ಇತ್ತೀಚಿನ ಸುದ್ದಿ
ಚೀನಾದಲ್ಲಿ ಭಾರೀ ಭೂಕಂಪ: ರಿಕ್ಟರ್ ಮಾಪಕದಲ್ಲಿ 6.8 ದಾಖಲು; ಮೃತರ ಸಂಖ್ಯೆ 65ಕ್ಕೆ ಏರಿಕೆ
06/09/2022, 23:14
ಬೀಜಿಂಗ್(reporterkarnataka.com): ಟಿಬೆಟ್ ಸಮೀಪದ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಸೋಮವಾರ ಸಂಭವಿಸಿದ 6.8ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದ್ದು, ಸಾವನ್ನಪ್ಪಿದವರ ಸಂಖ್ಯೆ 65ಕ್ಕೆ ಏರಿದೆ. 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಸಿಚುವಾನ್ ಪ್ರಾಂತ್ಯದ ಲುಡಿಂಗ್ ಕೌಂಟಿಯ ಮುಖ್ಯ ಪಟ್ಟಣದಲ್ಲಿ ಸಂಭವಿಸಿದ ಭೂಕಂಪನದ ಬಳಿಕ ಕನಿಷ್ಠ 16 ಮಂದಿ ನಾಪತ್ತೆಯಾಗಿದ್ದಾರೆ. ಟಿಬೆಟಿಯನ್ ಸ್ವಾಯತ್ತ ಪ್ರಾಂತ್ಯ ಗಾರ್ಜ್‌ನ ಐತಿಹಾಸಿಕ ಪಟ್ಟಣ ಮೋಕ್ಸಿಯಲ್ಲಿ 37 ಮಂದಿ ಮತ್ತು ಶಿಮಿಯಾನ್ ಕೌಂಟಿ ಪ್ರದೇಶದಲ್ಲಿ 28 ಮಂದಿ ಮೃತಪಟ್ಟಿದ್ದಾರೆ. ಭೂಕಂಪನದ ಪರಿಣಾಮ ಪರ್ವತ ಪ್ರದೇಶಗಳಿಂದ ಬಂಡೆಗಳು ಬಿದ್ದು ಸಾಕಷ್ಟು ಮನೆಗಳು ಹಾನಿಗೊಳಗಾಗಿವೆ, ವಿದ್ಯುತ್ ವ್ಯತ್ಯಯ ಉಂಟಾಗಿದೆ.
50 ಸಾವಿರ ಜನರ ಸ್ಥಳಾಂತರ: ಭೂಕಂಪನದ ಪರಿಣಾಮ ಮನೆಗಳನ್ನು ಕಳೆದುಕೊಂಡ 50,000 ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಚರಣೆಯಲ್ಲಿ 6,500 ಜನರು, ನಾಲ್ಕು ಹೆಲಿಕಾಪ್ಟರ್ ಮತ್ತು ಎರಡು ಮಾನವ ರಹಿತ ವೈಮಾನಿಕ ವಾಹನಗಳನ್ನು ನಿಯೋಜಿಸಲಾಗಿದೆ.
ಲಾಕ್‌ಡೌನ್ ಮುಂದುವರಿಕೆ: ಭೂಕಂಪನದ ತೀವ್ರತೆಯ ಪರಿಣಾಮ 200 ಕಿ.ಮೀ.ದೂರದ ಚೆಂಗ್‌ಡು ನಗರದಲ್ಲೂ ಕಟ್ಟಡಗಳು ಅಲುಗಾಡಿದ್ದವು. ಆದಾಗ್ಯೂ 2.1 ಕೋಟಿ ಜನಸಂಖ್ಯೆ ಇರುವ ಈ ನಗರದಲ್ಲಿ ಕಠಿಣ ಕೋವಿಡ್ ಲಾಕ್‌ಡೌನ್ ಮುಂದುವರಿಸಲಾಗಿದೆ. ಜನರು ಮನೆಯಿಂದ ಹೊರಬರದಂತೆ ಅಧಿಕಾರಿಗಳು ನಿರ್ಬಂಧಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.