ಇತ್ತೀಚಿನ ಸುದ್ದಿ
ಮಾಣಿ: ಬಾಲವಿಕಾಸ ಅಂಗ್ಲ ಮಾಧ್ಯಮ ಶಾಲೆ ಕಚೇರಿ ಉದ್ಘಾಟನೆ; ವೆಲ್ ಕಮ್ ಡೇ ಕಾರ್ಯಕ್ರಮ
03/06/2023, 12:06
ವಿಟ್ಲ(reporterkarnataka.com): ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿದ ಖ್ಯಾತಿ ಬಾಲವಿಕಾಸದ್ದಾಗಿದೆ. ಗ್ರಾಮೀಣ ಮಟ್ಟದಲ್ಲಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆಯ ಕೆಲಸ ಶ್ಲಾಘನೀಯವಾಗಿದೆ ಎಂದು ಮಂಗಳೂರಿನ ಶಕ್ತಿ ಎಜ್ಯುಜೇಶನಲ್ ಟ್ರಸ್ಟ್ ನ ಸ್ಥಾಪಕರಾದ ಡಾ.ಕೆ.ಸಿ.ನಾಯ್ಕ್ ರವರು ಹೇಳಿದರು.
ಅವರು ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಮಾಣಿ ಸಮೀಪದ ವಿದ್ಯಾನಗರ ಪಾಳ್ಯದಲ್ಲಿ ವಿಸ್ತೃತ ಕಟ್ಟಡದಲ್ಲಿ ಆರಂಭಗೊಂಡ ಬಾಲವಿಕಾಸ ಅಂಗ್ಲ ಮಾಧ್ಯಮ ಶಾಲೆಯ ಕಚೇರಿಯನ್ನು ಉದ್ಘಾಟಿಸಿ ಬಳಿಕ ದಿ. ಪಾಳ್ಯ ಅನಂತರಾಮ ರೈ ವೇದಿಕೆಯಲ್ಲಿ ನಡೆದ ವೆಲ್ ಕಮ್ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಒಂದು ಕಾರ್ಯಕ್ರಮ ಅತ್ಯುತ್ತಮ ವಾಗಿ ಮೂಡಿಬಂದಿದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ – ಸಂಸ್ಕಾರ ನೀಡುವ ಕೆಲಸವಾಗಬೇಕು. ನನಗೆ ತುಂಬಾ ಸಂತಸವಾಗಿದೆ. ಮಕ್ಕಳನ್ನು ದೇಶದ ಸಂಪತ್ತನ್ಮಾಗಿ ಮಾಡುವ ಕೆಲಸ ಪೋಷಕರಿಂದಾಗಲಿ. ಶಿಕ್ಷಣ ಸಂಸ್ಥೆಗಳು ಬೆಳವಣಿಗೆಯಾದಾಗ ಶೈಕ್ಷಣಿಕ ಪ್ರಗತಿಯಾಗುತ್ತದೆ. ಮಕ್ಕಳು ದೇಶದ ಸಂಪತ್ತಾಗಿ ಬೆಳೆಯಲಿ ಎಂದು ಹಾರೈಸಿದರು.
ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷ ಪ್ರಹ್ಲಾದ ಜೆ. ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷ ತೆವಹಿಸಿ ಮಾತನಾಡಿ ಅಂದು 13 ಮಕ್ಕಳೊಂದಿಗೆ ಪ್ರಾರಂಭಿಸಿದ ಸಂಸ್ಥೆ ಇಂದು ಈ ಹಂತಕ್ಕೆ ಬೆಳೆದು ನಿಂತಿದೆ. ಮಕ್ಕಳ ಪೋಷಕರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸವೇ ನಮ್ಮಈ ಬೆಳವಣಿಗೆಗೆ ಪೂರಕ. ನಾವು ಇಟ್ಟಿರುವ ನಂಬಿಕೆ ನಮ್ಮನ್ನು ಬೆಳೆಸಿದೆ. ನಾವು ನಮ್ಮ ಮಕ್ಕಳಿಗೆ ಆಸ್ತಿ ಮಾಡಲು ಹೋಗಬೇಡಿ ಅವರನ್ನೇ ಆಸ್ತಿಯನ್ನಾಗಿ ಮಾಡಿ. ನಮ್ಮ ಅನುಭವದ ಅಭಿವೃದ್ಧಿ ಈ ಕ್ಯಾಂಪಸ್ ನಲ್ಲಿ ಆಗಿದೆ. ಯಶಸ್ವಿ ಉದ್ಯಮಿಗಳ ಪೈಕಿ ಕೆಸಿ ನಾಯ್ಕ್ ಕೂಡ ಒಬ್ಬರು. ಉಧ್ಯಮಿ ಯಾಗಿ ಬೆಳೆದ ಅವರು ದೇವಸ್ಥಾನ ಕಟ್ಟಿದರು. ಇಳಿ ವಯಸ್ಸಿನಲ್ಲಿ ಶಾಲೆಯನ್ನು ಆರಂಬಿಸಿದರು. ಈ ನಿಟ್ಟಿನಲ್ಲಿ ಅವರನ್ನು ಅತಿಥಿಯನ್ನಾಗಿ ನಾವು ಆಹ್ವಾನಿಸಿದ್ದೇವೆ.
ಶಾಲೆ ವಾತಾವರಣ ಮಕ್ಕಳ ಕಲಿಕೆಗೆ ಪೂರಕವಾಗಿರಬೇಕು. ವ್ಯವಸ್ಥೆ ಅನ್ನುವ ಶಬ್ದಕ್ಕೆ ಬಹಳಷ್ಟು ಅರ್ಥವಿದೆ. ಮಕ್ಕಳಿಗೆ ವಿದ್ಯೆಯೇ ಆಸ್ತಿ, ಅವರನ್ನು ಸತ್ಪ್ರಜೆಗಳನ್ನಾಗಿಸುವುದು ನಮ್ಮ ಧ್ಯೇಯವಾಗಿದೆ. ಪೋಷಕರು ಶಾಲೆಯ ಮೇಲೆ ಇಟ್ಟಿರುವ ಅಭಿಮಾನಕ್ಕೆ ನಾನು ಸದಾ ರುಣಿಯಾಗಿದ್ದೇನೆ. ಇನ್ನು ಮುಂದೆಯೂ ತಮ್ಮೆಲ್ಲರ ಸಹಕಾರ ಇರಲಿ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪುತ್ತೂರು
ವಿವೇಕಾನಂದ ಪಾಲಿಟೆಕ್ನಿಕ್ ನ ವಿಶ್ರಾಂತ ಪ್ರಾಂಶುಪಾಲ ಗೋಪಿನಾಥ್ ಶೆಟ್ಟಿ ಎಂ. ಅವರು ಶಾಲಾ ಲಿಫ್ಟ್ ಅನ್ನು ಉದ್ಘಾಟಿಸಿ ಮಾತನಾಡಿ ನಮ್ಮ ಪಯಣದ ಆರಂಭವನ್ನು ನೆನಪಿನಲ್ಲಿಟ್ಟು ಕೊಳ್ಳುವ ಕೆಲಸವಾಗಬೇಕು. ಮನಮುಟ್ಟುವ ಕಾರ್ಯಕ್ರಮದ ಆಯೋಜನೆ ಇಂದಿಲ್ಲಿ ನಡೆದಿದೆ. ಹೊಸತನಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ನಮ್ಮಲ್ಲಿದೆ. ಪುತ್ತೂರು ಆಸು ಪಾಸಿನಲ್ಲಿರುವ ಶಾಲೆಗಳ ಪೈಕಿ ಇದು ಬಹಳಷ್ಟು ಸುಂದರವಾಗಿದೆ, ವ್ಯವಸ್ಥಿತವಾಗಿದೆ. ಈಗಿನ ಕಾಲಘಟ್ಟಕ್ಕೆ ತಕ್ಕುದಾದ ವ್ಯವಸ್ಥೆ ಈ ಕ್ಯಾಂಪಸ್ ನಲ್ಲಿದೆ.ಹಳ್ಳಿಯಲ್ಲಿ ವಿವಿಧ ಸೌಲಭ್ಯ ಹಾಗೂ ಅದ್ಧೂರಿತನವನ್ನು ಮೈಗೂಡಿಸಿಕೊಂಡು ಉತ್ತಮ ಒಳಾಂಗಣ ವ್ಯವಸ್ಥೆಯನ್ನು ಹೊಂದಿರುವ ಕಟ್ಟಡದಲ್ಲಿ ಇಂದು ವಿದ್ಯಾಭ್ಯಾಸ ಮಾಡುತ್ತಿರುವುದು ಶ್ಲಾಘನೀಯ ಸಿಂಪಲ್ ಇಂದು ವರ್ಕೌಟ್ ಆಗುವುದಿಲ್ಲ. ಸ್ಟ್ಯಾಂಡರ್ಡ್ ಮೈಂಟೈನ್ ಮಾಡುವ ಕೆಲಸವಾಗಬೇಕು ಎಂದರು.
ಮಾಣಿ ಗ್ರಾಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ ರವರು ಮಾತನಾಡಿ ಸಂಸ್ಥೆಗೆ ಹಾಗೂ ನನಗೆ ಅವಿನಾಭಾವ ಸಂಬಂಧವಿದೆ. ಪಾಠ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳ ಮೂಲಕ ಸಂಸ್ಥೆ ಜಿಲ್ಲೆ, ರಾಜ್ಯ ಮಟ್ಟದಲ್ಲಿ ಗುರುತಿಸುವಂತಾಗಿದೆ. ಟೀಕೆ ಟಿಪ್ಪಣಿಗಳನ್ನು ಸವಾಲಾಗಿ ತೆಗೆದುಕೊಂಡು ಮುಂದುವರಿಯುವುದೇ ಸಂಸ್ಥೆಯ ಬೆಳೆವಣಿಗೆಗೆ ಪೂರಕ. ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡುವಲ್ಲಿ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂದರು.
ಶಾಲಾ ಆಡಳಿತಾಧಿಕಾರಿ ರವೀಂದ್ರ ಎ. ದರ್ಬೆರವರು ಮಾತನಾಡಿ ಇದೊಂದು ವಿಶಿಷ್ಟ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮವಾಗಿದೆ. ಸಂಸ್ಥೆ ೩೪ನೇ ವರ್ಷದ ಸಂಭ್ರಮದಲ್ಲಿದೆ. ಸಂಸ್ಥೆಯ ಈ ಒಂದು ಬೆಳವಣಿಗೆಯಲ್ಲಿ ಹಲವರ ಪರಿಶ್ರಮವಿದೆ, ತ್ಯಾಗಪೂರ್ಣ ಸೇವೆಯಿದೆ. ಮೂಲಕಲ್ಪನೆ ಯನ್ನು ಜಾಗೃತ ಮಾಡುವ ನಿಟ್ಟಿನಲ್ಲಿ ನಾವು ಮೆರವಣಿಗೆಯನ್ನು ಮಾಡಿದ್ದೇವೆ. ಸಂಸ್ಥೆ ಟಾಕ್ & ಚಾಕ್ ಸಿಸ್ಟಮ್ ನಿಂದ ಸ್ವಾಪ್ಟ್ ಡಿಜಿಟಲ್ ನತ್ತ ಸಾಗಿದೆ. ಕಲಿಕೆಯನ್ನು ಪರಿಣಾಮವಾಗಿಸುವ ಪ್ರಯತ್ನ ನಮ್ಮದಾಗಿದೆ. ಗುಣಮಟ್ಟದ ಬೌತಿಕ ಸಂಪತ್ತು ನಮ್ಮ ಶಾಲಾ ಪರಿಸರದಲ್ಲಿದೆ. ನಮ್ಮ ಕಲ್ಪನೆಗೆ ಮೀರಿದ ವ್ಯವಸ್ಥೆ ಸಂಸ್ಥೆಯಲ್ಲಿದೆ. ಹೊಸ ಕಲ್ಪನೆ ಹೊಸ ಆಯಾಮದಲ್ಲಿ ಸಂಸ್ಥೆ ತೆರೆದುಕೊಂಡಿದೆ. ನಮ್ಮ ಹೊಸತನಕೆ ಇಂದು ಆದಿಯಾಗಿದೆ ಎಂದು ಹೇಳಿ ಸಂಸ್ಥೆ ನಡೆದು ಬಂದ ಹಾದಿಯ ಬಗ್ಗೆತಿಳಿಸಿದರು.
ಬಾಲವಿಕಾಸ ಟ್ರಸ್ಟ್ ನ ಉಪಾಧ್ಯಕ್ಷರಾದ ಯತಿರಾಜ್ ಕೆ. ಎಲ್., ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ., ಟ್ರಸ್ಟಿ ಸುಭಾಶಿಣಿ ಎ. ಶೆಟ್ಟಿ, , ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ ಪಿ.ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ವಿವಿಧ ಕಡೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ.ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿ ಶೋಭಾ ಎಂ.ಶೆಟ್ಟಿ ವಂದಿಸಿದರು.
ಶಿಕ್ಷಕಿಯರಾದ ಜಯಶ್ರೀ ಆಚಾರ್ಯ ಮತ್ತು ಸುಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ಮಾಣಿ ಬಾಲವಿಕಾಸ ಅಂಗ್ಲ ಮಾಧ್ಯಮ ಶಾಲೆಯ ಹಳೆ ಕಟ್ಟಡದ ಬಳಿಯಿಂದ ಹೊಸ ಕಟ್ಟಡದವರೆಗೆ ಮೆರವಣಿಗೆ ನಡೆಯಿತು. ಮಾಣಿ ಗ್ರಾ.ಪಂ.ಅಧ್ಯಕ್ಷ ಕೊಡಾಜೆ ಬಾಲಕೃಷ್ಣ ಆಳ್ವ ಅವರು ಪೆರಾಜೆ ಗ್ರಾ.ಪಂ.ಉಪಾಧ್ಯಕ್ಷರಾದ ಎಸ್.ಉಮ್ಮಾರ್ ರವರಿಗೆ ಶಾಲೆಯ ಲಾಂಛನ, ಧ್ವಜ ಹಾಗೂ ಭಾವಚಿತ್ರವನ್ನು ಹಸ್ತಾಂತರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಕಲ್ಲಡ್ಕದ ಗೊಂಬೆಗಳ ಕುಣಿತ, ಯಕ್ಷಗಾನ ವೇಷಧಾರಿಗಳು , ಸ್ಕೌಟ್ಸ್ ವಿದ್ಯಾರ್ಥಿಗಳು ಗಮನ ಸೆಳೆದರು.
ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷರಾದ ಪ್ರಹ್ಲಾದ ಜೆ. ಶೆಟ್ಟಿ ಮಂಗಳೂರಿನ ಶಕ್ತಿ ಎಜ್ಯುಜೇಶನಲ್ ಟ್ರಸ್ಟ್ ನ ಸ್ಥಾಪಕರಾದ ಡಾ.ಕೆ.ಸಿ.ನಾಯ್ಕ್, ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ನ ವಿಶ್ರಾಂತ ಪ್ರಾಂಶುಪಾಲ ಗೋಪಿನಾಥ್ ಶೆಟ್ಟಿ ಎಂ., ಟ್ರಸ್ಟ್ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ.,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ ಪಿ.ಶೆಟ್ಟಿ, ಆಡಳಿತಾಧಿಕಾರಿ ರವೀಂದ್ರ ದರ್ಬೆ, ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ಶೆಟ್ಟಿ ಉಪಸ್ಥಿತರಿದ್ದರು.