ಇತ್ತೀಚಿನ ಸುದ್ದಿ
ಲಿವ್ ಇನ್ ಸಂಬಂಧದಲ್ಲಿ ಜನಿಸಿದ ಮಗು ತಂದೆಯ ಆಸ್ತಿಗೆ ಅರ್ಹ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
14/06/2022, 21:02
ಹೊಸದಿಲ್ಲಿ (reporterkarnataka.com): ಪುರುಷ ಮತ್ತು ಮಹಿಳೆಯ ದೀರ್ಘಕಾಲದ ಲಿವ್ ಇನ್(ಸಹಬಾಳ್ವೆ) ಸಂಬಂಧದಲ್ಲಿ ಹುಟ್ಟಿದ ಮಗು ತಂದೆ ಆಸ್ತಿಯಲ್ಲಿ ಪಾಲನ್ನು ಪಡೆಯುವ ಹಕ್ಕು ಹೊಂದಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ತಂದೆ ಮತ್ತು ತಾಯಿ ಮದುವೆಯಾಗಿಲ್ಲ ಎಂಬ ಕಾರಣಕ್ಕೆ ಮಗುವಿಗೆ ಆಸ್ತಿಯಲ್ಲಿ ಹಕ್ಕಿಲ್ಲವೆಂದು ಕೇರಳ ಹೈಕೋರ್ಟ್ ನೀಡಿದ್ದ ತೀರ್ಪು ಅನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಆದರೆ ಮಗುವಿನ ಪೋಷಕರು ಮದುವೆಯಾಗದಿದ್ದರೂ, ಅವರು ದೀರ್ಘಕಾಲದವರೆಗೆ ಪತಿ-ಪತ್ನಿಯಂತೆ ಒಟ್ಟಿಗೆ ವಾಸಿಸುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಡಿಎನ್‌ಎ ಪರೀಕ್ಷೆಯಲ್ಲಿ ಮಗು ತಮ್ಮದೇ ಎಂದು ಸಾಬೀತುಪಡಿಸಿದರೆ, ಆ ಮಗು ತಂದೆಯ ಆಸ್ತಿಗೆ ಅರ್ಹವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಕೇರಳದಲ್ಲಿ ವ್ಯಕ್ತಿಯೊಬ್ಬ ತಂದೆಯ ಆಸ್ತಿಯಿಂದ ವಂಚಿತನಾಗಿದ್ದೇನೆಂದು ಹೈಕೋರ್ಟ್ ಮೆಟ್ಟಿಲೇರಿದ್ದ. ತಾನು ಅಕ್ರಮ ಸಂತಾನ ಎಂದು ಹೇಳುವ ಮೂಲಕ ಆಸ್ತಿ ಹಕ್ಕುಗಳಿಂದ ತನ್ನನ್ನು ಹೊರಹಾಕಲಾಗಿದೆ ಎಂದು ಆತ ವಾದಿಸಿದ್ದ. ಆದರೆ ಆ ವ್ಯಕ್ತಿಯ ಹೆತ್ತವರು ಮದುವೆಯೇ ಆಗಿಲ್ಲ ಎಂದು ಉಲ್ಲೇಖಿಸಿದ್ದ ಕೇರಳ ಹೈಕೋರ್ಟ್, ಆಸ್ತಿಯ ಮೇಲೆ ಆತನಿಗೆ ಯಾವುದೇ ಹಕ್ಕಿಲ್ಲ ಎಂದು ತೀರ್ಪು ನೀಡಿತ್ತು.
ಇದನ್ನು ಪ್ರಶ್ನಿಸಿ ಆತ ಸುಪ್ರೀಂ ಮೆಟ್ಟಿಲೇರಿದ್ದ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್ ಮತ್ತು ವಿಕ್ರಮ್ ನಾಥ್ ಅವರಿದ್ದ ಪೀಠ, ಕೇರಳ ಹೈಕೋರ್ಟ್ ತೀರ್ಪನ್ನು ತಳ್ಳಿ ಹಾಕಿದೆ.