ಇತ್ತೀಚಿನ ಸುದ್ದಿ
ದಿನವಿಡೀ ಕೈಕೊಟ್ಟ ಕರ್ಣಾಟಕ ಬ್ಯಾಂಕ್ ಸರ್ವರ್: ಸಿಬ್ಬಂದಿಗಳ ಪರದಾಟ; ಗ್ರಾಹಕರಿಗೆ ಪ್ರಾಣ ಸಂಕಟ
21/02/2023, 19:15
ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ದೇಶದ ಖಾಸಗಿ ರಂಗದ ಪ್ರತಿಷ್ಠಿತ ಬ್ಯಾಂಕ್ ಆದ ಕರ್ಣಾಟಕ ಬ್ಯಾಂಕ್ ನ ಸರ್ವರ್ ಸಂಬಂಧಿಸಿದ ತಾಂತ್ರಿಕ ದೋಷದಿಂದ ಲಕ್ಷಗಟ್ಟಲೆ ಗ್ರಾಹಕರು ಇಂದು ತೊಂದರೆ ಅನುಭವಿಸಬೇಕಾಯಿತು.
ಬುಧವಾರ ಬೆಳಗ್ಗಿನಿಂದಲೇ ಕರ್ಣಾಟಕ ಬ್ಯಾಂಕ್ ನ ಸರ್ವರ್ ಕೈಕೊಟ್ಟಿತು. ಗೂಗಲ್ ಪೇ ಹಾಗೂ ಇತರ ರೀತಿಯಲ್ಲಿ ಆನ್ ಲೈನ್ ಹಣ ವರ್ಗಾವಣೆ ಮಾಡುವವರಿಗೆ ‘ನಿಮ್ಮ ಬ್ಯಾಂಕಿನ ಸರ್ವರ್ ಡೌನ್ ಆಗಿದೆ’ ಎಂಬ ಸಂದೇಶ ಬರುತ್ತಿತ್ತು. ಇದರ ಜತೆಗೆ ಎಟಿಎಂನಲ್ಲಿಯೂ ನಗದು ವಿತ್ ಡ್ರಾ ಮಾಡುವಾಗಲೂ ಇದೇ ಸಮಸ್ಯೆ ಗ್ರಾಹಕರಿಗೆ ಎದುರಾಯಿತು.
ವಾಹನಗಳಿಗೆ ಪೆಟ್ರೋಲ್, ಡಿಸೇಲ್ ಹಾಕಿದವರು ಗೂಗಲ್ ಪೇ, ಫೋನ್ ಪೇ ಹಾಗೂ ಇತರ ರೀತಿಯಲ್ಲಿ ಆನ್ ಲೈನ್ ಮೂಲಕ ನಗದು ವರ್ಗಾಯಿಸಲಾಗದೆ ಪೇಚಿಗೆ ಸಿಲುಕಬೇಕಾಯಿತು. ‘ಇವತ್ತು ಹಣ ಪಾವತಿಸುತ್ತೇನೆ’ ಅಂತ ಪ್ರಾಮಿಸ್ ಮಾಡಿದವರು ಮುಜಗರಕ್ಕೊಳಗಾಗಬೇಕಾಯಿತು. ಇಎಂಐ ಕಟ್ಟುವವರು ಕೂಡ ತೊಂದರೆಗೆ ಸಿಲುಕಿದರು.
ಈ ಮಧ್ಯೆ ಕರ್ಣಾಟಕ ಬ್ಯಾಂಕ್ ಶಾಖೆಗಳಲ್ಲಿ ಇವತ್ತು ಮಾಮೂಲಿಗಿಂತ ಹೆಚ್ಚು ಗ್ರಾಹಕರಿದ್ದರು. ಆನ್ ಲೈನ್ ಟ್ರಾನ್ಸ್ ಫರ್ ಹಾಗೂ ಎಟಿಎಂ ನಂಬಿ ಚೆಕ್ ಮನೆಯಲ್ಲಿಟ್ಟು ಬಂದವರು ಸಮೀಪದ ಬ್ಯಾಂಕ್ ಶಾಖೆಗೆ ತೆರಳಿ ವಿತ್ ಡ್ರಾವಲ್ ಸ್ಲಿಪ್ ಮೂಲಕ ಕ್ಯೂ ನಿಂತು ನಗದು ಪಡೆದರು. ಆದರೆ ಕರೆಂಟ್ ಅಕೌಂಟ್ ನವರಿಗೆ ವಿತ್ ಡ್ರಾವಲ್ ಸ್ಲಿಪ್ ಮೂಲಕ ನಗದು ಪಡೆಯಲು ಸಾಧ್ಯವಾಗಲಿಲ್ಲ. ಕರೆಂಟ್ ಅಕೌಂಟ್ ಗೆ ಚೆಕ್ ನಂಬರ್ ಕಡ್ಡಾಯ ಬೇಕಾಗಿರುವುದರಿಂದ ಅವರು ಮತ್ತೆ ಮನೆ ಕಡೆ ಮುಖ ಮಾಡುವುದು ಅನಿವಾರ್ಯವಾಗಿತ್ತು. ವಿಶೇಷವೆಂದರೆ ಸಂಜೆ ವರೆಗೂ ಕರ್ಣಾಟಕ ಬ್ಯಾಂಕ್ ತಾಂತ್ರಿಕ ಸಮಸ್ಯೆ ಪರಿಹಾರವಾಗಿಲ್ಲ.