ರೀ ವಿದ್ಯಾಧಿರಾಜತೀರ್ಥರಾದರು. 1973ರಲ್ಲಿ ಶ್ರೀದ್ವಾರಕಾನಾಥತೀರ್ಥರು ಪರಂಧಾಮವನ್ನು ಸೇರುವವರೆಗೂ ತಮ್ಮಗುರುಗಳ ಬಳಿಯಲ್ಲಿ ಅಧ್ಯಯನ ನಡೆಸಿದ ಶ್ರೀವಿದ್ಯಾಧಿರಾಜರು 1973ರ ಏಪ್ರಿಲ್ 5ರಂದು ಶ್ರೀಮಠದ ಅಧಿಕಾರವನ್ನು ಸ್ವೀಕರಿಸಿದರು. ಪೀಠಾರೋಹಣದ ನಂತರ ಶಾಖಾಮಠಗಳ ಜೀರ್ಣೋದ್ಧಾರ, ದೇಗುಲಗಳ ನಿರ್ಮಾಣ, ಮೂಲಮಠದ ನವೀಕರಣ, ದಾಮೋದರ ಕುಂಡವೂ ಸೇರಿದಂತೆ ಅನೇಕ ಹಿಮಾಲಯದ ದುರ್ಗಮ ಪ್ರದೇಶಗಳ ಸಂದರ್ಶನ, ಗಂಗೋತ್ರಿಯಿಂದ ಗಂಗಾಸಾಗರ ಸಂಗಮದವರೆಗಿನ ಯಾತ್ರೆ, ಗಂಡಕೀ ಯಾತ್ರೆಯೂ ಸೇರಿದಂತೆ ಅಷ್ಟೋತ್ಕೃಷ್ಟ ವೈಷ್ಣವಕ್ಷೇತ್ರ ಸಂದರ್ಶನ (ಪಾದಯಾತ್ರೆಯಲ್ಲಿ) ಯಜ್ಞ, ಕೋಟಿ ಶ್ರೀರಾಮನಾಮ ಯಜ್ಞ, ಶತಕೋಟಿ ರಾಮನಾಮ ಯಜ್ಞ,ಮಹಾವಿಷ್ಣುಯಾಗ ಮೊದಲಾದ ಯಾಗಗಳ ನೇತೃತ್ವ, ಅಯೋಧ್ಯ, ಮಥುರಾ, ಕಂಚಿ ಮೊದಲಾದ ಸಪ್ತ ಮೋಕ್ಷದಾಯಕ ಕ್ಷೇತ್ರಗಳ ಸಂದರ್ಶನ, ಬದರೀಕ್ಷೇತ್ರದಲ್ಲಿ ಚಾತುರ್ಮಾಸ ಹೀಗೆ ಹಲವು ಹತ್ತು ವೈಷ್ಣವಕಾರ್ಯಗಳಲ್ಲಿ ಸದಾ ತತ್ಪರರಾದ ಶ್ರೀಸ್ವಾಮಿಗಳು ಆಸೇತು ಹಿಮಾಲಯ (ನೇಪಾಳ ದೇಶವೂ ಸೇರಿದಂತೆ) ಭಾರತವನ್ನು ಸಂಚರಿಸಿರುವ ಶ್ರೀಗಳು 4-7-1998ರಲ್ಲಿ ಉಡುಪಿಯ ಸಮೀಪದ ಕಲ್ಯಾಣಪುರದಲ್ಲಿ ಮಾಧ್ವ ತತ್ತ್ವಜ್ಞಾನದ ಮೇರುಕೃತಿ ಶ್ರೀಜಯತೀರ್ಥರ ‘ಶ್ರೀಮನ್ನ್ಯಾಯಸುಧಾ’ಮಂಗಳ ಮಹೋತ್ಸವವನ್ನು ನೆರವೇರಿಸಿದರು. ಪಲಿಮಾರು, ಭಂಡಾರಕೇರಿ ಮಠಾಧೀಶರಾದ, ಮಾಧ್ವ ತತ್ತ್ವಜ್ಞಾನದ ಮಹಾವಿದ್ವಾಂಸರಾದ ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದಂಗಳವರು ಈ ಮಂಗಳಮಹೋತ್ಸವದಲ್ಲಿ ಭಾಗವಹಿಸಿದ್ದರು. ಸಂಸ್ಕೃತಭಾಷೆಯಲ್ಲಿ ಅದ್ವಿತೀಯ ಪಾಂಡಿತ್ಯವನ್ನು ಹೊಂದಿರುವ ಶ್ರೀಗಳು ಮಾಧ್ವ ತತ್ತ್ವಜ್ಞಾನದ ಬಹುತೇಕ ಎಲ್ಲಾ ಮಹತ್ತ್ವದ ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡಿರುವುದರೊಂದಿಗೆ ಸಂಸ್ಕೃತ ಕಾವ್ಯಗಳಾದ ಕುಮಾರಸಂಭವ, ಕೀರಾತಾರ್ಜುನೀಯ, ರಘುವಂಶ ಮೊದಲಾದವುಗಳ ಬಗ್ಗೆ ಸಹಾ ಅಸಾಧಾರಣವೈದುಷ್ಯವನ್ನು ಹೊಂದಿದ್ದಾರೆ. ಜ್ಯೋತಿಷ್ಯ,ಧರ್ಮಶಾಸ್ತ್ರ, ಆಗಮಶಾಸ್ತ್ರಗಳಲ್ಲಿಯೂ ಶ್ರೀಗಳ ಪಾಂಡಿತ್ಯ ಅಪೂರ್ವವಾದದ್ದು. ಬಹುತೇಕ ಮಾಧ್ವಮಠಾಧೀಶರೊಂದಿಗೆ ಅತ್ಯಂತ ಸೌಹಾರ್ದಸಂಬಂಧವನ್ನು ಹೊಂದಿರುವ ಶ್ರೀಗಳು ಶ್ರೀಜೀವೋತ್ತಮ ಮಠದ ಹಿಂದಿನ ಸ್ವಾಮಿಗಳ ಬಗ್ಗೆ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಹಳೆಯ ದಾಖಲೆಗಳ, ಗ್ರಂಥಗಳ ಸಂರಕ್ಷಣೆಯಲ್ಲಿ ಸ್ವಾಮಿಗಳಿಗೆ ವಿಶೇಷವಾದಂತಹ ಆಸಕ್ತಿ. 2017ರಲ್ಲಿ ಶ್ರೀಉದಯ ಭಟ್ ಶರ್ಮ ಎಂಬ ವಟುವಿಗೆ ಶ್ರೀವಿದ್ಯಾಧೀಶತೀರ್ಥರೆಂಬ ಆಶ್ರಮನಾಮದೊಂದಿಗೆ ಸಂನ್ಯಾಸ ದೀಕ್ಷೆ ನೀಡಿ ತಮ್ಮ ಉತ್ತರಾಧಿಕಾರಿಗಳಾಗಿ ನೇಮಿಸಿ ಮಾರ್ಗದರ್ಶನ ಮಾಡುತ್ತಿರುವ ಶ್ರೀಗಳು ಸಮಗ್ರಸಮಾಜದ ಒಂದು ಬಹುದೊಡ್ಡ ಆಸ್ತಿಯೆಂದರೆ ಅತಿಶಯೋಕ್ತಿಯಲ್ಲ.

(‘ಸಾರಸ್ವತ ಸಾನ್ನಿಧ್ಯ’ ಲೇಖನ ಮಾಲಿಕೆಯ ಅರವತ್ತಾರನೆಯ ಲೇಖನ )

– ಡಾ.ಬಿ.ಎನ್. ವೇಣುಗೋಪಾಲ

ಇತ್ತೀಚಿನ ಸುದ್ದಿ

ಜಾಹೀರಾತು