ಇತ್ತೀಚಿನ ಸುದ್ದಿ
ಸಂತೋಷ್ ಗೊತ್ತೇ ಇಲ್ಲ ಅಂದ ಈಶ್ವರಪ್ಪ ಮಾನನಷ್ಟ ಮೊಕದ್ದಮೆ ಯಾರ ಮೇಲೆ ಹಾಕಿದ್ದು?: ಸಿದ್ದರಾಮಯ್ಯ ಪ್ರಶ್ನೆ
17/04/2022, 21:46
ಚಿಕ್ಕಮಗಳೂರು(reporterkarnataka.com): ಗುತ್ತಿಗೆದಾರ ಸಂತೋಷ್ ಪಾಟೀಲ್ ಯಾರೆಂದು ಗೊತ್ತಿಲ್ಲ ಅಂದ ಮೇಲೆ ಮಾನನಷ್ಟ ಮೊಕದ್ದಮೆ ಯಾರ ಮೇಲೆ ಹಾಕಿದ್ದಪ್ಪಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಸಚಿವ ಈಶ್ವರಪ್ಪ ಅವರನ್ನು ಪ್ರಶ್ನಿಸಿದ್ದಾರೆ.
ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾದ ಬೆಳಗಾವಿ ಮೂಲದ ಕಂಟ್ರಾಕ್ಟರ್ ಸಂತೋಷ್ ಪಾಟೀಲ್ ಯಾರೆಂದು ನನಗೆ ಗೊತ್ತೇ ಇಲ್ಲ ಎಂದು ಈಶ್ವರಪ್ಪ ಹೇಳಿದ್ದರು. ಹಾಗಾದರೆ ಮಾನನಷ್ಟ ಮೊಕದ್ದಮೆ ಯಾರ ಮೇಲೆ ಹಾಕಿದಪ್ಪಾ? ಹೇಗೆ ಹಾಕಿದಪ್ಪಾ ಎಂದು ವ್ಯಂಗ್ಯವಾಡಿದರು.
ಸಂತೋಷ್ ಪಾಟೀಲ್ ಯಾರೆಂದು ನನಗೆ ಗೊತ್ತೆ ಇಲ್ಲ ಎಂದಿದ್ದರು. ಆಗ ಮಾಧ್ಯಮ ಮಿತ್ರರು ಅವರ ಫೋಟೋವನ್ನು ಹಾಕಿ-ಹಾಕಿ ತೋರಿಸಿದ್ದರು. ಸಂತೋಷ್ ಪಾಟೀಲ್ ಯಾರೆಂದು ಗೊತ್ತೆ ಇಲ್ಲ ಎಂದ ಮೇಲೆ ಅವರ ಮೇಲೆ ಡಿಫಾರ್ಮೇಷನ್ ಕೇಸ್ ಹೇಗೆ ಹಾಕಿದ್ದಪ್ಪಾ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಭ್ರಷ್ಟರನ್ನು ಭ್ರಷ್ಟರು ರಕ್ಷಣೆ ಮಾಡುತ್ತಿದ್ದಾರೆ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದರು.