ಇತ್ತೀಚಿನ ಸುದ್ದಿ
ವಿಷಾಹಾರ ಸೇವನೆಯಿಂದ 130ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ ಪ್ರಕರಣ: ಮಂಗಳೂರು ಸಿಟಿ ನರ್ಸಿಂಗ್ ಕಾಲೇಜಿಗೆ ರಜೆ ಘೋಷಣೆ
08/02/2023, 23:05

ಮಂಗಳೂರು(reporterkarnataka.com): ಸಿಟಿ ನರ್ಸಿಂಗ್ ಕಾಲೇಜಿನ ಹಾಸ್ಟೇಲ್ ನಲ್ಲಿ ವಿಷಾಹಾರ
ಸೇವನೆಯಿಂದ ಸುಮಾರು 130ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾದ ಪ್ರಕರಣದ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಈ ನಡುವೆ ವಿದ್ಯಾರ್ಥಿಗಳ ಪೋಷಕರು ಕಾಲೇಜಿನ ಆಡಳತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಟಿ ನರ್ಸಿಂಗ್ ಕಾಲೇಜಿನ ಶಕ್ತಿನಗರದ ಕ್ಯಾಂಪಸ್ ಆವರಣದಲ್ಲಿ ಕಾಲೇಜು ಸಿಬಂದಿಯನ್ನು ಪೋಷಕರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ, ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಗಳು ಚೇತರಿಕೆ ಕಂಡಿದ್ದು, ಬಹುತೇಕ ಮಂದಿ ಬಿಡುಗಡೆಯಾಗಿದ್ದಾರೆ. ಅವರನ್ನು ಪೋಷಕರ ಜೊತೆಗೆ ಮನೆಗೆ ಕಳುಹಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಲೇಜಿನ ಆಡಳಿತ ಮಂಡಳಿಯ ಪ್ರಮುಖರು, ನಮಗೆ ನೀರಿನ ಬಗ್ಗೆಯಾಗಲೀ, ಯಾವುದೇ ತೊಂದರೆ ಆಗುತ್ತಿರುವ ಬಗ್ಗೆ ದೂರು ಬಂದಿರಲಿಲ್ಲ. ಸಮಸ್ಯೆ ಇದೆಯೋ ಅದನ್ನು ಸರಿಪಡಿಸುತ್ತೇವೆ. ಸದ್ಯಕ್ಕೆ ಒಂದು ವಾರದ ಮಟ್ಟಿಗೆ ಕಾಲೇಜಿಗೆ ರಜೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕಾಲೇಜಿನಲ್ಲಿ ಅತಿ ಹೆಚ್ಚು ಕೇರಳ ಮೂಲದ ವಿದ್ಯಾರ್ಥಿನಿಯರಿದ್ದು, ಅವರನ್ನು ಮರಳಿ ಊರಿಗೆ ಕಳುಹಿಸಲಾಗಿದೆ. ಎರ್ನಾಕುಲಂ, ಕೊಟ್ಟಾಯಂ, ತ್ರಿಶೂರು ಹೀಗೆ ಹಲವು ಜಿಲ್ಲೆಗಳ ವಿದ್ಯಾರ್ಥಿನಿಯರ ಪೋಷಕರು ಕಾಲೇಜಿಗೆ ಆಗಮಿಸಿದ್ದರು. ಅವರಲ್ಲಿ ಕೇಳಿದರೆ, ಮಕ್ಕಳು ಈ ಹಿಂದೆಯೂ ಫುಡ್ ಸರಿ ಇಲ್ಲ, ನೀರು ಒಳ್ಳೆದಿಲ್ಲ ಅಂತ ಹೇಳುತ್ತಿದ್ದರು. ಅದರ ಬಗ್ಗೆ ಕಾಲೇಜು ಸಿಬಂದಿಯ ಗಮನಕ್ಕೂ ತಂದಿದ್ದೇವೆ. ನಾಲ್ಕು ಬೋರ್ ವೆಲ್ ಗಳಿಂದ ನೀರು ಕೊಡುತ್ತಿದ್ದಾರೆ. ಅದರಿಂದಾಗಿ ತೊಂದರೆ ಆಗಿರಬಹುದು ಎಂದು ಹೇಳಿದ್ದಾರೆ.
ಆದರೆ ಈ ಬಗ್ಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ್ ಅವರಲ್ಲಿ ಕೇಳಿದಾಗ, ನೀರಿನ ಸಮಸ್ಯೆಯಿಂದ ಇದು ಸಂಭವಿಸಿದ್ದು ಆಗಿರಲಿಕ್ಕಿಲ್ಲ ಎಂದಿದ್ದಾರೆ. ನಾವು ಫುಡ್ ಸ್ಯಾಂಪಲನ್ನು ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಿದ್ದೇವೆ. ಅಲ್ಲಿಂದ ವರದಿ ಬರಲು 2-3 ದಿನ ಬೇಕು. ಪುಡ್ಡಲ್ಲಿ ಏನೋ ಸಮಸ್ಯೆ ಆಗಿರಬೇಕು. ಅದರ ವರದಿ ಬಂದ ಬಳಿಕ ನಿಜಾಂಶ ತಿಳಿಯಲಿದೆ ಎಂದಿದ್ದಾರೆ. ಆಹಾರಕ್ಕೆ ಹಲ್ಲಿ ಬಿದ್ದಿರುವ ಸಾಧ್ಯತೆ ಇದೆಯೇ ಎಂದು ಕೇಳಿದ್ದಕ್ಕೆ ಅದು ಆಗಿರಲಿಕ್ಕಿಲ್ಲ ಎಂದರು. ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ಅವರ ಕಡೆಯಿಂದ ತನಿಖೆಯನ್ನು ಪೊಲೀಸರೇ ಮಾಡಬೇಕು. ಸದ್ಯಕ್ಕೆ ಬಹುತೇಕ ಆಸ್ಪತ್ರೆಯಿಂದ ವಿದ್ಯಾರ್ಥಿಗಳು ಆಗಿದ್ದು, ಹೆಚ್ಚಿನವರು ಆತಂಕಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು ಎಂದಿದ್ದಾರೆ.