ಇತ್ತೀಚಿನ ಸುದ್ದಿ
ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿಗರು ನೀಡಿರುವ ಕೊಡುಗೆ ಎಲ್ಲರಿಗೂ ತಿಳಿಯಬೇಕು : ಡಿ.ವೇದವ್ಯಾಸ ಕಾಮತ್
21/06/2022, 12:26
ಮಂಗಳೂರು (Reporter Karnataka)
ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿಗರು ನೀಡಿರುವ ಕೊಡುಗೆ ಎಲ್ಲರಿಗೂ ತಿಳಿಯಬೇಕು. ದೇಶದಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಆರಂಭವಾಗುವ ಮೊದಲೇ ಸುಳ್ಯದಲ್ಲಿ ʼಅಮರ ಸುಳ್ಯ ದಂಗೆʼನಡೆದಿತ್ತು ಎಂದು ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು
‘ಆಜಾದಿ ಕಾ ಅಮೃತ ಮಹೋತ್ಸವ’ ಕಾರ್ಯಕ್ರಮ ಸರಣಿಯ ಭಾಗವಾಗಿ ಮಂಗಳೂರು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳ ಸಂಯುಕ್ತಾಶ್ರಯದಲ್ಲಿ “ಕರಾವಳಿ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ” ಎಂಬ ವಿಷಯದ ಕುರಿತು ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರನ್ನು ಒಟ್ಟುಗೂಡಿಸಿ ಹೋರಾಡಿದ ಕದಂಬಡಿ ರಾಮಗೌಡರ ಸಾಹಸ ಅಚ್ಚರಿಯನ್ನು ಮೂಡಿಸುತ್ತದೆ. ಈ ವಿಚಾರಗಳು ವಿದ್ಯಾರ್ಥಿಗಳಿಗೆ ತಿಳಿಯಬೇಕು, ಎಂದ ಅವರು ಇಂದಿಗೂ ನಾವು ಬ್ರಿಟಿಷರ ಪ್ರಭಾವದಿಂದ ಹೊರಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬ್ರಿಟಿಷರೇ ಬಿಟ್ಟು ಹೋದ ಭಾರತದಲ್ಲಿ ಅವರ ಕುರುಹುಗಳು ವೆನ್ಲಾಕ್, ಲೇಡಿಗೋಷನ್ ಆಸ್ಪತ್ರೆಗಳ ಹೆಸರಿನಲ್ಲಿ ಕಾಣಬಹುದು ಆದರೆ ಆ ಆಸ್ಪತ್ರೆಗೆ ರಾಣಿ ಅಬ್ಬಕ್ಕನಂತಹ ಹೆಸರುಗಳನ್ನು ಇಟ್ಟರೆ ಅಲ್ಲಿಯೂ ಅಂತಹ ಧೈರ್ಯವಂತ ಹೆಣ್ಣುಮಗು ಹುಟ್ಟಬಹುದು ಎಂದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ.ಲೋಕೇಶ್ ಕೆ.ಎಂ ಮಾತನಾಡಿ, ಇತಿಹಾಸ ಬದಲಾಗುವುದಿಲ್ಲ, ಆದರೆ ಇತಿಹಾಸಕಾರನ ದೃಷ್ಟಿಕೊನ ಬದಲಾಗುತ್ತದೆ. ಇತಿಹಾಸ ಓದುವಾಗ ಮನಸ್ಸು ಮುಕ್ತವಾಗಿರಲಿ. ಸಂವಾದವೇ ಇತಿಹಾಸದ ಆತ್ಮ, ಎಂದ ಅವರು, ಮಹನೀಯರ ಜಯಂತಿಗಳಿಗೆ ರಜೆಯನ್ನು ನೀಡಬಾರದು ಬದಲಿಗೆ ಅವರ ಸಾಧನೆಗಳ ಕುರಿತಾಗಿ ಕಾರ್ಯಕ್ರಮ ಮಾಡಬೇಕು ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿ ಸಿಗುತ್ತದೆ ಹಾಗೂ ಇದು ಪ್ರೇರಣದಾಯಕವಾಗಬಹುದು ಎಂದು ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಇತಿಹಾಸ ಓದದವನು ಇತಿಹಾಸ ನಿರ್ಮಿಸಲಾರ. ನಾವು ನಮ್ಮ ಇತಿಹಾಸದ ಬಗ್ಗೆ ಎಚ್ಚೆತ್ತುಕೊಂಡು ಅದನ್ನು ಉಳಿಸಲು, ತಿಳಿಸಲು ‘ಆಜಾದಿ ಕಾ ಅಮೃತ ಮಹೋತ್ಸವ’ ಒಂದು ಉತ್ತಮ ಅವಕಾಶ, ಎಂದರು.
ಮೈಸೂರಿನ ಮಹಾರಾಜ ಸರ್ಕಾರ. ಪಿಯು ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಶಿವಾನಂದ ಸಿಂಧನಕೇರ ಪ್ರಧಾನ ಭಾಷಣ ಮಾಡಿದರು.
ಕಾಲೇಜಿನ ಪ್ರಾಂಶುಪಾಲೆ, ಸಮ್ಮೇಳನದ ಸಂಚಾಲಕಿ ಹಾಗೂ ಸಂಘಟನಾ ಸಮಿತಿಯ ಡಾ.ಸುಭಾಷಿಣಿ ಶ್ರೀವತ್ಸ ಅತಿಥಿಗಳನ್ನು ಸ್ವಾಗತಿಸಿದರು. ಮಧುಶ್ರೀ ಶ್ರೀಯಾನ್ ಕಾರ್ಯಕ್ರಮ ನಿರೂಪಿಸಿದರು. ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಚಂದ್ರಕಲಾ ಮೊದಲಾದವರು ಉಪಸ್ಥಿತರಿದ್ದರು. ಪುತ್ತೂರಿನ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಡಾ.ಪೀಟರ್ ವಿಲ್ಸನ್ ಪ್ರಭಾಕರ್ “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರ ಪಾತ್ರ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಮಂಗಳೂರು ವಿಶ್ವವಿದ್ಯಾನಿಲಯದ ಎಸ್ಡಿಎಂ ತುಳು ಅಧ್ಯಯನ ಪೀಠದ ಸಂಯೋಜಕ ಡಾ.ಮಾಧವ ಎಂ.ಕೆ ಕಾರ್ಯಕ್ರಮ ನಿರ್ವಹಿಸಿದರು.