ಇತ್ತೀಚಿನ ಸುದ್ದಿ
ಬೊಮ್ಮಾಯಿ ಸಂಪುಟ ಶೀಘ್ರ ವಿಸ್ತರಣೆ?: ದ.ಕ. ಜಿಲ್ಲೆಗೆ ಮತ್ತೆ ಸಚಿವ ಸ್ಥಾನ?: ಹಾಗಾದರೆ ಯಾರಿಗೆ ಒಲಿಯಲಿದೆ ಈ ಬಾರಿ ಮಂತ್ರಿಗಿರಿ?
21/03/2022, 18:06

ರಾಜೀವಿಸುತ ಬೆಂಗಳೂರು
info.reporterkarnataka@gmail.com
ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರಕಾರದ ಸಚಿವ ಸಂಪುಟ ವಿಸ್ತರಣೆಗೆ ವೇದಿಕೆ ಸಜ್ಜುಗೊಂಡಿದೆ. ಪಂಚ ರಾಜ್ಯ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ವಿ ಸಾಧಿಸಿರುವ ಬಿಜೆಪಿ, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಎಲ್ಲ ತಯಾರಿ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಕರಾವಳಿ ಜಿಲ್ಲೆಗೆ ಮತ್ತೆ ಪ್ರಾತಿನಿಧ್ಯ ನೀಡಲು ತಯಾರಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಮತ್ತೊಬ್ಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಹಾಗಾದರೆ ಯಾರಿಗೆ ಆ ಮಂತ್ರಿ ಯೋಗ ಒದಗಿಬರಲಿದೆ ಎನ್ನುವುದನ್ನು ನೋಡೋಣ.
ಯುಗಾದಿ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಪ್ಲಾನ್ ಹಾಕಲಾಗಿದೆ. ಪಂಚ ರಾಜ್ಯ ಚುನಾವಣೆಯಲ್ಲಿ 4 ರಾಜ್ಯಗಳು ಮತ್ತೆ ಕಮಲದ ತೆಕ್ಕೆಗೆ ಜಾರಿರುವುದು ಪಕ್ಷದ ಹೈಕಮಾಂಡ್ ಗೆ ಟಾನಿಕ್ ನೀಡಿದಂತಾಗಿದೆ. ಆದರೆ ಕರ್ನಾಟಕದ ರಾಜಕೀಯ ಸ್ಥಿತಿ ಭಿನ್ನವಾಗಿದೆ. ಸಿದ್ದರಾಮಯ್ಯ ನೇತೃತ್ವದ ಕೈ ಪಡೆಯನ್ನು ಅಷ್ಟು ಸುಲಭದಲ್ಲಿ ಬಗ್ಗುಬಡಿಯುವುದು ಕಷ್ಟ ಸಾಧ್ಯ ಎನ್ನುವುದು ಬಿಜೆಪಿ ಹೈಕಮಾಂಡಿಗೂ ಗೊತ್ತು. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಉಪ ಚುನಾವಣೆ ಹಾಗೂ ಸ್ಥಳೀಯಾಡಳಿತ ಚುನಾವಣೆಯಲ್ಲಿ ಬಿಜೆಪಿ ಕಳಪೆ ಪ್ರದರ್ಶನ ನೀಡಿದೆ. ಪಕ್ಷದ ಹೈಕಮಾಂಡ್ ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಪರಿಸ್ಥಿತಿಯ ಅವಲೋಕನ ನಡೆಸುತ್ತಿದೆ. ಉಪ ಚುನಾವಣೆಯಲ್ಲಾದ ಹಿನ್ನಡೆ ಮತ್ತು ಮೇಕೆದಾಟು ಕಾಂಗ್ರೆಸ್ ಪಾದಯಾತ್ರೆಯಿಂದ ತತ್ತರಿಸಿರುವ ಬಿಜೆಪಿಗೆ ಪಂಚರಾಜ್ಯದ ಗೆಲುವು ಸ್ವಲ್ಪ ಮಟ್ಟಿಗೆ ಚೈತನ್ಯ ನೀಡಿದೆ. ಆದರೆ ಮುಂದಿನ ವರ್ಷ ಏಪ್ರಿಲ್, ಮೇ ತಿಂಗಳಲ್ಲಿ ನಡೆಯಲಿರುವ ಚುನಾವಣೆಗೆ ತನಕ ಗೆಲುವಿನ ಹುಮ್ಮನ್ನಸ್ಸನ್ನು ಜನರಲ್ಲಿ ಹಿಡಿದಿಟ್ಟುಕೊಳ್ಳುವಂತೆ ಮಾಡುವುದು ಸಾಧ್ಯವಿಲ್ಲ. ಅದಕ್ಕಾಗಿ ಬೇರೆ ಕಾರ್ಯತಂತ್ರವನ್ನು ಪಕ್ಷ ಅನುಸರಿಸಲಿದೆ. ಅದರ ಪ್ರಕಾರ ಕೆಲವು ಜಿಲ್ಲೆಗಳಿಗೆ ಇನ್ನಷ್ಟು ಪ್ರಾತಿನಿಧ್ಯ ನೀಡುವುದಾಗಿದೆ. ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕೂಡ ಸೇರಿದೆ.
ಜನತಾ ದಳದ ಭದ್ರಕೋಟೆ ಎನಿಸಿರುವ ಹಾಸನದಲ್ಲಿ ಬಿಜೆಪಿಯನ್ನು ಇನ್ನಷ್ಟು ಬಲಪಡಿಸಲು ಮೊದಲ ಬಾರಿ ಗೆದ್ದ ಅಲ್ಲಿನ ಶಾಸಕ ಪ್ರೀತಮ್ ಗೌಡ, ವಿಜಯಪುರದಿಂದ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್, ಹೊನ್ನಾಳಿಯಿಂದ ರೇಣುಕಾಚಾರ್ಯ ಅವರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂದು ತಿಳಿದು ಬಂದಿದೆ. ಹಾಗಾದರೆ, ದಕ್ಷಿಣ ಕನ್ನಡ ಜಿಲ್ಲೆಯಿಂದ ಮೊದಲ ಬಾರಿಗೆ ಆಯ್ಕೆಯಾದ ಶಾಸಕರಲ್ಲಿ ಯಾರು ಸಚಿವರಾಗಲಿದ್ದಾರೆ? ಆ ಯೋಗ ಯಾರಿಗೆ ಕೂಡಿಬರಲಿದೆ ಎಂಬುವುದನ್ನು ನೋಡೋಣ.
ಕರಾವಳಿಯ ಪ್ರಮುಖ ಜಿಲ್ಲೆಯಾದ ದ.ಕ. ದಿಂದ ಆಯ್ಕೆಯಾದ 7 ಮಂದಿ ಬಿಜೆಪಿ ಶಾಸಕರಲ್ಲಿ ಅಂಗಾರ ಅವರನ್ನು ಬಿಟ್ಟರೆ ಉಳಿದವರೆಲ್ಲ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದವರು ಆಗಿದ್ದಾರೆ. ಅದಲ್ಲದೆ ಅಂಗಾರ ಈಗಾಗಲೇ ಸಚಿವ ಹುದ್ದೆಯನ್ನು ಅಲಂಕರಿಸಿಯಾಗಿದೆ. ಇನ್ನುಳಿದವರು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಡಿ. ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್ ಹಾಗೂ ಹರೀಶ್ ಪೂಂಜ ಅವರು. ಈ 6 ಮಂದಿಯಲ್ಲೇ ಒಬ್ಬರು ಸಚಿವರಾಗುವ ಸಾಧ್ಯತೆ ಇದೆ. ಆದರೆ ಪಕ್ಷ ಸುಮ್ಮನೆ ಒಬ್ಬರನ್ನು ಸಚಿವರನ್ನಾಗಿ ಮಾಡೊಲ್ಲ. ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿ ಮಾಡುವುದರ ಜತೆಗೆ ಪಕ್ಷ ಸಂಘಟನೆಯಲ್ಲಿ ದುಡಿದ ಶಾಸಕನನ್ನು ಮಂತ್ರಿ ಸ್ಥಾನಕ್ಕೆ ಏರಿಸಲಿದೆ. ಹಾಗಾದರೆ, ಕ್ಷೇತ್ರದ ಅಭಿವೃದ್ಧಿ ಜತೆಗೆ ಪಕ್ಷ ಸಂಘಟನೆಯಲ್ಲಿ ಅನುಪಮ ಕೊಡುಗೆ ನೀಡಿದ ಆ ಶಾಸಕರು ಯಾರು ಎಂಬ ಕುತೂಹಲ ನಿಮ್ಮಲ್ಲಿ ಇರಬಹುದು. ಹಾಗಾದರೆ ಮುಂದಕ್ಕೆ ಓದಿ.
ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಯಾವುದೇ ನಿರ್ಧಾರಕ್ಕೆ ಬರುವುದು. ಇಲ್ಲಿ ಯಾರದ್ದೇ ಮಾತು, ಯಾರದ್ದೇ ಪ್ರಭಾವ ನಡಿಯೋದಿಲ್ಲ. ಮೌಲ್ಯಮಾಪನಕ್ಕಾಗಿಯೇ ಹೈಕಮಾಂಡ್ ಬಳಿ ಎರಡು ಟೀಮ್ ಗಳಿವೆ. ಅದು ಸದ್ದಿಲ್ಲದೆ ಕೆಲಸ ಮಾಡುತ್ತಲೇ ಇರುತ್ತದೆ. ಅಂತಹ ಮೌಲ್ಯಾಮಾಪನದ ಟೀಮ್ ಒಬ್ಬ ಯಂಗ್, ಎನರ್ಜಿಟಿಕ್ ಶಾಸಕನಿಗೆ ಮಂತ್ರಿ ಪದವಿ ಕಟ್ಟಲು ಮುಂದಾಗಿದೆ. ಅದು ಬೇರೆ ಯಾರೂ ಅಲ್ಲದೆ ಅರೆ ಮಲೆನಾಡಿನಿಂದಾವೃತ್ತವಾಗಿರುವ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಆಗಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ನಡೆಯುವ ವರೆಗೂ ಹರೀಶ್ ಪೂಂಜ ಬಗ್ಗೆ ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಸಿದ್ದರಾಮಯ್ಯ ಅವರ ಅಧಿಕಾರದ ಅವಧಿಯಲ್ಲಿ ಚಿತ್ರನಟಿ ರಮ್ಯಾ ಮಂಗಳೂರಿಗೆ ಬಂದಾಗ ಬಿಜೆಪಿ ಆಯೋಜಿಸಿದ ಪ್ರತಿಭಟನೆಯ ನೇತೃತ್ವವನ್ನು ಇದೇ ಹರೀಶ್ ಪೂಂಜ ಅವರಿಗೆ ವಹಿಸಲಾಗಿತ್ತು.
ರಮ್ಯಾ ಅವರ ಕಾರು ತಡೆದು ನಡೆಸಿದ ಪ್ರತಿಭಟನೆಯಲ್ಲಿ ಪೂಂಜ ಅವರು ಇಡೀ ಜಿಲ್ಲೆಯಲ್ಲಿ ಬೆಳಕಿಗೆ ಬಂದರು. ನಂತರ ಹರೀಶ್ ಪೂಂಜ ಅವರು ಹಿಂತಿರುಗಿ ನೋಡಲೇ ಇಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಾಸಕರಾಗಿಯೇ ಬಿಟ್ಟರು. ಮೊನ್ನೆ ಮೊನ್ನೆ ಪಂಜಾಬ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತಾ ವೈಫಲ್ಯ ನಡೆಯಿತೆನ್ನಲಾದ ಪ್ರಕರಣದ ಬಳಿಕ ಹರೀಶ್ ಪೂಂಜ ಅವರು ಪ್ರಧಾನಿ ಹೆಸರಿನಲ್ಲಿ ಧರ್ಮಸ್ಥಳದಲ್ಲಿ ಯಾಗ ನಡೆಸಿ ಪ್ರಸಾದವನ್ನು ಪ್ರಧಾನಿಗೆ ತಲುಪಿಸಿದ್ದರು.