ಇತ್ತೀಚಿನ ಸುದ್ದಿ
ದಿಲ್ಲಿ ಹಿಂಸಾಚಾರ ಪ್ರಕರಣ: ಇಬ್ಬರು ಅಪ್ರಾಪ್ತರು ಸೇರಿದಂತೆ 21 ಮಂದಿ ಬಂಧನ; ಪಿಸ್ತೂಲ್ ವಶ
19/04/2022, 09:55
ಹೊಸದಿಲ್ಲಿ(reporterkarnataka.com): ರಾಷ್ಟ್ರ ರಾಜಧಾನಿ ದೆಹಲಿಯ ಜಹಾಂಗೀರ್ ಪುರಿಯಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರು ಸೇರಿ 21 ಮಂದಿ ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಹನುಮ ಜಯಂತಿ ಮೆರವಣಿಗೆ ವೇಳೆ ಎರಡು ಸಮುದಾಯಗಳ ನಡುವೆ ಹಿಂಸಾಚಾರದಲ್ಲಿ ಸಬ್ ಇನ್ಸ್‌ಪೆಕ್ಟರ್ ಒಬ್ಬರಿಗೆ ಗುಂಡು ಹಾರಿಸಲಾಗಿತ್ತು. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದರು. ಆ ಬಳಿಕ ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಅಪ್ರಾಪ್ತ ಜಹಾಂಗೀರ್ ಪುರಿಯ ಸಿಡಿ ಪಾರ್ಕ್ ನಿವಾಸಿ ಎಂಡಿ ಅಸ್ಲಮ್ ಎಂಬಾತನನ್ನು ವಶಪಡಿಸಿಕೊಳ್ಳಲು ಪೊಲೀಸರು ತೆರಳಿದಾಗ ಆತನ ಬಳಿ ಪಿಸ್ತೂಲ್ ಒಂದು ಪತ್ತೆಯಾಗಿತ್ತು. ಆ ಬಳಿಕ ಪಿಸ್ತೂಲ್ ವಶಪಡಿಸಿಕೊಂಡು ಆತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಕೆಲವು ವಾಹನಗಳಿಗೂ ಬೆಂಕಿ ಹಚ್ಚಲಾಗಿತ್ತು. ಐಪಿಸಿ ಸೆಕ್ಷನ್ 307 (ಕೊಲೆಗೆ ಯತ್ನ) 120 ಬಿ(ಕ್ರಿಮಿನಲ್ ಪಿತೂರಿ) 147 (ಗಲಭೆ) ಶಸ್ತ್ರಾಸ್ತ್ರ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಏನಿದು ಘಟನೆ?: ದೆಹಲಿಯ ವಾಯುವ್ಯ ಭಾಗದಲ್ಲಿರುವ ಜಹಾಂಗೀರ್ ಪುರಿಯಲ್ಲಿ ಹನುಮ ಜಯಂತಿ ಶೋಭಾಯಾತ್ರೆಯ ವೇಳೆ ಕಲ್ಲು ತೂರಾಟ ನಡೆದಿತ್ತು. ಇದರಿಂದ ಆರಂಭಗೊಂಡ ಎರಡು ಸಮುದಾಯಗಳ ಘರ್ಷಣೆ ಹಿಂಸಾಚಾರಕ್ಕೆ ತಿರುಗಿತ್ತು. ಬಳಿಕ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಜಹಾಂಗೀರ್ ಪುರಿ ಘಟನೆಯ ನಂತರ ರಾಜ್ಯದಲ್ಲಿ ಆಯಾ ಜಿಲ್ಲೆಗಳ ಸೂಕ್ಷ್ಮ ಪ್ರದೇಶಗಳ ಮೇಲೆ ತೀವ್ರ ನಿಗಾ ವಹಿಸಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು.














