8:57 AM Tuesday31 - March 2026
ಬ್ರೇಕಿಂಗ್ ನ್ಯೂಸ್
ರಂಗೇರಿದ ಉಪ ಚುನಾವಣಾ ಕಣ: ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ, ವಿಜಯೇಂದ್ರ; ಕೈ, ಕಮಲ… ಕೌಟುಂಬಿಕ ಕಲಹ: ಭದ್ರಾ ಬಲದಂಡೆ ನಾಲೆ ಬ್ರಿಡ್ಜ್ ನಿಂದ ಹಾರಿ ಸೂಪರ್ ವೈಸರ್… ಗ್ಯಾಸ್ ಸಿಲಿಂಡರ್ ಗೆ ರೆಗ್ಯುಲೇಟರಿ ಅಳವಡಿಸುವಾಗ ಏಕಾಏಕಿ ಸ್ಫೋಟ: ಮನೆ ಛಿದ್ರಛಿದ್ರ; 4… ಭಕ್ತ ಸಾಗರದ ಹರ್ಷೋದ್ಗಾರದೊಂದಿಗೆ ನಡೆದ ನಂಜನಗೂಡಿನ ದೊಡ್ಡ ಜಾತ್ರೆ: ಶ್ರೀ ಗೌತಮ ಪಂಚ… ನಿಯಂತ್ರಣ ತಪ್ಪಿದ ಸರಕಾರಿ ಬಸ್: ಮಡಿಕೇರಿ ಬಸ್ ನಿಲ್ದಾಣದಲ್ಲಿ ತಪ್ಪಿದ ಭಾರಿ ದುರಂತ Madikeri | ಕೊಡಗು ಜಿಲ್ಲೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ. ಎಂ.… Kodagu | ಶನಿವಾರಸಂತೆ: ಟ್ರ್ಯಾಕ್ಟರ್ -ಕಾರು ಅಪಘಾತ; ಟ್ರ್ಯಾಕ್ಟರ್ ಚಾಲಕ ಸಾವು ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ಇಲ್ಲ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ… ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸರಕಾರಿ ಶುಶ್ರೂಷಾ ಕಾಲೇಜು 2ನೇ ಘಟಿಕೋತ್ಸವ ಕೇಂದ್ರ ಸರಕಾರವನ್ನು ಟೀಕೆ ಮಾಡುವುದರಲ್ಲೇ 3 ವರ್ಷಗಳ ಕಾಲಹರಣ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ…

ಇತ್ತೀಚಿನ ಸುದ್ದಿ

ಜಾತಿ, ಧರ್ಮದ ನಡುವೆ ವಿಷಬೀಜ ಬಿತ್ತಿ ಸುಳ್ಳು ಹಬ್ಬಿಸುವ ಬಿಜೆಪಿಗೆ ತಕ್ಕ ಪಾಠ ಕಲಿಸಿ: ರಮಾನಾಥ ರೈ

02/05/2023, 07:28

ಬಂಟ್ವಾಳ(reporterkarnataka.com): ಸಮಾಜದಲ್ಲಿ ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತಿ ದ್ವೇಷ ರಾಜಕಾರಣ ಮಾಡುವ ಬಿಜೆಪಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಕರೆ ನೀಡಿದರು.
ಅವರು ಬಿ.ಸಿ.ರೋಡ್ ಪರ್ಲಿಯಾದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು.

ಕಳೆದ ಐದು ವರ್ಷದಲ್ಲಿ ಬಂಟ್ವಾಳ ಶಾಂತವಾಗಿದೆ ಎಂದು ಬಿಜೆಪಿಗರು ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ಅವಧಿಯಲ್ಲಿ ಬಂಟ್ವಾಳದ ನೆಮ್ಮದಿ ಕೆಡಿಸಿದವರೇ ಬಿಜೆಪಿಯವರು. ನಮ್ಮ ಅವಧಿಯಲ್ಲಿ ಚುನಾವಣೆಗೂ ಆರು ತಿಂಗಳಿರುವಾಗ ಗಲಭೆಗಳ ಸಂಚು ರೂಪಿಸಿ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಿದ್ದರು. ಕೊಲೆ ಪ್ರಕರಣವೊಂದನ್ನು ಕಾಂಗ್ರೆಸ್ ನಾಯಕರ ತಲೆಗೆ ಕಟ್ಟಲು ನೋಡಿದ್ದರು. ಆದರೆ, ನಾಲ್ಕೇ ದಿನದಲ್ಲಿ ಆರೋಪಿಗಳು ಪತ್ತೆಯಾದಾಗ ಅವರು ಬಿಜೆಪಿ ಕಾರ್ಯಕರ್ತರಾಗಿದ್ದುದು ಜಗಜ್ಜಾಹೀರಾಗಿತ್ತು ಎಂದು ಅವರು ಸ್ಮರಿಸಿದರು.
ಕಳೆದ ಐದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದಿರುವ ಇವರಿಗೆ ಮಾತನಾಡಲು ವಿಷಯಗಳು ಸಿಗುತ್ತಿಲ್ಲ. ಅದಕ್ಕೆ ಮತ್ತೆ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದೆ. ನನ್ನ ನಾಮಪತ್ರ ಸಲ್ಲಿಕೆಗೆ ಮಂಜೇಶ್ವರದ ಶಾಸಕ ಆಗಮಿಸಿದ್ದಕ್ಕೆ ಬೇರೆ ಬಣ್ಣ ಕಟ್ಟಲು ನೋಡುತ್ತಿದ್ದಾರೆ. ಮಂಜೇಶ್ವರದ ಶಾಸಕ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಶಾಸಕರಾಗಿದ್ದು, ನನ್ನ ಮೇಲಿನ ಅಭಿಮಾನದಿಂದ ನಾಮಪತ್ರ ಸಲ್ಲಿಕೆಗೆ ಶುಭಕೋರಲು ಬಂದಿದ್ದರು. ಆದರೆ, ಬಿಜೆಪಿಗರು ಅದಕ್ಕೆ ಬೇರೆಯದೇ ಅರ್ಥ ಕಲ್ಪಿಸಿ, ಜನತೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಜನತೆ ಬಿಜೆಪಿಯ ಬಂಡವಾಳವನ್ನು ಅರಿತಿದ್ದು, ವಾಮಮಾರ್ಗದಿಂದ ಅಧಿಕಾರ ಹಿಡಿಯಬಹುದು ಎಂಬ ಇವರ ಕನಸು ನುಚ್ಚುನೂರಾಗಲಿದೆ ಎಂದು ರೈ ಭವಿಷ್ಯ ನುಡಿದರು.
ಬಿಜೆಪಿ ಆಡಳಿತದಲ್ಲಿ ಶೇ.40ರಷ್ಟು ಕಮಿಷನ್ ದಂಧೆ ನಡೆಯುತ್ತಿದ್ದ ಬಗ್ಗೆ ಗುತ್ತಿಗೆದಾರರು ಆಪಾದಿಸಿದ್ದುದನ್ನು ನಾವು ಕೇಳಿದ್ದೇವೆ. ಮುಖ್ಯಮಂತ್ರಿ ಕುರ್ಚಿ ಕೂಡ ಮಾರಾಟಕ್ಕಿದೆ ಎಂಬರ್ಥದಲ್ಲಿ ಸ್ವತಃ ಬಿಜೆಪಿ ಹಿರಿಯ ನಾಯಕರೇ ಆಪಾದಿಸಿದ್ದರು. ಇವತ್ತು ತಾಲೂಕು ಕಚೇರಿ ವರೆಗೂ ಭ್ರಷ್ಟಾಚಾರ ವ್ಯಾಪಿಸಿದೆ. ಕಾಂಗ್ರೆಸ್ ಆಡಳಿತದಲ್ಲಿ ಬಂಟ್ವಾಳದ ತಾಲೂಕು ಕಚೇರಿ ಭ್ರಷ್ಟಾಚಾರ ಮುಕ್ತವಾಗಿತ್ತು. ಆದರೆ, ಬಿಜೆಪಿ ಅವಧಿಯಲ್ಲಿ ಲೋಕಾಯುಕ್ತ ದಾಳಿ ನಡೆಯಿತು. ಈ ವೇಳೆ ಕಚೇರಿಯಲ್ಲಿ ಕೆಲವು ಕಡತಗಳು ನಾಪತ್ತೆಯಾಗಿದ್ದ ಬಗ್ಗೆ ಕೇಳಿಬಂದಿದ್ದವು. ಹೀಗೆ, ವಿವಿಧ ಹಂತದಲ್ಲಿ ಭ್ರಷ್ಟಾಚಾರ ಮಿತಿ ಮೀರಿರುವುದರಿಂದ ಭ್ರಷ್ಟ ಬಿಜೆಪಿಯನ್ನು ತೊಲಗಿಸಬೇಕು ಎಂದು ನ್ಯಾಯವಾದಿ, ಕೆಪಿಸಿಸಿ ಸದಸ್ಯ ಅಶ್ವನಿ ಕುಮಾರ್ ರೈ ಹೇಳಿದರು.
ರಮಾನಾಥ ರೈಯವರು ನಿಸ್ವಾರ್ಥ ಜನಸೇವಕ. ಅವರು ಸಚಿವರಾಗಿದ್ದಾಗಲೂ ಅಧಿವೇಶನವಿದ್ದರೆ ಮಾತ್ರ ಬೆಂಗಳೂರಿನಲ್ಲಿರುತ್ತಿದ್ದರು. ವಾರಾಂತ್ಯದಲ್ಲಿ ಊರಿಗೆ ಬಂದು ತಮ್ಮ ಕ್ಷೇತ್ರದ ಜನರ ನಡುವೆ ಇರುತ್ತಿದ್ದರು. ದೊಡ್ಡ ಕುಟುಂಬದ ಹಿನ್ನೆಲೆಯಿಂದ ಬಂದಿದ್ದರೂ, ಬಡವರ ಸೇವೆಗಾಗಿ ಐಶಾರಾಮಿ ಜೀವನವನ್ನು ತ್ಯಜಿಸಿದವರು. ಶಾಸಕ, ಸಚಿವನಾದರೂ ಬೆಂಗಳೂರು, ಮಂಗಳೂರು, ಬಿ.ಸಿ.ರೋಡ್ ನಲ್ಲಾಗಲೀ ಒಂದೇ ಒಂದು ಮನೆ ಕಟ್ಟಿಲ್ಲ. ತನ್ನ ಹಿರಿಯರು ನೀಡಿದ ಮನೆಯಲ್ಲಿ, ಮನೆಗೆ ಬಂದವರನ್ನೆಲ್ಲಾ ಪಕ್ಷಾತೀತವಾಗಿ, ಜಾತ್ಯತೀತವಾಗಿ ಸೇವೆ ಮಾಡಿಕೊಂಡು ಬಂದಿದ್ದಾರೆ. ಇಂತಹ ನಾಯಕನಿಗೆ ಮತ್ತೊಮ್ಮೆ ಅಧಿಕಾರ ನೀಡುವ ಮೂಲಕ ಅವರ ಕೊನೆಯ ಚುನಾವಣೆಯಲ್ಲಿ ಗೌರವಪೂರ್ಣ ಫಲಿತಾಂಶ ನೀಡುವುದು ನಮ್ಮೆಲ್ಲರ ಹೊಣೆ ಎಂದು ಅಶ್ವನಿ ಕುಮಾರ್ ರೈ ತಿಳಿಸಿದರು.

ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್. ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಬ್ಲಾಕ್ ಅಧ್ಯಕ್ಷರುಗಳಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಪ್ರಮುಖರುಗಳಾದ ಬಿ.ಎಚ್. ಖಾದರ್, ಶಾಹುಲ್ ಹಮೀದ್, ಪದ್ಮಶೇಖರ ಜೈನ್, ಲುಕ್ಮಾನ್ ಬಂಟ್ವಾಳ, ಅಬ್ಬಾಸ್ ಅಲಿ, ಚಂದ್ರಶೇಖರ ಪೂಜಾರಿ, ಪ್ರವೀಣ್ ಬಂಟ್ವಾಳ್, ಪಿ.ಎ. ರಹೀಂ, ಶಬೀರ್ ಸಿದ್ದಕಟ್ಟೆ, ಹರ್ಷಾದ್, ಚಿತ್ತರಂಜನ್ ಶೆಟ್ಟಿ, ಇಬ್ರಾಹೀಂ ಕೊಡಂಗೆ, ಫಕ್ರುದ್ದೀನ್, ಬಿ. ಮೋಹನ್, ಮಹಮ್ಮದ್ ನಂದರಬೆಟ್ಟು, ಉಮೇಶ್ ಸಪಲ್ಯ, ಬಿ.ಎಸ್. ಅಬ್ದುಲ್ ಹಮೀದ್, ಮುಹಮ್ಮದ್ ಸಾಗರ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು