ಇತ್ತೀಚಿನ ಸುದ್ದಿ
50 ಹುದ್ದೆಯ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ಸಿಗದಿದ್ದಲ್ಲಿ ಎಂಆರ್ ಪಿಎಲ್ ಗೆ ಮುತ್ತಿಗೆ: ಬಿ.ಕೆ. ಇಮ್ತಿಯಾಜ್ ಎಚ್ಚರಿಕೆ
01/06/2023, 15:05
ಮಂಗಳೂರು(reporterkarnataka.com):ಕೇಂದ್ರ ಸರಕಾರದ ಅದೀನದಲ್ಲಿರುವ ಸಾರ್ವಜನಿಕ ಉದ್ದಿಮೆ ಎಂಆರ್ ಪಿಎಲ್ ನಲ್ಲಿ 50 ಉದ್ಯೋಗದ ನೇಮಕಾತಿಗೆ ರಾಷ್ಟ ಮಟ್ಟದಲ್ಲಿ ಅರ್ಜಿ ಆಹ್ವಾನಿಸಿದರಲ್ಲಿ ಈ ಬಾರಿಯೂ ಸ್ಥಳೀಯರಿಗೆ ಆದ್ಯತೆ ನೀಡದೆ ವಂಚಿಸುವ ಹುನ್ನಾರ ಅಡಗಿದೆ. ಕಳೆದ 234 ಹುದ್ದೆಯ ನೇಮಕಾತಿಯಲ್ಲಿ ವಂಚಿಸಿದಂತೆ ಈ ಬಾರಿಯ 50 ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ಸಿಗದಿದ್ದಲ್ಲಿ ಡಿವೈಎಫ್ಐ ಸಂಘಟನೆಯು ಎಂಆರ್ ಪಿಎಲ್ ಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಿದ್ದೇವೆ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಹೇಳಿದರು.
ತುಳುನಾಡಿನ ಅಭಿವೃದ್ಧಿಯಲ್ಲಿ ತುಳುನಾಡಿನ ಯುವಜನತೆಗೆ ದೊಡ್ಡ ಪಾಲು, ಎಂಆರ್ ಪಿಎಲ್ ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ಒದಗಿಸಿ ನೇಮಕಾತಿ ಪ್ರಕ್ರಿಯೆ ನಡೆಸಲು ಒತ್ತಾಯಿಸಿ, ಸರೋಜಿನಿ ಮಹಿಷಿ ವರದಿಯ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಲು ಆಗ್ರಹಿಸಿ ನಗರದ ಕ್ಲಾಕ್ ಟವರ್ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಎರಡು ವರುಷದ ಹಿಂದೆ ಇಂತಹದೇ 234 ಹುದ್ದೆಯ ನೇಮಕಾತಿಯಲ್ಲಿ ತುಳುನಾಡಿನ ಯುವಜನತೆಗಾದ ಅನ್ಯಾಯ ಪ್ರಶ್ನಿಸಿ ನಡೆಸಿದ ಪ್ರತಿಭಟನೆಯ ಬಿಸಿಗೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರುಗಳಾದ ಉಮಾನಾಥ ಕೋಟ್ಯಾನ್, ಡಾ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಕಂಪೆನಿಯ ಆಡಳಿತದ ಪ್ರಮುಖರೊಂದಿಗೆ ಮಾತುಕತೆ ನಡೆಸಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ರದ್ದುಗೊಂಡಿದೆ, ಸ್ಥಳೀಯ ಯುವಜನರಿಗೆ ಆದ್ಯತೆ ನೀಡಿ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂಬ ನಾಟಕವಾಡಿದ್ದರು. ಆದರೆ ಈ ಬಾರಿ ಅಂತಹ ಮಹಾ ಸುಳ್ಳುಗಾರರ ನಾಟಕಗಳಿಗೆ ಮಣೆಹಾಕದೆ ಸ್ಥಳೀಯರಿಗೆ ಆದ್ಯತೆಯ ಪ್ರಶ್ನೆ ಇತ್ಯರ್ಥ ಆದ ನಂತರವೇ ನೇಮಕಾತಿ ಪ್ರಕ್ರಿಯೆ ನಡೆಸುವಂತಾಗಬೇಕು ಮಾತ್ರವಲ್ಲ ಸರೋಜಿನಿ ಮಹಿಷಿ ವರದಿಯ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಸಬೇಕೆಂದು ಒತ್ತಾಯಿಸಿದರು.
ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಮಾತನಾಡಿ ಎಂಆರ್ ಪಿಎಲ್ ನ ಉದ್ಯೋಗಕ್ಕೆ ಸಂಬಂಧಪಟ್ಟು ಈ ಹಿಂದೆ ಸಂಸದ ನಳಿನ್ ಕಟೀಲ್ ಗಾಗಲಿ ಅಥವಾ ಸ್ಥಳೀಯ ಶಾಸಕರುಗಳಾದ ವೇದವ್ಯಾಸ ಕಾಮತ್ , ಭರತ್ ಶೆಟ್ಟಿ ಗೆ ಆಗಲಿ ತಾವು ನೀಡಿದ ಭರವಸೆಯ ಮಾತುಗಳನ್ನು ಉಳಿಸುವಷ್ಟು ಯೋಗ್ಯತೆ ಇಲ್ಲದೆ ಈಗ ರಾಜ್ಯ ಸರಕಾದ ಗ್ಯಾರಂಟಿ ಯೋಜನೆಗಳನ್ನು ಪ್ರಶ್ನಿಸಲು ಮುಂದಾಗಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರಲು ನೀಡಿದ ಎರಡು ಕೋಟಿ ಉದ್ಯೋಗದ ಭರವಸೆ, ಪ್ರತೀ ಖಾತೆಗೆ 15 ಲಕ್ಷದ ಭರವಸೆಗಳೆಲ್ಲಾ ಏನಾಗಿದೆ ಎಂದು ಬಿಜೆಪಿ ಶಾಸಕರುಗಳು ಉತ್ತರಿಸಬೇಕು. ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ ವರದಿ ಪ್ರಕಾರ ಭಾರತದಲ್ಲಿ ಪ್ರತೀ ಗಂಟೆಗೆ ಒಬ್ಬ ನಿರುದ್ಯೋಗಿ ಆತ್ಮಹತ್ಯೆಗೆ ಒಳಗಾಗಿ ಪ್ರಾಣ ಕಳೆಯುವಂತಾಗಿದೆ. ಜಿಲ್ಲೆಯ ಯುವಜನತೆ ಮತೀಯ ಸಂಘರ್ಷಗಳಲ್ಲಿ ತೊಡಗಿಸಿಕೊಂಡು ಬದುಕೇ ಬೀದಿಗೆ ಬಿದ್ದಿಗೆ. ಜಿಲ್ಲೆಯಲ್ಲಿರುವ ಎಂಆರ್ ಪಿಎಲ್ ಸಹಿತ ಇತರೆ ಕೈಗಾರಿಕೆಗಳಲ್ಲಿ ತುಳುನಾಡಿನ ಯುವಜನತೆಗೆ ಎಷ್ಟು ಉದ್ಯೋಗ ದೊರಕಲು ಸಾಧ್ಯವಾಗಿದೆಯೆಂದು ಹೇಳಲು ನಿಮ್ಮಲ್ಲಿ ಉತ್ತರ ಇದೆಯೇ ಎಂದು ಬಿಜೆಪಿ ಜನಪ್ರತಿನಿಧಿಗಳನ್ನು ಪ್ರಶ್ನಿಸಿದರು. ಎಂಆರ್ ಪಿಎಲ್ ನ 50 ಹುದ್ದೆ ನೇಮಕಾತಿ ಪ್ರಕ್ರಿಯೆ ಕೂಡಲೇ ತಡೆಹಿಡಿಯಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು, ಜಿಲ್ಲಾ ಪದಾಧಿಕಾರಿಗಳಾದ ನಿತಿನ್ ಕುತ್ತಾರ್, ರಫೀಕ್ ಹರೇಕಳ, ಡಿವೈಎಫ್ಐ ನಗರ ಅಧ್ಯಕ್ಷರಾದ ಜಗದೀಶ್ ಬಜಾಲ್, ನಗರ ಕೋಶಾಧಿಕಾರಿ ತಯ್ಯೂಬ್ ಬೆಂಗರೆ, ಎ.ಬಿ ನೌಶದ್, ಪ್ರಮಿಳಾ ದೇವಾಡಿಗ, ಆಶಾ ಬೋಳೂರು, ಪ್ರಮಿಳಾ ಶಕ್ತಿನಗರ, ಅಸುಂತ ಡಿಸೋಜ, ಎಸ್ಎಫ್ಐ ಜಿಲ್ಲಾಧ್ಯಕ್ಷ ವಿನಿತ್ ದೇವಾಡಿಗ, ದೀಕ್ಷಾ ಜಲ್ಲಿಗುಡ್ಡೆ, ಪಿ.ಜಿ ರಫೀಕ್ , ಮನೋಜ್ ಉರ್ವಸ್ಟೋರ್, ಜುಬೈರ್ ಮುಂತಾದವರು ಉಪಸ್ಥಿತರಿದ್ದರು.