ಇತ್ತೀಚಿನ ಸುದ್ದಿ
ಆಂಧ್ರ ಪ್ರದೇಶದ ರಾಜ್ಯಪಾಲರಾಗಿ ಕಾರ್ಕಳ ಮೂಲದ ಜಸ್ಟಿಸ್ ಅಬ್ದುಲ್ ನಜೀರ್ ನೇಮಕ
12/02/2023, 23:36

ಹೊಸದಿಲ್ಲಿ(reporterkarnataka.com): ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
ನ್ಯಾಯಮೂರ್ತಿ ನಜೀರ್ ಈ ವರ್ಷ ಜನವರಿ 4 ರಂದು ನಿವೃತ್ತರಾದರು. ಫೆಬ್ರವರಿ 12 ರ ಭಾನುವಾರದಂದು ರಾಜ್ಯಪಾಲರಾಗಿ ನೇಮಕಗೊಂಡ 6 ಹೊಸ ಮುಖಗಳಲ್ಲಿ ನಾಲ್ವರು ಬಿಜೆಪಿ ನಾಯಕರು ಸಹ ಸೇರಿದ್ದಾರೆ.
ಪ್ರಸ್ತುತ ರಾಜ್ಯಪಾಲರಾಗಿರುವ ಬಿಸ್ವಭೂಷಣ ಹರಿಚಂದನ್ ಅವರ ಸ್ಥಾನವನ್ನು ಅಬ್ದುಲ್ ನಜೀರ್ ತುಂಬಲಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳದವರಾದ ಜಸ್ಟಿಸ್ ನಜೀರ್ ಅವರು ಜನವರಿ 5, 1958 ರಂದು ಜನಿಸಿದರು. 1983ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡರು. ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲಿ ವೃತ್ತಿ ಮಾಡಿದರು, ಅಲ್ಲಿಯೇ 2003 ರಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ಮತ್ತು 2004 ರಲ್ಲಿ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು. 2017 ರಲ್ಲಿ ಬಡ್ತಿ ಪಡೆದ ಅವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾದರು.