ಇತ್ತೀಚಿನ ಸುದ್ದಿ
ಬುಲ್ಡೋಜರ್ ಪುಡಿಗಟ್ಟುವಾಗ ಆ 60 ವರ್ಷ ಹಳೆಯ ಕಟ್ಟಡ ಗಟ್ಟಿಮುಟ್ಟಾಗಿಯೇ ಇತ್ತು!: ಯಾಕೆಂದ್ರೆ ಆಗ 40% ಕಮಿಷನ್ ಇರಲಿಲ್ಲ!!
24/04/2022, 11:23
ಮಂಗಳೂರು(reporterkarnataka.com): ಅದು 60 ವರ್ಷಗಳ ಹಿಂದೆ ನಿರ್ಮಿಸಿದ ಕಟ್ಟಡ. ಕೆಲವು ಕಡೆ ಸೋರುವುದು ಹಾಗೂ ಇನ್ನು ಕೆಲವು ಕಡೆ ಸಿಮೆಂಟ್ ನಿಂದ ಕಬ್ಬಿಣ ಬೇರ್ಪಟ್ಟಿರುವುದನ್ನು ಬಿಟ್ಟರೆ ಗಟ್ಟಿ ಮುಟ್ಟಾಗಿಯೇ ಇತ್ತು. ಯಾಕೆಂದರೆ ಆ ಕಟ್ಟಡ ನಿರ್ಮಾಣವಾಗುವ ವೇಳೆಗೆ 40% ಕಮಿಷನ್ ವ್ಯವಹಾರ ಇರಲಿಲ್ಲ. ಧನದಾಹಿ ಜನಪ್ರತಿನಿಧಿಗಳು, ಎಂಜಿನಿಯರ್ ಗಳು, ಅಧಿಕಾರಿಗಳು ಅಂದು ಇರಲಿಲ್ಲ.
ಇದು ಮಂಗಳೂರಿನ ಹಳೆಯ, ಪ್ರಸ್ತುತ ನೆಲ ಸಮವಾದ ಸೆಂಟ್ರಲ್ ಮಾರ್ಕೆಟ್ ಕಟ್ಟಡದ ಕಥೆ. 60 ವರ್ಷಗಳ ಹಿಂದೆ ಸಾಕಷ್ಟು ಮುಂದಾಲೋಚನೆಯಿಂದಲೇ ಕಟ್ಟಡ ನಿರ್ಮಿಸಲಾಗಿತ್ತು. ಮೊನ್ನೆ ಮೊನ್ನೆ ಕೊರೊನಾ ಲಾಕ್ ಡೌನ್ ಬರುವ ವರೆಗೂ ತರಕಾರಿ, ಹಣ್ಣು- ಹಂಪಲು ಹಾಗೂ ಇತರ ಸಾಮಗ್ರಿಗಳನ್ನು ಮಾರಲು ಇದನ್ನು ವ್ಯಾಪಾರಿಗಳು ಇದನ್ನು
ಬಳಸುತ್ತಿದ್ದರು.
ರಾತ್ರೋರಾತ್ರಿ ಓಡೋಡಿ ಬಂದ ಬುಲ್ಡೋಜರ್‍ಗಳು ಹಳೆಯ ಸೆಂಟ್ರಲ್ ಮಾರ್ಕೆಟ್ ಕಟ್ಟಡದ ಒಂದೊಂದೇ ಗೋಡೆಗಳನ್ನು ಕೆಡವಿ ಹಾಕಿತ್ತು. ಕಲ್ಲು, ಸಿಮೆಂಟ್ ನ ಬೆಸುಗೆ ಎಲ್ಲವೂ ಗಟ್ಟಿಮುಟ್ಟಾಗಿತ್ತು. ಯಾಕೆಂದರೆ ನೋ ಕಮಿಷನ್, ನೋ ಪರ್ಸಂಟೇಜ್ ಕಾಲದಲ್ಲಿ ಅದು ನಿರ್ಮಾಣವಾದದ್ದು. ಅಂದು ಸೆಂಟ್ರಲ್ ಮಾರ್ಕೆಟ್ ನಿರ್ಮಿಸುವಾಗ ತಾಳಿತ್ತಾಯ ಅವರು ಅದರ ಎಂಜಿನಿಯರ್ ಆಗಿದ್ದರು. ಅಂದಿನ ಕಾಲದ ಪ್ರಖ್ಯಾತ ಎಂಜಿನಿಯರ್ ಅವರು. ತಂತ್ರಜ್ಞಾನದ ಮಹಾ ಮೇಧಾವಿ. ಒಂದು ಪೈಸೆ ಅವ್ಯವಹಾರ ನಡೆಸದ ವ್ಯಕ್ತಿ. ಹಾಗೆ ಬಿಲ್ಡಿಂಗ್ ಕಂಟ್ರಾಕ್ಟರ್ ಆಗಿದ್ದ ಶ್ರೀಧರ ನಾಯಕ್ ಅವರು ಕೂಡ ಬಹಳ ಶುದ್ಧ ಹಸ್ತರು. ತನಗೆ ಸೇರಬೇಕಾದ ಹಣ ಬಿಟ್ಟು ಒಂದು ಪೈಸೆ ಮುಟ್ಟಿದವರಲ್ಲ. ಅಂದಿನ ಕಾಲವೇ ಹಾಗಿತ್ತು. ಜೀವನ ನಡೆಸಲು ಒಂದು ಮೌಲ್ಯ ಇತ್ತು. ಲಂಚ ಎಂಬ ಎಂಜಿಲು ಹಣಕ್ಕೆ ಕೈಯೊಡ್ಡಿ ಮಕ್ಕಳಿಗೆ, ಮೊಮ್ಮಕ್ಕಳಿಗೆ ಅಂತ ಯಾರು ಕಟ್ಟಿ ಇಡುತ್ತಿರಲಿಲ್ಲ. ಅಂದಿನ ಮಂಗಳೂರು ಮುನ್ಸಿಪಾಲಿಟಿ ಅಧ್ಯಕ್ಷರಿಗೆ ನೆಟ್ಟಗೆ ಮೂರು ಜೊತೆ ಡ್ರೆಸ್ ಇರಲಿಲ್ಲ. ಕೌನ್ಸಿಲ್ ಚುನಾವಣೆಗೆ ಕೈ ಕಾಲು ಹಿಡಿದರೂ ಯಾರೂ ಸ್ಪರ್ಧಿಸಲು ಮುಂದೆ ಬರುತ್ತಿರಲಿಲ್ಲ. ಯಾಕೆಂದರೆ ಚುನಾಯಿತ ಕೌನ್ಸಿಲರ್ ತನ್ನ ಜೇಬಿನಿಂದ ಹಣ ಹಾಕಿ ಸಮಾಜ ಸೇವೆ ಮಾಡುವ ಪರಿಸ್ಥಿತಿ ಇತ್ತು. ಈಗ ಕಾಲ ಬದಲಾಗಿದೆ. ಕಾರ್ಪೊರೇಟರ್ ಸ್ಥಾನ ಸ್ಪರ್ಧೆಗೆ ಟಿಕೆಟ್ ಗಾಗಿ ಪೈಪೋಟಿಯೇ ನಡೆಯುತ್ತದೆ. ಗೆದ್ದು ವರ್ಷ ಪೂರ್ತಿಯಾಗುವುದರೊಳಗೆ ಎರಡೆರಡು ಕಾರುಗಳನ್ನು ಕೊಳ್ಳುತ್ತಾರೆ. ಮೇಯರ್ ಅವಧಿ ಮುಗಿಯುವಷ್ಟರಲ್ಲಿ ಹೊಸ ಮನೆ/ಬಂಗ್ಲೆ ರೆಡಿಯಾಗುತ್ತದೆ. ತಿಮಿಂಗಿಲವನ್ನೇ ನುಂಗಬಲ್ಲಂತವರಿದ್ದಾರೆ. ಹಾಗೆ ಬೆರಳೆಣಿಕೆ ಸಂಖ್ಯೆಯಲ್ಲಿ ಒಳ್ಳೆಯ ಕಾರ್ಪೊರೇಟರ್ ಗಳು ಕೂಡ ಇದ್ದಾರೆ. ಇಂದಿನ ಪಾಲಿಕೆಯ ನೌಕರರೂ ಅಷ್ಟೇ. ಕೇವಲ ಎಫ್ ಡಿಸಿ, ಎಸ್ ಡಿಸಿಗಳು ತಮ್ಮ ಸೇವೆಯ ಇಂಟ್ರವಲ್ ಅವಧಿ ತಲುಪುವಷ್ಟರಲ್ಲಿ ಎರಡೆರಡು ಮನೆ ಕಟ್ಟಿದ ಉದಾಹರಣೆಗಳಿವೆ. ಇನ್ನು ಎಂಜಿನಿಯರ್ ಗಳು, ಟೌನ್ ಪ್ಲಾನಿಂಗ್ ಆಫೀಸರ್, ಹೆಲ್ತ್ ಇನ್ಸ್‌ಪೆಕ್ಟರ್, ರೆವೆನ್ಯೂ ಇನ್ಸ್‌ಪೆಕ್ಟರ್ ಮುಂತಾದವರು ರೊಕ್ಕ ಮಾಡುವ ಅವಸ್ಥೆ ಹೇಸಿಗೆ ಹುಟ್ಟುತ್ತದೆ.
ಬೆಳಗ್ಗೆಯೇ ಕುಡಿದು ಬರುವ ಕೆಲವು ಸಿಬ್ಬಂದಿಗಳಿದ್ದಾರೆ. ಜರ್ದ ಜಗಿದು ಪಾಲಿಕೆ ಕಚೇರಿ ಒಳಗೆ ಉಗುಳುವ ಕೊಳಕು
ನೌಕರರಿದ್ದಾರೆ. ಸಿಸಿ ಕ್ಯಾಮೆರಾದ ವ್ಯವಸ್ಥೆ ಇಲ್ಲ. ಕ್ಯಾಮೆರಾ ಇದ್ರೂ ಅದನ್ನು ಮಾನಿಟರ್ ಮಾಡುವ ವ್ಯವಸ್ಥೆ ಇಲ್ಲ. ಪಾಲಿಕೆ ಕಮಿಷನರ್ ತನ್ನ ಸೀಟು ಬಿಟ್ಟು ಏಳುವುದಿಲ್ಲ. ಏಳಲು ಮನಸ್ಸಿದ್ದರೂ ಜನಪ್ರತಿನಿಧಿಗಳು ಬಿಡುವುದಿಲ್ಲ. ಹೆಪ್ಸಿಬಾ ರಾಣಿ, ಹರೀಶ್ ಕುಮಾರ್ ತರಹದ ಖಡಕ್ ಅಧಿಕಾರಿಗಳು ಇಲ್ಲಿನ ಜನಪ್ರತಿನಿಧಿಗಳಿಗೆ ಬೇಡ.
ಪಾಲಿಕೆಯಲ್ಲಿ ಯಾರೇ ಆಡಳಿತಕ್ಕೆ ಬರಲಿ, ಅವರಿಗೆ ಸಿಬ್ಬಂದಿಗಳ ಮೇಲೆ ಯಾವುದೇ ನಿಯಂತ್ರಣವಿಲ್ಲ. ಸಾರ್ವಜನಿಕರು ದೂರು ತೆಗೆದುಕೊಂಡು ಹೋದರೆ ಆ ಸಿಬ್ಬಂದಿ/ಅಧಿಕಾರಿಯನ್ನು ಕರೆದು ಕಣ್ಕಟ್ಟಿಗೆ ಬೈಯುವ ಕೆಲಸ ಮೇಯರ್ ಮಾಡುತ್ತಾರೆ. ಹಂಚಿ ತಿನ್ನೋಣ ಎನ್ನುವ ಅಮೌಖಿಕ ಒಪ್ಪಂದ ಜನಪ್ರತಿನಿಧಿ ಹಾಗೂ ಸಿಬ್ಬಂದಿಗಳ ಏರ್ಪಟ್ಟಿರುವುದು ಇದಕ್ಕೆಲ್ಲ ಕಾರಣ ಎಂದು ಸಾರ್ವಜನಿಕರು ದೂರುತ್ತಾರೆ.
(ಬನ್ನಿ ..ಭ್ರಷ್ಟಾಚಾರ ವಿರುದ್ಧ ಹೋರಾಡೋಣ. ಹಣಕ್ಕಾಗಿ ನಿಮ್ಮನ್ನು ಪೀಡಿಸುವ ಸರಕಾರಿ ಸಿಬ್ಬಂದಿಗಳು / ಅಧಿಕಾರಿಗಳು/ಜನಪ್ರತಿನಿಧಿಗಳಿದ್ದರೆ 7090946914 ನಂಬರ್ ಗೆ ವಾಟ್ಸಾಪ್ ಮಾಡಿ. ನಿಮ್ಮ ಹೆಸರು, ವಿಳಾಸವನ್ನು ಗೌಪ್ಯವಾಗಿ ಇಡಲಾಗುವುದು)