ಇತ್ತೀಚಿನ ಸುದ್ದಿ
ಕೇಂದ್ರ ಮೈದಾನದ ಪಕ್ಕ ಕುಸ್ತಿ, ಕಬಡ್ಡಿಗೆ ಎರಡು ಮಿನಿ ಕ್ರೀಡಾಂಗಣ ಅಭಿವೃದ್ಧಿ: ಶಾಸಕ ವೇದವ್ಯಾಸ ಕಾಮತ್
18/02/2023, 13:24
ಮಂಗಳೂರು(reporterkarnataka.com): ನಗರದಲ್ಲಿ ಕ್ರೀಡಾ ಚಟುವಟಿಕೆಗಳು ಮತ್ತು ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮೈದಾನದ ಪಕ್ಕದಲ್ಲಿರುವ ಕ್ರೀಡೆಗೇ ಮೀಸಲಾದ ಜಾಗದಲ್ಲಿ ಕಬಡ್ಡಿ ಮತ್ತು ಕುಸ್ತಿಯ ಅಭ್ಯಾಸಕ್ಕಾಗಿ ಎರಡು ಹೊಸ ಕ್ರೀಡಾಂಗಣಗಳನ್ನು ನಿರ್ಮಿಸಲಾಗುವುದು ಎಂದು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ತಿಳಿಸಿದರು.
ಈ ಸಂಬಂಧ ಮಹಾನಗರ ಪಾಲಿಕೆ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಶಾಸಕರು ಮಾಧ್ಯಮಗಳಿಗೆ ವಿವರ ಮಾಹಿತಿ ನೀಡಿದರು.
ಕೇಂದ್ರ ಮೈದಾನದ ಪಕ್ಕದಲ್ಲಿರುವ ಕ್ರೀಡಾ ಮೈದಾನದಲ್ಲಿ ಈ ಹಿಂದೆ ತಾತ್ಕಾಲಿಕ ಅಂಗಡಿಗಳಿಗಾಗಿ ಹಾಕಲಾದ ಫೌಂಡೇಶನ್ ಜಾಗದಲ್ಲಿ ಕಬಡ್ಡಿ ಮತ್ತು ಕುಸ್ತಿ ಅಭ್ಯಾಸದ ಕ್ರೀಡಾಂಗಣಗಳನ್ನು ನಿರ್ಮಿಸಲಾಗುತ್ತದೆ. ಕ್ರೀಡೆಗೆ ಮೀಸಲಾದ ಜಾಗವನ್ನು ಕ್ರೀಡಾ ಚಟುವಟಿಕೆಗಳಿಗೇ ಬಳಸುವ ಸಲುವಾಗಿ ಸ್ಮಾರ್ಟ್ ಸಿಟಿ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ಈ ಎರಡು ಕ್ರೀಡಾಂಗಣಗಳನ್ನು ನಿರ್ಮಿಸಲು ಯೋಜನೆ ತಯಾರಿಸಲಾಗಿದೆ. ಇದಕ್ಕಾಗಿ
ಸ್ಮಾರ್ಟ್ ಸಿಟಿ ಅಧಿಕಾರಿಗಳಾದ ಅರುಣ್ ಪ್ರಭಾ. ಮಾಜಿ ಮೇಯರ್ ದಿವಾಕರ್, ಹಾಗೂ ಕುಸ್ತಿ ಅಸೋಸಿಯೇಶನ್ ಗೌರವಾಧ್ಯಕ್ಷರಾದ ಸುರೇಶ್‌ಚಂದ್ರ ಶೆಟ್ಟಿ, ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷರಾದ ಗಿರಿಧರ್ ಶೆಟ್ಟಿ, ಪ್ರಮುಖರಾದ ರತನ್ ಶೆಟ್ಟಿ, ಪುರುಷೋತ್ತಮ್ ಪೂಜಾರಿ ಮುಂತಾದವರ ಜತೆಗೆ ಹಾಗೂ ಮನಪಾ ಅಧಿಕಾರಿ ಗಳ ವಿಶೇಷ ಸಭೆ ನಡೆಸಿ ಈ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶಾಸಕರು ತಿಳಿಸಿದರು.
ಈ ಹಿಂದೆ ಇದೇ ಜಾಗದಲ್ಲಿ ತಾತ್ಕಾಲಿಕ ಅಂಗಡಿಗಳ ನಿರ್ಮಾಣಕ್ಕೆಂದು ಸ್ಮಾರ್ಟ್ ಸಿಟಿ ವತಿಯಿಂದಲೇ ಅಡಿಪಾಯ ಹಾಕಲಾಗಿತ್ತು. ಆದರೆ ಕಾನೂನು ತೊಡಕುಗಳಿಂದ ಆ ಕೆಲಸ ಸ್ಥಗಿತಗೊಂಡಿದ್ದವು. ಇದೀಗ ತೊಡಕುಗಳನ್ನು ನಿವಾರಿಸಿ, ಆ ಜಾಗವನ್ನು ಕ್ರೀಡಾ ಚಟುವಟಿಕೆಗಳಿಗೇ ಮೀಸಲಿಡುವ ಉದ್ದೇಶದಿಂದ ಹಾಗೂ ಹಿಂದೆ ಮಾಡಿದ ಅಡಿಪಾಯದ ಕೆಲಸಗಳನ್ನು ಸದ್ಬಳಕೆ ಮಾಡುವ ಉದ್ದೇಶದಿಂದ ಅಲ್ಲಿ ಸಣ್ಣದಾಗಿ ಕಬಡ್ಡಿ ಮತ್ತು ಕುಸ್ತಿಯ ಕ್ರೀಡಾಂಗಣ ರೂಪಿಸುವ ಬಗ್ಗೆ ಚಿಂತನೆ ನಡೆಸಿ ಅದಕ್ಕೆ ಅನುಮೋದನೆ ನೀಡಲಾಗಿದೆ.
ಸದ್ಯವೇ ಇದಕ್ಕೆ ಶಿಲಾನ್ಯಾಸ ನಡೆಯಲಿದ್ದು, ಸ್ಮಾರ್ಟ್ ಸಿಟಿ ಅನುದಾನವನ್ನು ಕ್ರೀಡೆಗೆ ಉಪಯೋಗ ಮಾಡಲಾಗುವುದು. ಇದರ ಜತೆಗೆ ಉರ್ವದಲ್ಲಿ ಇಂಟರ್‍ನ್ಯಾಷನಲ್ ಕಬಡ್ಡಿ ಕ್ರೀಡಾಂಗಣ ನಿರ್ಮಿಸಲಾಗುತ್ತದೆ ಎಂದು ಶಾಸಕ ಕಾಮತ್ ತಿಳಿಸಿದರು.
ದೈನಂದಿನ ಅಭ್ಯಾಸಕ್ಕಾಗಿ ಚಿಕ್ಕದೊಂದು ಕ್ರೀಡಾಂಗಣದ ಅಗತ್ಯವಿದೆ ಎಂಬುದನ್ನು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ನವರು ಗಮನಕ್ಕೆ ತಂದಿದ್ದಾರೆ. ಆ ಬಗ್ಗೆ ಚಿಂತನೆ ನಡೆಸಿ ಇದೀಗ ಹೊಸ ಕ್ರೀಡಾಂಗಣದ ಬಗ್ಗೆ ಯೋಜನೆ ರೂಪಿಸಲಾಗಿದೆ ಎಂದು ಕಾಮತ್ ಹೇಳಿದರು.
ಸ್ಮಾರ್ಟ್ ಸಿಟಿ ಅಧಿಕಾರಿಗಳಾದ ಅರುಣ ಪ್ರಭಾ, ಮಾಜಿ ಮೇಯರ್ ದಿವಾಕರ್, ಕುಸ್ತಿ ಅಸೋಸಿಯೇಶನ್ ಗೌರವಾಧ್ಯಕ್ಷರಾದ ದಿಲ್‌ರಾಜ್ ಆಳ್ವ, ಕುಸ್ತಿ ಅಸೋಶಿಯೇಶನ್ ಅಧ್ಯಕ್ಷರಾದ ಸುರೇಶ್ಚಂದ್ರ ಶೆಟ್ಟಿ, ಅಮೆಚ್ಯೂರ್ ಕಬಡ್ಡಿ ಅಸೋಸಿಯೇಶನ್‌ನ ಅಧ್ಯಕ್ಷ ಗಿರಿಧರ್ ಶೆಟ್ಟಿ, ಪ್ರಮುಖರಾದ ರತನ್ ಶೆಟ್ಟಿ, ಪುರುಷೋತ್ತಮ್ ಪೂಜಾರಿ, ಮೋನಪ್ಪ ಕುಳಾಯಿ, ಮನಪಾ ಅಧಿಕಾರಿ ಅಕ್ಷತ್, ರವೀಂದ್ರ, ಮನಪಾ ಸರ್ವೇಯರ್ ಮಹಾಲಿಂಗ, ಉದಯ್ ಶೆಟ್ಟಿ ಅವರು ಸಭೆಯಲ್ಲಿದ್ದರು.